ಇನ್ಫಿ ಮೂರ್ತಿಯ ತರಾಟೆಗೆ ತೆಗೆದುಕೊಂಡ ಕೇಂದ್ರ ಸಚಿವ

ಏನಪ್ಪಾ ಅಂದರೆ ಹೆಂಗೆಳೆಯರು ಅನ್ನಾಹಾರ ಬಿಟ್ಟು ನೋಡುವ ಕೌಟುಂಬಿಕ ಧಾರಾವಾಹಿಗಳಿಗೆ ಹೊಸ ಅರ್ಥವನ್ನೇ ನೀಡಿದ್ದಾರೆ. ಏನೆಂದರೆ ಒಂದೇ ಕುಟುಂಬದ ಅಪ್ಪ, ಮಕ್ಕಳು, ಕೊನೆಗೆ ಮೊಮ್ಮಕ್ಕಳೂ ನಿರ್ದೇಶಿಸುವ ಏಕಮೇವ ಧಾರಾವಾಹಿಗೆ ಕೌಟುಂಬಿಕ ಧಾರಾವಾಹಿ ಎಂದು ಹೆಸರಿಸಿದ್ದಾರೆ. ಇದರ ಬಗ್ಗೆ ಹೆಚ್ಚಿಗೆ ಹೇಳುವ ಅಗತ್ಯವಿಲ್ಲ. ಏಕೆಂದರೆ ಎಲ್ಲವನ್ನೂ ವ್ಯಂಗ್ಯಚಿತ್ರವೇ ಬಿಡಿಸಿಟ್ಟಿದೆ.
ಇದರ ಪ್ರಸ್ತಾಪ ಈಗ್ಯಾಕೆ? ಎಂದು ಕೇಳಿದರೆ ಸ್ವಜನಪಕ್ಷಪಾತಿಗಳು ಹೆಚ್ಚಾಗಿ ಯಾವ ಕ್ಷೇತ್ರದಲ್ಲಿದ್ದಾರೆ ಎಂದು ಕೇಳಿದರೆ ಜನ ಬೊಟ್ಟು ಮಾಡುವುದೇ ರಾಜಕಾರಣದತ್ತ. ಆದರೆ ಇದಕ್ಕೆ ಸೂಕ್ಷ್ಮಮನಸ್ಸಿನ ಕೇಂದ್ರ ಗ್ರಾಮೀಣಾಭಿವೃದ್ಧಿ ಸಚಿವ ಜೈರಾಂ ರಮೇಶ್ ಅವರು ಆಕ್ಷೇಪ ವ್ಯಕ್ತಪಡಿಸಿದ್ದಾರೆ.
'ಏನ್ರೀ ಸ್ವಜನಪಕ್ಷಪಾತಿಗಳು ಅಂದ್ರೆ ರಾಜಕಾರಣಿಗಳು ಮಾತ್ರವೇನಾ? ಅದು ಸರ್ವಾಂತರ್ಯಾಮಿ. ನಿಮ್ಮಗಳ ಮಧ್ಯೆಯೂ ಸ್ವಜನಪಕ್ಷಪಾತಿಗಳು ಇರೋಲ್ವಾ?' ಎಂದು ಪ್ರಶ್ನಿಸುತ್ತಾ ಸೀದಾ ಇನ್ಫಿ ನಾರಾಯಣ ಮೂರ್ತಿ ಅವರತ್ತ ಬೊಟ್ಟು ತೋರಿಸಿದ್ದಾರೆ.
'ನೋಡಿ ಆ ನಾರಾಯಣ ಮೂರ್ತಿ ಏನು ಸಾಚಾನಾ? ಆತನೂ ಸ್ವಜನಪಕ್ಷಪಾತಿಯೇ! ನಿವೃತ್ತಿಯ ಬಳಿಕವೂ ಇನ್ಫೋಸಿಸ್ ಕಂಪನಿಗೆ ಮರಳಿದ ಆ ಕಂಪನಿಯ ಸಂಸ್ಥಾಪಕ ಎನ್ಆರ್ ನಾರಾಯಣ ಮೂರ್ತಿ ಅವರು ತಮ್ಮ ಪುತ್ರ ರೋಹನ್ ಮೂರ್ತಿಯನ್ನೇ ಕಾರ್ಯನಿರ್ವಾಹಕ ಸಹಾಯಕನನ್ನಾಗಿ ನೇಮಿಸಿಕೊಂಡಿದ್ದಾರೆ. ಇದು ಅಪ್ಪಟ ಸ್ವಜನಪಕ್ಷಪಾತ ಅಲ್ವೇ?' ಎಂದು ಸಚಿವ ಜೈರಾಂ ಗರಂ ಆಗಿದ್ದಾರೆ.
ಮುಂದುವರಿದು 'ಸಂಸದರು ತಮ್ಮ ಮಕ್ಕಳು, ಸೊಸೆಯಂದಿರು ಹಾಗೂ ಸಂಬಂಧಿಕರನ್ನು ಆಪ್ತ ಸಹಾಯಕರನ್ನಾಗಿ ಮಾಡಿಕೊಂಡಿದ್ದಾರೆ ಎಂದು ಟೀಕಿಸುತ್ತೀರಿ? ನನ್ನ ಗೆಳೆಯ ನಾರಾಯಣ ಮೂರ್ತಿಯನ್ನೇ ನೋಡಿ. ಅವರು ನಮಗೆಲ್ಲಾ ಸ್ಫೂರ್ತಿಯ ಸೆಲೆ. ಅವರೂ ತಮ್ಮ ಮಗನನ್ನೇ ಕಾರ್ಯನಿರ್ವಾಹಕ ಸಹಾಯಕರನ್ನಾಗಿ ಮಾಡಿಕೊಂಡಿದ್ದಾರಲ್ಲ. ಅದಕ್ಕೆ ಏನು ಹೇಳುತ್ತೀರಿ' ಎಂದು ಕೇಳಿದ್ದಾರೆ.
'ಮೂರ್ತಿ ಅವರು ತಮ್ಮ ಮಗನನ್ನೇ ಸಹಾಯಕನನ್ನಾಗಿ ನೇಮಿಸಿಕೊಂಡಿದ್ದಕ್ಕೂ, ಸಂಸದರು ತಮ್ಮ ಬಂಧುಗಳನ್ನೇ ಸಹಾಯಕರನ್ನಾಗಿ ಮಾಡಿಕೊಂಡಿದ್ದಕ್ಕೂ ಯಾವುದೇ ವ್ಯತ್ಯಾಸವಿಲ್ಲ. ಭಾರತದ ರಾಜಕಾರಣ ಹಾಗೂ ಸರ್ಕಾರದಲ್ಲಿ ಸ್ವಜನ ಪಕ್ಷಪಾತ ಎಂಬುದು ಗಂಭೀರ ವಿಷಯ. ನಾರಾಯಣ ಮೂರ್ತಿ ಅವರು ಅದನ್ನು ಕಾರ್ಪೋರೆಟ್ ಜಗತ್ತಿನಲ್ಲಿಯೂ ತೋರಿಸಿದ್ದಾರೆ. ಸ್ವಜನಪಕ್ಷಪಾತ ಎಲ್ಲಿಲ್ಲ ಹೇಳಿ' ಎಂದು ಜೈರಾಂ ಮೊನಚಾಗಿ ಪ್ರಶ್ನಿಸಿದ್ದಾರೆ. ನಿಮ್ಮ ಉತ್ತರವೇನು?
ಇದಕ್ಕೆ ಪೂರಕವಾಗಿ ಹೇಳುವುದಾದರೆ 'ಆ ಕಾಲದ ರಾಜನಿಗೂ ಈ ಕಾಲದ ರಾಜಕಾರಣಿಗೂ ಏನು ವ್ಯತ್ಯಾಸ?' ಎಂಬ ಪ್ರಶ್ನೆಗೆ ಬಾಣಭಟ್ಟರ ಉತ್ತರ ಹೀಗಿದೆ: ಅವರು ಅಧಿಕೃತವಾಗಿ ವಂಶಪಾರಂಪರ್ಯ ಆಡಳಿತ ನಡೆಸುತ್ತಿದ್ದರು. ಇವರದ್ದು ಅನಧಿಕೃತ.












Click it and Unblock the Notifications