ಭಾರ್ತಿ ಏರ್ ಟೆಲ್ ಗೆ 650 ಕೋಟಿ ರು ದಂಡ

2003 ಹಾಗೂ 2005ರ ನಡುವೆ 13 ಸೇವಾ ಪ್ರದೇಶಗಳಲ್ಲಿ ರೋಮಿಂಗ್ ನಿಯಮಗಳನ್ನು ಉಲ್ಲಂಘಿಸಿರುವುದು ಕಂಡು ಬಂದಿದೆ. ಇದಕ್ಕಾಗಿ 650 ಕೋಟಿ ರು ದಂಡ ತೆರಬೇಕು ಎಂದು ದೂರಸಂಪರ್ಕ ಇಲಾಖೆ ಪ್ರಕಟಿಸಿದೆ. ಭಾರ್ತಿ ಏರ್ ಟೆಲ್ ಸಂಸ್ಥೆಗೆ ದಂಡ ವಿಧಿಸುವುದಕ್ಕೆ ಟೆಲಿಕಾಂ ಸಚಿವ ಕಪಿಲ್ ಸಿಬಲ್ ಸಮ್ಮತಿ ಸೂಚಿಸಿದ್ದಾರೆ.
ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಕರೆ (subscriber local dialing) ಗಳನ್ನು ಸ್ಥಳೀಯ ಕರೆಗಳ ಮಾರ್ಗಕ್ಕೆ ಸಂಪರ್ಕಿಸಿದ ಆರೋಪ ಭಾರ್ತಿ ಏರ್ ಟೆಲ್ ಮೇಲೆ ಹೊರೆಸಲಾಗಿತ್ತು.
2003ರಲ್ಲೇ ಈ ಬಗ್ಗೆ ಎಚ್ಚರಿಕೆ ನೀಡಲಾಗಿತ್ತು. ಅದರೆ, ಭಾರ್ತಿ ಸಂಸ್ಥೆ ಎಸ್ ಎಲ್ ಡಿಯನ್ನು 2005ವರೆಗೂ ಮುಂದುವರಿಸಿದಕ್ಕಾಗಿ ದಂಡ ವಿಧಿಸಲಾಗಿದೆ. ಇದರಿಂದ ಸರ್ಕಾರಿ ಸ್ವಾಮ್ಯದ ಭಾರತ್ ಸಂಚಾರ್ ನಿಗಮ್ ಲಿ(ಬಿಎಸ್ಎನ್ಎಲ್) ಸಂಸ್ಥೆ ಭಾರಿ ನಷ್ಟವಾಗಿತ್ತು ಎನ್ನಲಾಗಿದೆ. ಬಾಕಿ ಪಾವತಿಸುವಂತೆ ಭಾರ್ತಿ ಏರ್ ಟೆಲ್ ಸಂಸ್ಥೆಗೆ ಒಂದು ವಾರದೊಳಗೆ ಡಿಮ್ಯಾಂಡ್ ನೋಟಿಸ್ ಕಳಿಸಲಾಗುತ್ತದೆ ಎಂದಿದ್ದಾರೆ.
ಏರ್ ಟೆಲ್ ಸ್ಥಿತಿ ಗತಿ: ಭಾರತದ ಟೆಲಿಕಾಂ ಕ್ಷೇತ್ರದ ಅಗ್ರಗಣ್ಯ ಸಂಸ್ಥೆ ಭಾರ್ತಿ ಏರ್ ಟೆಲ್ ತನ್ನ ಮೂರನೇ ತ್ರೈಮಾಸಿಕದಲ್ಲಿ ಭರ್ಜರಿ ಹೊಡೆತ ಅನುಭವಿಸಿತ್ತು.
ಇತ್ತೀಚಿನ ತ್ರೈಮಾಸಿಕಗಳಲ್ಲಿ ಮಾರುಕಟ್ಟೆಯಲ್ಲಿ ತೀವ್ರ ಪೈಪೋಟಿ ಇದೆ. ದರ ಇಳಿಕೆ ಸಮರದ ಜೊತೆಗೆ ಉತ್ಪಾದನಾ ವೆಚ್ಚವನ್ನು ಸರಿದೂಗಿಸಬೇಕಿದೆ. ಮುಂಬರುವ ತ್ರೈಮಾಸಿಕಗಳಲ್ಲಿ ಉತ್ತಮ ನಿರ್ವಹಣೆ ತೋರುವ ಭರವಸೆ ಇದೆ ಎಂದು ಭಾರ್ತಿ ಏರ್ ಟೆಲ್ ನ ಚೇರ್ಮನ್ ಹಾಗೂ ವ್ಯವಸ್ಥಾಪಕ ನಿರ್ದೇಶಕ ಸುನಿಲ್ ಭಾರ್ತಿ ಮಿತ್ತಲ್ ಹೇಳಿದ್ದರು.
ಭಾರತದ ಟೆಲಿಕಾಂ ಕ್ಷೇತ್ರದ ಭಾರ್ತಿ ಏರ್ ಟೆಲ್ ಸಂಸ್ಥೆಯನ್ನು ಜಾಗತಿಕವಾಗಿ ನಾಲ್ಕನೇ ಅತಿದೊಡ್ಡ ಮೊಬೈಲ್ ಸೇವಾ ಸಂಸ್ಥೆ ಸ್ಥಾನಕ್ಕೇರಿಸಿದ್ದ ಸಿಇಒ ಸಂಜಯ್ ಕಪೂರ್ ಇತ್ತೀಚೆಗೆ ಸಂಸ್ಥೆ ತೊರೆದಿದ್ದು ಮುಳುವಾಗಿದೆ.ಸಂಜಯ್ ಕಪೂರ್ ಅವರ ಸ್ಥಾನವನ್ನು ಗೋಪಾಲ್ ವಿಠಲ್ ತುಂಬಿದ್ದರು.
1998 ರಲ್ಲಿ ಭಾರ್ತಿ ಏರ್ ಟೆಲ್ ಸೇರಿದ ಸಂಜಯ್ ಅವರು 2006ರ ಹೊತ್ತಿಗೆ ದೇಶದ ಅಗ್ರಗಣ್ಯ ಟೆಲಿಕಾಂ ಸಂಸ್ಥೆಯನ್ನಾಗಿಸಿದರು. 2ಜಿ, 3ಜಿ, 4ಜಿ ಸೇವೆ, ಡಿಟಿಎಚ್, ಹಲವು ಡಿಜಿಟಲ್ ಸೇವೆ, ಬ್ರಾಡ್ ಬ್ಯಾಂಡ್ ಸೇವೆಗಳನ್ನು ಏರ್ ಟೆಲ್ ಒದಗಿಸುವ ಮೂಲಕ ಜನ ಮೆಚ್ಚುಗೆ ಗಳಿಸಿತು.












Click it and Unblock the Notifications