ನಮ್ಮ ಮೆಟ್ರೋ ಎರಡನೇ ಹಂತಕ್ಕೆ ಒಪ್ಪಿಗೆ ಸಿಕ್ತು

ಮಂಗಳವಾರ ಸಾರ್ವಜನಿಕ ಹೂಡಿಕೆ ಮಂಡಳಿ (ಪಿಐಬಿ) ಸಭೆ ನಡೆಯಿತು. ಸಭೆಯಲ್ಲಿ ಬೆಂಗಳೂರಿನ ಬಹು ನಿರೀಕ್ಷಿತ 72 ಕಿ.ಮೀ. ಮಾರ್ಗದ ಮೆಟ್ರೋ 2ನೇ ಹಂತದ ಯೋಜನೆಗೆ ಒಪ್ಪಿಗೆ ನೀಡಲಾಗಿದೆ. ಇದರಿಂದಾಗಿ ಬೆಂಗಳೂರಿಗರ ಬಹುದಿನಗಳ ಕನಸು ಈಡೇರಿದಂತಾಗಿದೆ.
ಷರತ್ತುಗಳೇನು : ಕೇಂದ್ರ ನಗರಾಭಿವೃದ್ಧಿ ಇಲಾಖೆ ಯೋಜನೆಗೆ ಅಗತ್ಯ ಹಣಕಾಸಿನ ನೆರವು ಸಾಧ್ಯವಿದೆ ಎಂದು ಕೇಂದ್ರ ಸರ್ಕಾರಕ್ಕೆ ಮನವರಿಕೆ ಮಾಡಿಕೊಡಬೇಕು ಮತ್ತು ಎರಡು ಹೊಸ ಮಾರ್ಗಗಳಿಗೆ ಹೂಡುವ ಬಂಡವಾಳಕ್ಕೆ ವಾರ್ಷಿಕ ಶೇ. 6.5 ರಷ್ಟು ಮರುಪಾವತಿಯ ಖಾತರಿಯನ್ನು ಬಿಎಂಆರ್ ಸಿಎಲ್ ನೀಡಬೇಕು ಎಂಬ ಷರತ್ತುಗಳನ್ನು ವಿಧಿಸಲಾಗಿದೆ.
ಇದುವರೆಗಿನ ಮೆಟ್ರೋ ಯೋಜನೆಗಳಿಗೆ ಆಂತರಿಕ ಮರುಪಾವತಿ (ಫೈನಾನ್ಷಿಯಲ್ ಇಂಟರ್ ನಲ್ ರೇಟ್ ರಿಟರ್ನ್) ಶೇ 6 ರಷ್ಟಿತ್ತು. ಕರ್ನಾಟಕದ ಯೋಜನೆಗೆ ಶೇ. 6.5ಕ್ಕೆ ಏರಿಸುವ ಮೂಲಕ ಹೊಸ ಬಗೆಯ ವಿಶ್ಲೇಷಣೆಗಳಿಗೆ ಪಿಐಬಿ ಸಭೆ ನಾಂದಿ ಹಾಡಿದೆ ಎಂದು ವಿಶ್ಲೇಷಿಸಲಾಗುತ್ತಿದೆ.
ವೆಚ್ಚವೆಷ್ಟು : ಬೆಂಗಳೂರಿನಲ್ಲಿ ಈಗಾಗಲೇ 42.3 ಕಿ.ಮೀ. ಮೊದಲನೇ ಹಂತದ ಮೆಟ್ರೋ ರೈಲು ಮಾರ್ಗದ ಕಾಮಗಾರಿ ನಡೆಯುತ್ತಿದೆ. ಎರಡನೇ ಹಂತದಲ್ಲಿ 72. ಕಿ.ಮೀ. ರೈಲು ಮಾರ್ಗ ನಿರ್ಮಾಣಕ್ಕೆ 26,405 ಕೋಟಿ ರೂ. ವೆಚ್ಚವಾಗಬಹುದು ಎಂದು ಅಂದಾಜಿಸಲಾಗಿದೆ.
ಕೇಂದ್ರ ಸರ್ಕಾರದ ಅನುಮತಿಯಿಂದಾಗಿ ಮುಂದಿನ ಕೆಲವು ತಿಂಗಳಲ್ಲಿ ನಮ್ಮ ಮೆಟ್ರೋ ಎರಡನೇ ಹಂತದ ಕಾಮಗಾರಿ, ಆರ್.ವಿ. ರಸ್ತೆಯಿಂದ ಬೊಮ್ಮಸಂದ್ರದ ವರೆಗೆ, ಬನ್ನೇರುಘಟ್ಟ ರಸ್ತೆಯ ಐಐಎಂಬಿಯಿಂದ ನಾಗವಾರ ವರೆಗೆ ಆರಂಭವಾಗುವ ನಿರೀಕ್ಷೆ ಇದೆ.












Click it and Unblock the Notifications