ಸದನ ಸ್ವಾರಸ್ಯ : ಸರ್ಕಾರಕ್ಕೆ ವಿಪಕ್ಷಗಳ ತರಾಟೆ

ಮುಂದಿನ 20 ವರ್ಷ ನಮ್ಮ ಪಕ್ಷವೇ ಅಧಿಕಾರದಲ್ಲಿರುತ್ತದೆ ಎಂದು ಹೇಳಿದರು ಇಂದು ವಿಪಕ್ಷ ಸ್ಥಾನದಲ್ಲಿ ಕುಳಿತಿದ್ದಾರೆ. ನಾನು ಹೇಳಿದಂತೆ ನಡೆದುಕೊಳ್ಳುತ್ತೇನೆ. ಐದು ವರ್ಷದ ಅಧಿಕಾರ ಪೂರ್ಣಗೊಳಿಸಿದ ನಂತರ, ನಾನು ವಿಧಾನಸಭೆ, ಲೋಕಸಭೆ ಅಥವ ರಾಜ್ಯಸಭೆ ಯಾವುದೇ ಚುನಾವಣೆಗೆ ಸ್ಪರ್ಧಿಸುವುದಿಲ್ಲ ಎಂದು ಸಿದ್ದರಾಮಯ್ಯ ಹೇಳಿದರು.
ವಿಪ್ಷಕಗಳು ಸಿದ್ದರಾಮಯ್ಯ ಒಂದು ವರ್ಷ ಮಾತ್ರ ಅಧಿಕಾರದಲ್ಲಿ ಇರುತ್ತಾರೆ ಎಂದು ಟೀಕಿಸಿದ್ದಕ್ಕೆ ಪ್ರತಿಯಾಗಿ ಇಂದು ಎಲ್ಲಾ ಪಕ್ಷಗಳಿಗೂ ಅನ್ವಯವಾಗುವಂತೆ ಉತ್ತರ ನೀಡಿದರು. ಬಿಜೆಪಿ ನಾಯಕರ ವಿರುದ್ಧ ಸಿದ್ದು ಈ ಮೂಲಕ ಪರೋಕ್ಷ ವಾಗ್ದಾಳಿ ನಡೆಸಿದರು.
250 ರೂ. ಕಥೆ : ವಿಧಾನಸಭೆಯಲ್ಲಿ ಜೆಡಿಎಸ್ ಶಾಸಕ 250 ರೂಪಾಯಿ ಕಥೆ ಹೇಳಿ ಗ್ರಾಮಪಂಚಾಯಿತಿಗಳ ಆಡಳಿತಕ್ಕೆ ಕನ್ನಡಿ ಹಿಡಿದರು. ಒಬ್ಬರು ಮಹಿಳಾ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಮತ್ತು ಪಿಡಿಒ ನಡುವೆ ಒಪ್ಪಂದವಾಗಿತ್ತು. ಪಿಡಿಓಗೆ ಯಾವುದೇ ಚೆಕ್ ಗಳನ್ನು ನೀಡಿ ಸಹಿ ಪಡೆದರೆ ಅಧ್ಯಕ್ಷರು 250 ರೂ. ಕೊಡಬೇಕಾಗಿತ್ತು.
ಅಧ್ಯಕ್ಷರು ಎಷ್ಟು ಮುಗ್ಧರಾಗಿದ್ದರು ಎಂದರೆ ತಮ್ಮ ಸಂಬಳದ ಚೆಕ್ ಗೆ ಸಹಿ ಮಾಡಿದಾಗಲೂ ಪಿಡಿಓಗೆ 250 ರೂ. ನೀಡುತ್ತಿದ್ದರು. ಇಂತಹ ಮುಗ್ಧರ ಮೇಲೆ ಪಂಚಾಯತ್ ರಾಜ್ ಕಾಯ್ದೆ ಜಾರಿಗೆ ತರಲು ಹೊರಟಿದ್ದೀರಿ ಎಂದು ಬಾಲಕೃಷ್ಣ ಪಂಚಾಯತ್ ರಾಜ್ ಕಾಯ್ದೆಗೆ ವಿರೋಧ ವ್ಯಕ್ತಪಡಿಸಿದರು.
ಸದನ ಪ್ರಾರಂಭ : ವಿಧಾನಸಭೆ ಅಧೀವೇಶನದ ಹತ್ತನೇ ದಿನ ಸರ್ಕಾರ ಮತ್ತು ಪ್ರತಿಪಕ್ಷಗಳ ನಡುವಿನ ವಾದ, ಪ್ರತಿವಾದಗಳಿಂದ ಆರಂಭಗೊಂಡಿದೆ. ಸದನದಲ್ಲಿ ಸರ್ಕಾರ ಮಂಡಿಸಿದ ಕರ್ನಾಟಕ ಪಂಚಾಯತ್ ರಾಜ್ ತಿದ್ದುಪಡಿ ವಿಧೇಯಕ ಪ್ರತಿಪಕ್ಷಗಳ ಕೆಂಗಣ್ಣಿಗೆ ಗುರಿಯಾಗಿದೆ.
ಬುಧವಾರ ಬೆಳಗ್ಗೆ 11 ಸದನ ಸಮಾವೇಶಗೊಂಡಿತು. ಸರ್ಕಾರ ಕರ್ನಾಟಕ ಪಂಚಾಯತ್ ರಾಜ್ ತಿದ್ದುಪಡಿ ವಿಧೇಯಕ 2013ನ್ನು ಮಂಡಿಸಿತು. ವಿಧೇಯಕದ ಮೇಲಿನ ಚರ್ಚೆ ಆರಂಭವಾದಾಗ ಬಿಜೆಪಿ ಸೇರಿದಂತೆ ವಿವಿಧ ಪ್ರತಿಪಕ್ಷಗಳು ವಿಧೇಯಕ್ಕೆ ಭಾರೀ ವಿರೋಧ ವ್ಯಕ್ತಪಡಿಸಿದರು.
ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್, ಸರ್ಕಾರ ಮಂಡಿಸಿದ ವಿಧೇಯಕಕ್ಕೆ ವಿರೋಧ ವ್ಯಕ್ತಪಡಿಸಿದರು. ಈ ವಿಧೇಯಕ ಸರಿಯಲ್ಲ. ಸರ್ಕಾರ ಮತ್ತೊಮ್ಮೆ ಇದನ್ನು ಪರಿಶೀಲಿಸಬೇಕೆಂದು ಒತ್ತಾಯಿಸಿದರು. ಪ್ರತಿಪಕ್ಷಗಳ ವಿರೋಧದಿಂದಾಗಿ ಸರ್ಕಾರ ವಿಧೇಯಕವನ್ನು ವಾಪಸ್ ಪಡೆದುಕೊಂಡಿದೆ.
ಗೃಹ ಬಂಧನ ಪ್ರಕರಣದ ಪ್ರತಿಧ್ವನಿ : ಬೆಂಗಳೂರಿನಲ್ಲಿ ಕೆಲವು ದಿನಗಳ ಹಿಂದೆ ಬೆಳಕಿಗೆ ಬಂದ ಯುವತಿಯ ಗೃಹ ಬಂಧನ ಪ್ರಕರಣ ಬುಧವಾರ ವಿಧಾನಪರಿಷತ್ತಿನಲ್ಲಿ ಪ್ರತಿಧ್ವನಿಸಿತು. ಸರ್ಕಾರ ಈ ಕುರಿತು ಹೇಳಿಕೆ ನೀಡಬೇಕು ಎಂದು ಬಿಜೆಪಿ ಸದಸ್ಯರು ಒತ್ತಾಯಿಸಿದರು. (ಹೆತ್ತವರಿಂದ ಗೃಹಬಂಧನ)
ಸದನಕ್ಕೆ ಉತ್ತರ ನೀಡಿದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಉಮಾಶ್ರೀ, ಯುವತಿಯನ್ನು ನಿಮ್ಹಾನ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ. ವೈದ್ಯರು ಸೂಕ್ತ ಚಿಕಿತ್ಸೆ ನೀಡುತ್ತಿದ್ದಾರೆ. ಹೇಮಾವತಿ ಸಹ ಚಿಕಿತ್ಸೆಗೆ ಸ್ಪಂದಿಸುತ್ತಿದ್ದಾಳೆ ಎಂದು ಲಿಖಿತ ಉತ್ತರ ನೀಡಿದರು.


Click it and Unblock the Notifications
