ಬೆಂಗಳೂರು : ಆಧಾರ್ ಕಾರ್ಡ್ ಪಡೆಯಲು ಹೊಸ ಸೇವೆ!

ಮಾದರಿ ಆಧಾರ್ ನೋಂದಣಿ ಕೇಂದ್ರ, ಆಧಾರ್ ಕಾಲ್ ಸೆಂಟರ್, ಮುಂಗಡ ಕಾಯ್ದರಿಸುವ ಆಧಾರ್ ನೋಂದಣಿ ಕೇಂದ್ರಗಳು, ಇ-ಆಧಾರ್ ಸೇವೆಗಳನ್ನು ಗುರುವಾರ ಸಂಜೆ 4.30ಕ್ಕೆ ಸಿಎಂ ಸಿದ್ದರಾಮಯ್ಯ ಮಲ್ಲೇಶ್ವರಂನಲ್ಲಿ ಉದ್ಘಾಟನೆ ಮಾಡಲಿದ್ದಾರೆ.
ಪೂರ್ವ ನೋಂದಣಿ ಕೇಂದ್ರಗಳು : ಬೆಂಗಳೂರು ನಗರದಲ್ಲಿ ಉದ್ಯೋಗಕ್ಕೆ ತೆರಳುವ ಜನರು ಸಮಯ ಸಿಗುವುದಿಲ್ಲ, ಆಧಾರ್ ಗಾಗಿ ಗಂಟೆಗಟ್ಟಲೇ ನೋಂದಣಿ ಕೇಂದ್ರದ ಮುಂದೆ ನಿಲ್ಲಬೇಕು ಎಂದು ದೂರುತ್ತಿದ್ದರು. ಈ ಸಮಸ್ಯೆ ನಿವಾರಿಸಲು ಪೂರ್ವ ನಿಗದಿ ನೋಂದಣಿ ಕೇಂದ್ರ ಸ್ಥಾಪಿಸಲಾಗಿದೆ.(ಏನಿದು ಪೂರ್ವ ನೋಂದಣಿ ಕೇಂದ್ರಗಳು)
ಎಲ್ಲೆಲ್ಲಿ ಕೇಂದ್ರಗಳು : ಪದವಿ ಪೂರ್ವ ಶಿಕ್ಷಣ ಮಂಡಳಿ (18 ನೇ ಅಡ್ಡ ರಸ್ತೆ ಮಲ್ಲೇಶ್ವರಂ), ಬಿಬಿಎಂಪಿ ಕೇಂದ್ರ ಕಚೇರಿ, ಹಾಕಿ ಕ್ರೀಡಾಂಗಣ (ನಂಜಪ್ಪ ವೃತ್ತ), ಕಂಠೀರವ ಕ್ರೀಡಾಂಗಣ, ಸಿಂಥಸಿಸ್ ರಸ್ತೆ (ಎಲೆಕ್ಟ್ರಾನಿಕ್ ಸಿಟಿ), ಕಬ್ಬಡಿ ಕ್ರೀಡಾಂಗಣ (ವಿದ್ಯಾಪೀಠ ವೃತ್ತ), ರಾಮಮಂದಿರ (ರಾಜಾಜಿನಗರ).
ಇ-ಆಧಾರ್ : ಬೆಂಗಳೂರು ಒನ್ ಕೇಂದ್ರಗಳ ಮೂಲಕ ಇ ಆಧಾರ್ ಸೇವೆಯನ್ನು ಪ್ರಾರಂಭಿಸಲಾಗುತ್ತಿದೆ. ನೀವು ಆಧಾರ್ ನೋಂದಣಿ ಮಾಡಿಸಿದ್ದರೆ, ನಿಮ್ಮ ಆಧಾರ್ ಸ್ಥಿತಿಗತಿಯ ಬಗ್ಗೆ ಇ ಆಧಾರ್ ಸೇವೆಗಳ ಮೂಲಕ ನೀವು ಆಯ್ದ ಬೆಂಗಳೂರು ಒನ್ ಕೇಂದ್ರಕ್ಕೆ ಭೇಟಿ ನೀಡಿ ಮಾಹಿತಿ ಪಡೆಯಬಹುದು. ಇದು ಉಚಿತವಾದ ಸೇವೆಯಲ್ಲ.
ಮಾದರಿ ಕೇಂದ್ರಗಳು : ರವೀಂದ್ರ ಕಲಾಕ್ಷೇತ್ರ, ರಾಜರಾಜೇಶ್ವರಿ ಬಿಬಿಎಂಪಿ ಕಚೇರಿ ಮತ್ತು ಬಾಲಕೃಷ್ಣ ರಂಗಮಂದಿರ, ವಿವೇಕಾನಂದ ರಂಗಮಂದಿರ ಶಾಲಿನಿ ಪಾರ್ಕ್ ಜಯನಗರ, ಮೇಯೋಹಾಲ್ ನಲ್ಲಿ ಆಧಾರ್ ನೋಂದಣಿಗಾಗಿ ಮಾದರಿ ಕೇಂದ್ರಗಳನ್ನು ಸ್ಥಾಪಿಸಲಾಗಿದೆ.
ಬೇಗೂರು ರಸ್ತೆ ಬಿಬಿಎಂಪಿ ಕಚೇರಿ, ರಾಜಾಜಿಜನಗರ ಬಿಬಿಎಂಪಿ ಕಚೇರಿ, ಬಾಗಲಗುಂಟೆ ಬಿಬಿಎಂಪಿ ಕಚೇರಿ, ನೇತಾಜಿ ವೃತ್ತ (ಮತ್ತಿಕೆರೆ) ಬಿಬಿಎಂಪಿ ಕಚೇರಿ, ರೋಟರಿ ಸಭಾಂಗಣ (13ನೇ ರಸ್ತೆ ಮಲ್ಲೇಶ್ವರಂ)ನಲ್ಲಿಯೂ ಮಾದರಿ ಕೇಂದ್ರಗಳನ್ನು ತೆರೆಯಲಾಗಿದೆ.
ಕಾಲ್ ಸೆಂಟರ್ : ಬೆಂಗಳೂರು ಮಹಾನಗರದ ಆಧಾರ್ ನೋಂದಣಿ ಕೇಂದ್ರಗಳು ಮತ್ತು ಆಧಾರ್ ಗೆ ಸಂಬಂಧಿಸಿದ ವಿಷಯಗಳನ್ನು ತಿಳಿಯಲು ಕಾಲ್ ಸೆಂಟರ್ ನೆರವಾಗಲಿದೆ. ಸಾರ್ವಜನಿಕರು 44554499, 9342700100 ನಂಬರ್ ಗೆ ಕರೆ ಮಾಡಿ ಮಾಹಿತಿ ಪಡೆಯಬಹುದು.












Click it and Unblock the Notifications