ದರ ಹೆಚ್ಚಳ : ಬಿಎಂಟಿಸಿ ಟಿಕೆಟ್ ದರ ಎಷ್ಟಾಯಿತು?
ಬೆಂಗಳೂರು, ಜೂ.16 : ಬೆಲೆ ಏರಿಕೆಯಿಂದ ಕಂಗಾಲಾಗಿದ್ದ ಜನರಿಗೆ ಬೆಂಗಳೂರು ಮಾಹಾನಗರ ಸಾರಿಗೆ ಸಂಸ್ಥೆ ಮತ್ತಷ್ಟು ಶಾಕ್ ನೀಡಿದೆ. ಬಿಎಂಟಿಸಿ ಪ್ರಯಾಣದರವನ್ನು ಶೇ.16ರಷ್ಟು ಹೆಚ್ಚಳ ಮಾಡಲಾಗಿದೆ. ಪರಿಷ್ಕೃತ ದರಗಳು ಮಧ್ಯರಾತ್ರಿಯಿಂದಲೇ ಜಾರಿಗೆ ಬಂದಿವೆ.
ಬಿಎಂಟಿಸಿಯ ಇತಿಹಾಸದಲ್ಲೇ ಶನಿವಾರ ಮಾಡಿದ ದರ ಹೆಚ್ಚಳ ಅತ್ಯಧಿಕವಾಗಿದೆ. ಕಳೆದ ಸೆಪ್ಟಂಬರ್ ನಲ್ಲಿ ಶೇ.14.4ರಷ್ಟು ದರ ಹೆಚ್ಚಳ ಮಾಡಿತ್ತು. ಹೊಸ ಸರ್ಕಾರ ಈ ದಾಖಲೆಯನ್ನು ಮುರಿದು, ಪ್ರಯಾಣಿಕರ ಜೇಬಿಗೆ ಸರಿಯಾಗಿಯೇ ಕತ್ತರಿ ಹಾಕಿದೆ.
ಸತತವಾಗಿ ಡೀಸೆಲ್ ದರ ಹೆಚ್ಚಳ ವಾಗುತ್ತಿರುವುದು, ಬಿಎಂಟಿಸಿ ನೌಕರರ ತುಟ್ಟಿಭತ್ಯೆ ಹೆಚ್ಚಳ, ಬಿಎಂಟಿಸಿಗೆ ವಾರ್ಷಿಕ 270 ಕೋಟಿ ರೂ. ಹೊರೆಯಾಗುತ್ತಿತ್ತು ಮುಂತಾದ ಕಾರಣಗಳಿಂದಾಗಿ ದರ ಹೆಚ್ಚಳ ಮಾಡಲಾಗಿದೆ ಎಂದು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಹೇಳಿದ್ದಾರೆ.
ಬಿಎಂಟಿಸಿ ಪ್ರಯಾಣದರವನ್ನು ಹೆಚ್ಚಳ ಮಾಡಿರುವುದು ಮಧ್ಯಮ ವರ್ಗದ ಜನರ ಮೇಲೆ ನೇರವಾದ ಪರಿಣಾಮ ಬೀರಿದೆ. ನೂತನ ದರ ಪಟ್ಟಿ ಅನ್ವಯ ಬಿಎಂಟಿಸಿ ಪ್ರಯಾಣಕ್ಕಾಗಿ ಜನರು ಮೊದಲ ಹಂತದಲ್ಲೇ 6 ರೂ. ಟಿಕೆಟ್ ಪಡೆಯಬೇಕಾಗಿದೆ. ಹಂತಗಳಿಗೆ ತಕ್ಕಂತೆ ದರ ಹೆಚ್ಚಳವಾಗಿದೆ.

ಗ್ರಾಹಕರಿಗೆ ಹಂತ-ಹಂತವಾಗಿ ಹೊರೆ
ಹೊಸ ಸರ್ಕಾರ ಅಧಿಕಾರ ಪಡೆದ ಕೆಲವು ದಿನಗಳಲ್ಲಿ ಹಂತ ಹಂತವಾಗಿ ಜನರ ಜೇಬಿಗೆ ಕತ್ತರಿ ಹಾಕುತ್ತಿದೆ. ಅಧಿಕಾರ ಪಡೆದು ಕೆಲವು ದಿನಗಳಿಗೆ ಮಾಸಿಕ ಮತ್ತು ದಿನದ ಪಾಸುಗಳ ದರವನ್ನು ಸರ್ಕಾರ ಹೆಚ್ಚಿಸಿತ್ತು. ಈಗ ಪ್ರಯಾಣದರ ಹೆಚ್ಚಳ ಮಾಡುವ ಮೂಲಕ ಗ್ರಾಹಕರಿಗೆ ಮತ್ತಷ್ಟು ಹೊರೆ ಉಂಟುಮಾಡಿದೆ.

ಎಷ್ಟು ಆದಾಯ ಬರುತ್ತದೆ
ಶೇ. 16ರಷ್ಟು ದರ ಹೆಚ್ಚಳ ಮಾಡಿರುವುದರಿಂದ ಬಿಎಂಟಿಸಿಗೆ ವಾರ್ಷಿಕ 114 ಕೋಟಿ ರೂ. ಹೆಚ್ಚುವರಿ ಆದಾಯ ಬರಲಿದೆ ಎಂದು ಸಂಸ್ಥೆ ಅಂದಾಜಿಸಿದೆ. ಹವಾನಿಯಂತ್ರಿತ ಬಸ್‌ಗಳ ಪ್ರಯಾಣ ದರ ಹೆಚ್ಚಳ ಮಾಡಿದ್ದರಿಂದ ಸುಮಾರು 86 ಕೋಟಿ ರೂ. ಆದಾಯ ಸಂಗ್ರಹವಾಗುತ್ತಿದೆ. ಒಟ್ಟಾರೆ ದರ ಹೆಚ್ಚಳದಿಂದ ಸಂಸ್ಥೆಗೆ 200 ಕೋಟಿ ರೂ.ಗಳಷ್ಟು ಹೊರೆ ತಗ್ಗಲಿದೆಯಂತೆ.

ಪ್ರಯಾಣ ದರ ಎಷ್ಟು ಹೆಚ್ಚು
ಬಿಎಂಟಿಸಿ ಪ್ರಯಾಣದರವನ್ನು 1 ಮತ್ತು 2 ನೇ ಹಂತದಲ್ಲಿ 1 ರೂ. ಹೆಚ್ಚಳವಾಗಿದೆ. 3 ರಿಂದ 7ನೇ ಹಂತದವರೆಗೆ 2 ರೂ. ಹೆಚ್ಚಳವಾಗಿದೆ. 8 ರಿಂದ 24 ನೇ ಹಂತದವರೆಗೆ 3 ರೂ. ಹೆಚ್ಚಳ ಮಾಡಲಾಗಿದ್ದು, ಪರಿಷ್ಕೃತ ದರ ಈಗಾಗಲೇ ಜಾರಿಯಾಗಿದೆ.

ಎಷ್ಟು ಹೆಚ್ಚಿಗೆ ನೀಡಬೇಕು
ಪರಿಷ್ಕೃತ ದರದ ಅನ್ವಯ 5 ರೂ.ಟಿಕೆಟ್ 1 ರೂ ಹೆಚ್ಚಳವಾಗಿದೆ. 8 ರೂ.ಟಿಕೆಟ್ 9 ರೂ. ಆಗಿದೆ. 10 ರೂ. ಟಿಕೆಟ್ 12 ರೂಪಾಯಿ ಆಗಿದೆ. ಆದ್ದರಿಂದ ಬಿಎಂಟಿಸಿ ಪ್ರಯಾಣದರ 6 ರೂ.ನಿಂದ ಪ್ರಾರಂಭವಾಗುತ್ತದೆ.

ಯಾವುದು ಹೆಚ್ಚಳವಿಲ್ಲ
ಚುನಾವಣೆಗೂ ಪೂರ್ವದಲ್ಲಿ ಹವಾನಿಯಂತ್ರಿತ ಬಸ್‌ಗಳ ಪ್ರಯಾಣ ದರ ಏರಿಕೆ ಮಾಡಲಾಗಿತ್ತು. ಆದ್ದರಿಂದ ಎಸಿ ಬಸ್ ಗಳ ಪ್ರಯಾಣದರ ಈಗ ಹೆಚ್ಚಳ ಮಾಡಲಾಗಿಲ್ಲ. ವಿದ್ಯಾರ್ಥಿಗಳ ರಿಯಾಯ್ತಿ ಪಾಸು ಮತ್ತು ಮಾಸಿಕ ಪಾಸುಗಳಿಗೆ ನೂತನ ದರಗಳು ಅನ್ವಯವಾಗುವುದಿಲ್ಲ.

ನಷ್ಟ ಹೆಚ್ಚಾಗುತ್ತಿದೆ.
ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಅವರ ಪ್ರಕರಾರ ಬಿಎಂಟಿಸಿಗೆ ವಾರ್ಷಿಕ 270 ಕೋಟಿ ರೂ.ಗಳಷ್ಟು ಹೊರೆಯಾಗುತ್ತಿದೆ. ನಗರದ ವಿವಿಧ ಪ್ರದೇಶಗಳ 10ಕ್ಕೂ ಹೆಚ್ಚು ಟಿಟಿಎಂಸಿಗಳ ಮಳಿಗೆಗಳ ಬಾಡಿಗೆಯಿಂದ ವಾರ್ಷಿಕ 25 ಕೋಟಿ ರೂ. ಆದಾಯ ಬರುತ್ತಿದೆ. ಪ್ರಯಾಣಿಕರ ದರ ಹೆಚ್ಚಳದಿಂದ 114 ಕೋಟಿ ಆದಾಯ ಬರುತ್ತದೆ. ಆದರೂ ಸಂಸ್ಥೆಗೆ ನಷ್ಟ ಉಂಟಾಗುತ್ತಿದೆ ಎನ್ನುತ್ತಾರೆ ಸಚಿವರು.












Click it and Unblock the Notifications