ಆತ್ಮಹತ್ಯಾ ನಿರೋಧಕ ಸೀಲಿಂಗ್ ಫ್ಯಾನ್ ಬಂದಿದೆ!

ಮಧ್ಯಪ್ರದೇಶದ ಜರ್ಬಲ್ ಪುರದ ಸರ್ಕಾರಿ ವೈದ್ಯಕೀಯ ಕಾಲೇಜಿನಲ್ಲಿ ಪ್ರಾಶುಂಪಾಲರಾಗಿರುವ ಆರ್.ಎಸ್.ಶರ್ಮಾ ಸೀಲಿಂಗ್ ಫ್ಯಾನ್ ಗೆ ಸಣ್ಣ ಪ್ರಮಾಣದ ತಂತ್ರಜ್ಞಾನ ಅಳವಡಿಸಿದ್ದಾರೆ. ಇದರಿಂದ ಆತ್ಮಹತ್ಯೆ ಮಾಡಿಕೊಳ್ಳಲು ನೀವು ನೇಣು ಬಿಗಿದುಕೊಂಡರೆ, ಫ್ಯಾನ್ ನಿಮ್ಮನ್ನು ಭೂಮಿಗೆ ತಂದು ತಲುಪಿಸುತ್ತದೆ.
ಶರ್ಮಾ ಅವರ ಪಕ್ಕದ ಮನೆಯ ಹುಡುಗಿ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಫೇಲ್ ಆಗಿದ್ದರಿಂದ ಸೀಲಿಂಗ್ ಫ್ಯಾನ್ ಗೆ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾದಳು. ಇಂತಹ ಘಟನೆ ನಡೆಯಬಾರದು ಎಂದು ಶರ್ಮಾ, ಫ್ಯಾನಿಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಳ್ಳದಂತೆ ತಂತ್ರಜ್ಞಾನ ರೂಪಿಸಿದ್ದಾರೆ.
ಏನಿದು ತಂತ್ರಜ್ಞಾನ : ಮನೆಯ ಸೀಲಿಂಗ್ ಮತ್ತು ಫ್ಯಾನ್ ಗೆ ಸಂಪರ್ಕ ಕಲ್ಪಿಸುವ ಕೊಳವೆಯ ಹಿಂಭಾಗಕ್ಕೆ ಶರ್ಮಾ ನಾಲ್ಕು ಶಕ್ತಿಯುತ ಸ್ಪ್ರಿಂಗ್ ಜೋಡಿಸಿದ್ದಾರೆ. ಫ್ಯಾನ್ ತೂಕದ ಜೊತೆಗೆ ಇದು ಕೇವಲ 25 ಕೆಜಿ ಭಾರ ತಡೆದುಕೊಳ್ಳಲಿದೆ.
ಯಾರಾದೂ ಆತ್ಮಹತ್ಯೆ ಮಾಡಿಕೊಳ್ಳಬೇಕು ಎಂದು ಫ್ಯಾನಿಗೆ ನೇತು ಬಿದ್ದರೆ, ಫ್ಯಾನ್ ಅವರನ್ನು ನೆಲಕ್ಕೆ ತಂದು ಬಿಡುತ್ತದೆ. ಸಾಯಬೇಕು ಎಂಬ ಯೋಜನೆ ತಲೆಕೆಳಗಾಗುತ್ತದೆ. ಈ ಯೋಜನೆಗಾಗಿ ಶರ್ಮಾ ಕೇವಲ 450 ರೂ. ಖರ್ಚುಮಾಡಿದ್ದಾರೆ.
ಪ್ರೇಮ ವೈಫಲ್ಯ, ಜೀವನದಲ್ಲಿ ಜಿಗುಪ್ಸೆ, ಪರೀಕ್ಷೆಯಲ್ಲಿ ಫೇಲ್ ಎಂದು ಆತ್ಮಹತ್ಯೆಗೆ ಶರಣಾಗುವವರು ಸೀಲಿಂಗ್ ಫ್ಯಾನ್ ಗೆ ನೇಣು ಬಿಗಿದುಕೊಳ್ಳುವ ಯೋಜನೆ ಇದ್ದರೆ ಮರೆತು ಬಿಡಿ. ಶರ್ಮಾ ಅವರ ಈ ಪ್ರಯತ್ನದಿಂದಾಗಿ ಆತ್ಮಹತ್ಯೆ ಮಾಡಿಕೊಳ್ಳುವವರ ಪ್ರಮಾಣ ಕಡಿಮೆ ಆಗಲಿ ಎಂದು ಆಶಿಸೋಣ.
ಸೀಲಿಂಗ್ ಫ್ಯಾನ್ ಗಳನ್ನು ಕೇವಲ ಬಿಸಿಲಿನ ಧಗೆ ತಡೆಯಲಾಗದಿದ್ದರೆ, ತಂಪಾದ ಗಾಳಿಗೆ ಉಪಯೋಗಿಸಿಕೊಳ್ಳಿ. ಆತ್ಮಹತ್ಯೆಯಂತಹ ಕಾರ್ಯಕ್ಕೆ ಬಳಸಬೇಡಿ. ಇರುವ ಒಂದು ಅಮೂಲ್ಯ ಜೀವವನ್ನು ಕಳೆದುಕೊಳ್ಳಬೇಡಿ.












Click it and Unblock the Notifications