ಥತ್, ಸಾವಿನ ಮನೆಯಲ್ಲೂ ಬಿಜೆಪಿ-ಕಾಂಗೈ ರಾಜಕೀಯ
ನವದೆಹಲಿ, ಜೂ 25: ಕಳೆದ ಶನಿವಾರ (ಜೂ 22) ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿ ಉತ್ತರಾಖಂಡ ರಾಜ್ಯದ ಪ್ರವಾಹ ಪೀಡಿತ ಪ್ರದೇಶಗಳಲ್ಲಿ ವೈಮಾನಿಕ ಸಮೀಕ್ಷೆ ನಡೆಸಿದಾಗ ಕಾಂಗ್ರೆಸ್ ಮಾಧ್ಯಮಗಳ ಮುಂದೆ ದೊಡ್ಡ ಗದ್ದಲವನ್ನೇ ಎಬ್ಬಿಸಿತ್ತು.
ನರೇಂದ್ರ ಮೋದಿಯವರ ಈ ಸಮೀಕ್ಷೆ ಬರೀ ರಾಜಕೀಯ ಪ್ರೇರಿತ. ಯಾವುದೇ ನಾಯಕರಿಗೆ, ವಿಐಪಿಗಳಿಗೆ ವೈಮಾನಿಕ ಸಮೀಕ್ಷೆ ನಡೆಸಲು ಅವಕಾಶ ನೀಡುವುದಿಲ್ಲ. ಇದರಿಂದ ವಾಯುಪಡೆಗಳು ನಡೆಸುವ ಪರಿಹಾರ ಕಾರ್ಯಕ್ಕೆ ತೊಂದರೆಯಾಗುತ್ತದೆ ಎಂದು ಕೇಂದ್ರ ಗೃಹ ಸಚಿವ ಸುಶೀಲ್ ಕುಮಾರ್ ಶಿಂಧೆ ಹೇಳಿಕೆ ನೀಡಿದ್ದರು.
ಇನ್ನೂ ಒಂದು ಹೆಜ್ಜೆ ಮುಂದಿಟ್ಟ ಕಾಂಗ್ರೆಸ್ ಪರವಾಗಿ ಪಕ್ಷದ ಪ್ರಚಂಡ ವಾಗ್ಮಿ ದಿಗ್ವಿಜಯ್ ಸಿಂಗ್, ಮೋದಿ ಈ ವಿಚಾರದಲ್ಲಿ ರಾಜಕೀಯ ಮಾಡುವುದು ತರವಲ್ಲ. ಅವರಿಗೆ ಪರಿಸ್ಥಿತಿ ಬಗ್ಗೆ ಅಷ್ಟು ಕಾಳಜಿ ಇದ್ದಿದ್ದರೆ ಗುಜರಾತ್ ಸರಕಾರದ ವತಿಯಿಂದ ಬರೀ ಎರಡು ಕೋಟಿ ರೂಪಾಯಿ ಮಾತ್ರ ಯಾಕೆ ನೀಡುತ್ತಿದ್ದರು ಎಂದು ಪ್ರಶ್ನಿಸಿದ್ದಾರೆ.
ಗೃಹ ಸಚಿವರು ನೀಡಿದ ಹೇಳಿಕೆಯ ಬೆನ್ನಲ್ಲೇ ಕಾಂಗ್ರೆಸ್ ರಾಷ್ಟೀಯ ಉಪಾಧ್ಯಕ್ಷ ರಾಹುಲ್ ಗಾಂಧಿ ಸೋಮವಾರ (ಜೂ 25) ಉತ್ತರಾಖಂಡಕ್ಕೆ ತೆರಳಿ ವೈಮಾನಿಕ ಸಮೀಕ್ಷೆ ನೀಡಿದ್ದಾರೆ. ತಾನು ನೀಡಿದ ಹೇಳಿಕೆ ತನಗೇ ತಿರುಗುಬಾಣವಾಗಲಿದೆ ಎಂದು ಅರಿತ ಕಾಂಗ್ರೆಸ್ ರಾಹುಲ್ ಭೇಟಿಗೆ ಸ್ಪಷ್ಟನೆ ನೀಡಿದೆ. ರಾಹುಲ್ ಗಾಂಧಿ ಒಬ್ಬ ವಿಐಪಿಯಾಗಿ ಉತ್ತರಾಖಂಡಕೆ ಭೇಟಿ ನೀಡಲಿಲ್ಲ. ಒಬ್ಬ ಸಾಮಾನ್ಯ ನಾಗರೀಕನಾಗಿ ಪ್ರವಾಹ ಪೀಡಿತ ಪ್ರದೇಶಕ್ಕೆ ಭೇಟಿ ನೀಡಿದ್ದಾರೆ. ಮೋದಿ ಭೇಟಿಗೂ, ರಾಹುಲ್ ಗಾಂಧಿ ಭೇಟಿಗೂ ಬಹಳ ವ್ಯತ್ಯಾಸವಿದೆ ಎನ್ನುವ ಹೇಳಿಕೆ ನೀಡಿದೆ.

ಉತ್ತರಾಖಾಂಡದಲ್ಲೇ ಉಳಿದ ರಾಹುಲ್
ವೈಮಾನಿಕ ಸಮೀಕ್ಷೆಯ ನಂತರ ಸೋಮವಾರ ಉತ್ತರಾಖಂಡದಲ್ಲೇ ಉಳಿದುಕೊಂಡಿದ್ದ ರಾಹುಲ್ ಹವಾಮಾನ ವೈಪರೀತ್ಯದಿಂದ ಇನ್ನೂ ಅಲ್ಲೇ ಉಳಿಯುವಂತಾಗಿದೆ. ವಿದೇಶ ಪ್ರವಾಸದಲ್ಲಿದ್ದ ರಾಹುಲ್ ಪ್ರವಾಹ ಸಂಭವಿಸಿದ ಒಂದು ವಾರದ ನಂತರ ಅಲ್ಲಿಗೆ ಭೇಟಿ ನೀಡಿದ್ದಾರೆ ಎನ್ನುವುದು ಓದುಗರ ಗಮನಕ್ಕೆ.

ಪರಿಹಾರ ಸಾಮಗ್ರಿಗಳ ರವಾನೆ
ಪ್ರವಾಹ ಸಂತ್ರಸ್ತರಿಗಾಗಿ ಸಂಗ್ರಹಿಸಿದ ಪರಿಹಾರ ಸಾಮಗ್ರಿಗಳಿರುವ 24 ಟ್ರಕ್ ಗಳು ಎರಡನೇ ಸುತ್ತಿನಲ್ಲಿ ಉತ್ತರಾಖಾಂಡದತ್ತ ಹೊರಟಿದೆ. ಸೋನಿಯಾ ಗಾಂಧಿ ಸಮ್ಮುಖದಲ್ಲಿ ಟ್ರಕ್ ಗಳು ಉತ್ತರಾಖಾಂಡಕ್ಕೆ ತೆರಳಿದೆ.

ಗುಜರಾತ್ ಸಂತ್ರಸ್ತರಿಗೆ ಭಾರೀ ಫಲ ನೀಡಿದ ಮೋದಿ ಭೇಟಿ
ವೈಮಾನಿಕ ಸಮೀಕ್ಷೆಯ ನಂತರ ಪರಿಹಾರ ಕಾರ್ಯದಲ್ಲಿ ವಾಯುಪಡೆ ಸಿಬ್ಬಂದಿಗಳ ಜೊತೆ ಮಾತುಕತೆ ನಡೆಸಿದ ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿ ಗುಜರಾತ್ ರಾಜ್ಯದ ಸುಮಾರು ಹದಿನೈದು ಸಾವಿರ ಸಂತ್ರಸ್ತರನ್ನು ಅಲ್ಲಿಂದ ರಕ್ಷಿಸುವಲ್ಲಿ ಸಫಲತೆ ಕಂಡಿದ್ದಾರೆ.

ಕಾಂಗ್ರೆಸ್ ಕಂಟ್ರೋಲ್ ರೂಂ
ಪರಿಹಾರ ಕಾರ್ಯಗಳಿಗೆ ಶೀಘ್ರವಾಗಿ ಸ್ಪಂಧಿಸಲು ಕಾಂಗ್ರೆಸ್ ಡೆಹ್ರಾಡೂನ್ ನಲ್ಲಿ ಕಂಟ್ರೋಲ್ ರೂಂ ತೆರೆದಿದೆ. ಕಾಂಗ್ರೆಸ್ ಪಕ್ಷದ ಕಾರ್ಯದರ್ಶಿ ಸಂಜಯ್ ಕಪೂರ್ ಮತ್ತು ಸೇವಾದಳದ ಮುಖ್ಯಸ್ಥ ಮಹೇಂದ್ರ ಜೋಷಿ ಅವರು ಡೆಹ್ರಾಡೂನಿಗೆ ದೌಡಾಯಿಸಿದ್ದಾರೆ.

ರಕ್ಷಣಾ ಕಾರ್ಯ ಪುನರಾರಂಭಕ್ಕೆ ಮೂರು ದಿನ
ಕೇದಾರನಾಥ ಭಾಗದಲ್ಲಿ ಮಳೆ ಸುರಿಯುತ್ತಿದ್ದು ದುರ್ಗಮ ಕಣಿವೆಯಲ್ಲಿ ಸಿಲುಕಿರುವವರನ್ನು ರಕ್ಷಿಸುವ ಕಾರ್ಯ ಅರಂಭವಾಗಲು ಇನ್ನು ಮೂರು ದಿನಗಳಾದರೂ ಬೇಕು. ಹವಾಮಾನ ಇಲಾಖೆಯ ಪ್ರಕಾರ ಜೂನ್ 28ರ ನಂತರ ಮಳೆ ಕಡಿಮೆಯಾಗುವ ಸಾಧ್ಯತೆಯಿದ್ದು ನಂತರ ರಕ್ಷಣಾ ಕಾರ್ಯ ತೀವ್ರಗೊಳಿಸಲಾಗುವುದು ಎಂದು ಐಟಿಬಿಟಿ ಹೇಳಿದೆ.












Click it and Unblock the Notifications