'ಕೈಬಿಟ್ಟ ನಿತೀಶ್: ಇನ್ನು ಬಿಜೆಪಿಗೆ ಭವಿಷ್ಯವಿಲ್ಲ'

'ಎನ್‌ಡಿಎ ಮೈತ್ರಿಯಿಂದ ಜೆಡಿಯು ಹೊರಬಂದಿರುವುದು ದೇಶದಲ್ಲಿ ಬಿಜೆಪಿಗೆ ಭವಿಷ್ಯವಿಲ್ಲ ಎಂಬುದನ್ನು ಸ್ಪಷ್ಟಪಡಿಸಿದೆ' ಎಂದು ವೀರಪ್ಪ ಮೊಯ್ಲಿ ತಿಳಿಸಿದ್ದಾರೆ. 'ಪ್ರಧಾನಿ ಅಭ್ಯರ್ಥಿ ಬಿಂಬಿತ ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿ ಕಾಂಗ್ರೆಸ್ಸಿಗೆ ಸವಾಲು ಅಲ್ಲವೇ ಅಲ್ಲ. ಬದಲಿಗೆ ಅವರು ಅವರ ಪಕ್ಷಕ್ಕೇ ಕಂಟಕ/ಹೊರೆ' ಎಂದೂ ಪೆಟ್ರೋಲಿಯಂ ಖಾತೆ ಸಚಿವ ಎಂ ವೀರಪ್ಪ ಮೊಯ್ಲಿ ಅಭಿಪ್ರಾಯಪಟ್ಟಿದ್ದಾರೆ.
'ನರೇಂದ್ರ ಮೋದಿ ಬಿಜೆಪಿಯ ಪ್ರಚಾರ ಸಮಿತಿ ಅಧ್ಯಕ್ಷರಾಗಿ ಆಯ್ಕೆಯಾಗುತ್ತಿದ್ದಂತೆ ಎನ್‌ಡಿಎ ಮೈತ್ರಿಕೂಟದಲ್ಲಿ ಅಲ್ಲೋಲ ಕಲ್ಲೋಲ ಉಂಟಾಗಿದೆ. ಬಿಜೆಪಿಯಲ್ಲಿದ್ದರೆ ತಮಗೆ ಭವಿಷ್ಯ ಇಲ್ಲ ಎಂಬುದು ಅದರೊಂದಿಗಿದ್ದ ಪಕ್ಷಗಳಿಗೆ ಅರಿವಾಗಿದೆ. ಈ ಹಿನ್ನೆಲೆಯಲ್ಲಿ ಜೆಡಿಯು ಮೈತ್ರಿಕೂಟದಿಂದ ಹೊರಬರುವ ನಿರ್ಧಾರ ಪ್ರಕಟಿಸಿದೆ' ಎಂದು ಮೊಯ್ಲಿ ವ್ಯಂಗ್ಯವಾಡಿದರು.
ಮೋದಿ ವಿರುದ್ಧ ಹರಿಹಾಯ್ದ ಮೊಯ್ಲಿ:
'ಮೋದಿ ಇಡೀ ದೇಶ ಒಪ್ಪುವ ನಾಯಕ ಅಲ್ಲ ಎಂದು ಸ್ವತಃ ಬಿಜೆಪಿ ಹಿರಿಯ ನಾಯಕ ಎಲ್ ಕೆ ಅಡ್ವಾಣಿ ಅವರೇ ಹೇಳಿದ್ದಾರೆ. ಇಂದಿನ ಪ್ರಜಾಪ್ರಭುತ್ವಕ್ಕೆ ಕಾಂಗ್ರೆಸ್ ಅನಿವಾರ್ಯ. ಬರುವ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಈ ಹಿಂದಿಗಿಂತ ಶೇ. 25ರಷ್ಟು ಅಧಿಕ ಮತ ಗಳಿಸಲಿದೆ' ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.
ಅವರವರೇ ಕಿತ್ಲಾಡುತ್ತಿದ್ದಾರೆ. ಹಾಗಿರುವಾಗ ಸಾಮಾನ್ಯಜನರು ಮತ್ತು ಮತದಾರರ ಮನ ಗೆಲ್ಲುವುದು ಬಿಜೆಪಿಗೆ ಹೇಗೆ ಸಾಧ್ಯವಾದೀತು? ಎಂದು ಅವರು ಪ್ರಶ್ನಿಸಿದ್ದಾರೆ.
ಇತ್ತೀಚೆಗೆ ಮತ್ತೊಬ್ಬ ಕೇಂದ್ರ ಸಚಿವ ಜೈರಾಂ ರಮೇಶ್ ಅವರು ನರೇಂದ್ರ ಮೋದಿಯನ್ನು ಭಸ್ಮಾಸುರನಿಗೆ ಹೋಲಿಸಿದ್ದರು.












Click it and Unblock the Notifications