ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬೆಟ್ಟಿಂಗ್ ಸೋತು ತಲೆಬೋಳಿಸಿಕೊಂಡು ಸ್ವಾಮೀಜಿಯಾದ!

By ಸಾಗರ್ ದೇಸಾಯಿ, ಯಾದಗಿರಿ
|
Google Oneindia Kannada News

Betting loser keeps his word
ಯಾದಗಿರಿ, 13 : ಬೆಟ್ಟಿಂಗ್ ಹೆಸರು ಕೇಳಿದರೇನೇ ಬೆಚ್ಚಿ ಬೀಳುವ ಕಾಲವಿದು. ಬೆಟ್ಟಿಂಗ್ ಮತ್ತು ಸ್ಪಾಟ್ ಫಿಕ್ಸಿಂಗ್ ಐಪಿಎಲ್ ನಲ್ಲಿ ಬಿರುಗಾಳಿ ಎಬ್ಬಿಸಿ ವೀರಾಧಿವೀರರೆಲ್ಲರ ಮೀಸೆ ಮಣ್ಣಾಗುತ್ತಿರುವ ಹಿನ್ನೆಲೆಯಲ್ಲಿ ಬೆಟ್ ಕಟ್ಟುವುದಿರಲಿ ಬೆಟ್ಟಿಂಗ್ ಹೆಸರು ಹೇಳಲಿಕ್ಕೇ ಹಿಂಜರಿಯುತ್ತಿದ್ದಾರೆ.

ಬೆಟ್ಟಿಂಗಾ? ನೂರ್ನೂರು ರುಪಾಯಾ? ಅಂತ ಹೇಳಿ ಬೆಟ್ಟಿಂಗ್ ಕಟ್ಟಿ, ಒಂದು ವೇಳೆ ಸೋತರೆ ನೂರು ರುಪಾಯಿ ಬಿಚ್ತಾರಾ? ಹೊಗಲೋ ಬೆಟ್ಟಿಂಗೂ ಇಲ್ಲ ಮಣ್ಣೂ ಇಲ್ಲ, ಯಾವೋನು ಕೊಡ್ತಾನೆ ದುಡ್ಡು ಅಂತ ಹೇಳಿ ಜಾಗ ಖಾಲಿ ಮಾಡೋರೆ ಜಾಸ್ತಿ, ಒಪ್ತೀರಿ ತಾನೆ? ಅಂಥದರಲ್ಲಿ ಬೆಟ್ಟಿಂಗ್ ಕಟ್ಟಿ ಸೋತರೂ, ಕೊಟ್ಟ ಮಾತನ್ನು ಉಳಿಸಿಕೊಂಡವನ ರೋಚಕ ಕಥೆ ಇಲ್ಲಿದೆ.

ಇದು ಅಂತಿಂಥ ಬೆಟ್ಟಿಂಗ್ ಅಲ್ಲ. ದುಡ್ಡು ಕಾಸಿಗೆ ಸಂಬಂಧಿಸಿದ್ದೂ ಅಲ್ಲ. ಇದು ಕರ್ನಾಟಕದ ಮಾಜಿ ಶಾಸಕರೊಬ್ಬರು ವಿಧಾನಸಭೆ ಚುನಾವಣೆಯಲ್ಲಿ ಸೋತರೆ ತಾನು ಸನ್ಯಾಸ ಸ್ವೀಕರಿಸುವುದಾಗಿ ಬೆಟ್ ಕಟ್ಟಿ ಸೋತು, ಹೇಳಿದ ಮಾತಿನಂತೆ ಸನ್ಯಾಸ ಸ್ವೀಕರಿಸಿ ಗೆದ್ದವರಿಗೇ ಸವಾಲು ಎಸೆದ ಧೀರನಿಗೆ ಸಂಬಂಧಿಸಿದ ಕಥೆ.

ಶಾಸಕರು ಮತ್ತ್ಯಾರೂ ಅಲ್ಲ, ಯಾದಗಿರಿ ಜಿಲ್ಲೆಯ ಸುರಪುರದಲ್ಲಿ ಜೆಡಿಎಸ್ ನಿಂದ ಸ್ಪರ್ಧಿಸಿ, ಕಾಂಗ್ರೆಸ್‌ನ ರಾಜಾ ವೆಂಕಟಪ್ಪ ನಾಯಕರ ವಿರುದ್ಧ ಸೋತ ಮಾಜಿ ಸಚಿವ ರಾಜೂಗೌಡ. ಚುನಾವಣೆಯಲ್ಲಿ ರಾಜೂಗೌಡ ಗೆದ್ದೇ ಗೆಲ್ಲುತ್ತಾರೆಂದು ವಿಶ್ವಾಸದಿಂದ ಎದೆತಟ್ಟಿದವರು ಅವರ ಕಟ್ಟಾ ಅಭಿಮಾನಿ ಮತ್ತು ಪುಡಿ ರಾಜಕಾರಣಿಯಾಗಿದ್ದ ಸುರಪುರ ತಾಲೂಕಿನ ವಾಗಣಗೇರಾ ಗ್ರಾಮದ ಬಸಣ್ಣ (50) ಎಂಬ ಮಧ್ಯವಯಸ್ಕ.

ಚುನಾವಣೆಯಲ್ಲಿ ರಾಜೂಗೌಡ ಗೆದ್ದೇಗೆಲ್ಲುತ್ತಾರೆಂದು ಗ್ರಾಮಸ್ಥರ ಎದುರಿಗೆ ಬಸಣ್ಣ ಬಾಜಿ ಕಟ್ಟಿದ್ದರು. ಸೋತರೆ ತಾನು ಸನ್ಯಾಸ ಸ್ವೀಕರಿಸುವುದಾಗಿ ವಾಗ್ದಾನವನ್ನೂ ನೀಡಿದ್ದರು. ಚುನಾವಣೆ ನಡೆದು ಫಲಿತಾಂಶ ಹೊರಬಿದ್ದು ಎಲ್ಲ ತಣ್ಣಗಾಗಿದ್ದ ಸಂದರ್ಭದಲ್ಲಿ ಯಾರೂ ನಿರೀಕ್ಷಿಸಿದ ಕಾರ್ಯಕ್ಕೆ ಬಸಣ್ಣ ಕೈಹಾಕೇಬಿಟ್ಟಿದ್ದಾರೆ. ಬಸಣ್ಣನ ಈ ನಡೆ ಗ್ರಾಮಸ್ಧರಿಗೆ, ಪೋಷಕರಿಗೆ, ಹೆಂಡತಿ ಮಕ್ಕಳಿಗೆ ಮತ್ತು ಸ್ವತಃ ರಾಜೂಗೌಡ ಅವರಿಗೂ ದಿಗಿಲು ಹುಟ್ಟಿಸಿದೆ.

ಆಧ್ಯಾತ್ಮದೆಡೆಗೆ ಸೆಳೆತವಿದ್ದ ಇವರಿಗೆ ಜೂನ್ 5ರಂದು ಗುಲ್ಬರ್ಗ ಜಿಲ್ಲೆಯ ಜೇವರ್ಗಿ ತಾಲ್ಲೂಕಿನ ಕಡಕೋಳ ಮಡಿವಾಳೇಶ್ವರ ಮಠದ ಶ್ರೀಗಳ ಸಮ್ಮುಖದಲ್ಲಿ ದೀಕ್ಷೆ ಪಡೆದು ಸನ್ಯಾಸತ್ವ ಸ್ವೀಕರಿಸಿ, ಬಸಣ್ಣ ಅವರು ಶರಣರಾಗಿ ಪರಿವರ್ತಿತರಾಗಿದ್ದಾರೆ. ತಮ್ಮ ಮನೆ ಮಠ ಬಿಟ್ಟು ವಾಗಣಗೇರಾ ಗ್ರಾಮದ ಹೊರವಲಯದಲ್ಲಿ ಕುಟೀರ ನಿರ್ಮಿಸಿಕೊಂಡು ಮಠ ಸೇರಿಕೊಂಡಿದ್ದಾರೆ.

ಬಿಎ ಪದವೀಧರರಾದ ಬಸಣ್ಣ ಅವರಿಗೆ ಇಬ್ಬರು ಪತ್ನಿಯರಿದ್ದು, ಮೊದಲನೆ ಪತ್ನಿ ಅನಾರೋಗ್ಯದಿಂದ ಮೃತಪಟ್ಟಿದ್ದಾರೆ. ಎರಡನೇ ಪತ್ನಿಗೆ ಒಂದು ಗಂಡು, ಒಂದು ಹೆಣ್ಣು ಮಗುವಿದ್ದು, ಇವರು ಸುರಪುರದಲ್ಲಿ ನೆಲೆಸಿದ್ದಾರೆ. ಮಾಜಿ ಸಚಿವ ರಾಜುಗೌಡ ಅವರು ಚುನಾವಣೆಯಲ್ಲಿ ಸೋತಿರುವುದಕ್ಕೆ ನನಗೆ ನೋವಿದೆ, ಆದರೆ ಅದಕ್ಕೂ ಸನ್ಯಾಸತ್ವಕ್ಕೂ ಸಂಬಂಧವಿಲ್ಲ ಎಂದು ವೇದಾಂತಿಯಂತೆ ಮಾತಾಡುತ್ತಿದ್ದಾರೆ ಬಸಣ್ಣ ಶರಣರು.

ಬಸಣ್ಣ ಅವರ ಈ ದುಡುಕುತನದಿಂದಾಗಿ ಹೆಂಡತಿ ಮತ್ತು ಮಕ್ಕಳು ಚಿಂತೆಗೀಡಾಗಿದ್ದಾರೆ. ಇವರ ಮನವೊಲಿಸಿ ಎಂದು ಕೇಳುತ್ತಿದ್ದಾರೆ. ಆದರೆ ಬಸಣ್ಣ ಅವರು ಕೇಳುವ ಸ್ಥಿತಿಯಲ್ಲಿಯೇ ಇಲ್ಲ. ನಿರ್ಧರಿಸಿಯಾಗಿದೆ ಇನ್ನು ಹಿಂದೆ ಹೆಜ್ಜೆ ಇಡುವ ಪ್ರಮೇಯವೇ ಇಲ್ಲ ಎನ್ನುತ್ತಿದ್ದಾರೆ. ರಾಜುಗೌಡು ಅವರು ಸ್ವತಃ ಭೇಟಿಯಾಗಿ ಮನವೊಲಿಸಲು ಪ್ರಯತ್ನಿಸಿದರೂ ಬಸಣ್ಣ ಶಿವನ ಮುಂದಿನ ಬಸವಣ್ಣನಂತೆ ಕುಳಿತುಬಿಟ್ಟಿದ್ದಾರೆ.

ಅಂದ ಹಾಗೆ, ಭಾರತದಲ್ಲಿ ಎಷ್ಟು ಜನ ಸ್ವಾಮೀಜಿಗಳು, ಸನ್ಯಾಸಿಗಳು, ಸಾಧುಗಳು, ಕಾವಿವೇಷಧಾರಿಗಳು, ಆಶ್ರಮ ಕಟ್ಟಿದವರು, ಮಠ ಹುಟ್ಟಿಸಿದವರು ಇದ್ದಾರೋ ಬಲ್ಲವರಾರು? ಅಂಥವರ ಸಾಲಿಗೆ ಯಾದಗಿರಿ ಜಿಲ್ಲೆಯ ಸುರಪುರ ತಾಲೂಕಿನ ವಾಗಣಗೇರಾ ಗ್ರಾಮದ ಬಸಣ್ಣ ಕೂಡ ಸೇರ್ಪಡೆಯಾಗಿದ್ದಾರೆ. ಒಂದು ಶೆಡ್ಡು ಹಾಕಿಕೊಂಡು ಅಲ್ಲೇ ಧ್ಯಾನಮಗ್ನರಾಗಿದ್ದಾರೆ. ಮುಂದೆ ದೊಡ್ಡ ಮಠ ಕಟ್ತಾರಾ? ಇದೇನು ಜಾಣತನವಾ, ಹುಚ್ಚುತನವಾ, ಧೈರ್ಯವಾ ಅಥವಾ ಪಲಾಯನವಾದವಾ? [ಗಚ್ಚಿನಮಠದ ಸ್ವಾಮೀಜಿ ಅನುಮಾನಾಸ್ಪದ ಸಾವು]

English summary
This is interesting story of a person from Yadgir district, who embraced sanyas as promised to villagers during Karnataka assembly election 2013. He had promised that he would become sanyas if Raju Gowda loses election. Though he lost the bet, kept his word.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X