ನಿದ್ದೆ ಅಮಲಿನಲ್ಲಿ ಆತ ವರ್ಗಾಯಿಸಿದ್ದು ಎಷ್ಟು ಮೊತ್ತ!
ಬರ್ಲಿನ್, ಜೂ. 11: ಕಚೇರಿಯಲ್ಲಿ ಕೆಲಸ ಮಾಡುವಾಗ ನಿದ್ದೆ ಮಾಡಿದರೆ ಏನಾಗುತ್ತದೆ? ಇನ್ನೇನು ಕೆಲಸ ಕಳೆದುಕೊಳ್ಳಬೇಕಾಗುತ್ತದೆ ಎಂಬ ಉತ್ತರ ತಕ್ಷಣಕ್ಕೆ ಹೇಳಿಬಿಡಬಹುದು. ಆದರೆ, ಬ್ಯಾಂಕ್ ಉದ್ಯೋಗಿಯೊಬ್ಬ ನಿದ್ದೆ ಅಮಲಿನಲ್ಲಿ ಭಾರಿ ಮೊತ್ತದ ಹಣವನ್ನು ಒಂದು ಖಾತೆಯಿಂದ ಇನ್ನೊಂದು ಖಾತೆಗೆ ವರ್ಗಾಯಿಸಿದ ಘಟನೆ ಜರ್ಮನಿಯಲ್ಲಿ ನಡೆದಿದೆ.
ಕೆಲಸದ ಒತ್ತಡದಿಂದ ತುಂಬಾ ದಣಿದಿದ್ದ ಆ ಉದ್ಯೋಗಿ ತನ್ನ ಕಂಪ್ಯೂಟರ್ ಕೀಬೋರ್ಡ್ ಮೇಲೆಯೇ ಮಲಗಿದ್ದ. ಪರಿಣಾಮವಾಗಿ ಯಾವುದೋ ಒಂದು ಕೀಯ ಮೇಲೆ ಒತ್ತಡ ಬಿದ್ದು ವ್ಯಕ್ತಿಯೊಬ್ಬರ ಖಾತೆಗೆ ಸಣ್ಣ ಮೊತ್ತದ ಬದಲು ಬೃಹತ್ 22.2 ಕೋಟಿ ಯುರೋ ವರ್ಗಾವಣೆಯಾಗಿದೆ ಎಂಬುದಾಗಿ ಇಲ್ಲಿನ ಹೆಸನ್(Hessen) ಕಾರ್ಮಿಕ ನ್ಯಾಯಾಲಯಕ್ಕೆ ತಿಳಿಸಲಾಗಿದೆ.

ನಿವೃತ್ತ ವ್ಯಕ್ತಿಯೊಬ್ಬರ ಬ್ಯಾಂಕ್ ಖಾತೆಯಿಂದ ಕೇವಲ 62.40 ಯುರೋಗಳನ್ನು ಆತ ವರ್ಗಾಯಿಸಬೇಕಾಗಿತ್ತು. ಬದಲಿಗೆ ಒಂದು ಕ್ಷಣ ನಿದ್ದೆಯ ಮಡಿಲಿಗೆ ಜಾರಿದ ಅವರು ಕೀಬೋರ್ಡ್ ಮೇಲೆಯೇ ಒರಗಿದರು. ಕೀಬೋರ್ಡ್ ನಲ್ಲಿದ್ದ '2' ಕೀಯ ಮೇಲೆ ನಿರಂತರ ಒತ್ತಡ ಬಿದ್ದ ಪರಿಣಾಮ ಅವರು ವರ್ಗಾಯಿಸಬೇಕಾದ ಮೊತ್ತ 222,222,222.22 ಯುರೋ ಎಂದಾಯಿತು.
ಸ್ವಲ್ಪ ಹೊತ್ತಿನ ಬಳಿಕ ಬ್ಯಾಂಕಿಗೆ ತನ್ನ ತಪ್ಪಿನ ಅರಿವಾಯಿತು ಹಾಗೂ ತನ್ನ ತಪ್ಪನ್ನು ಸರಿಪಡಿಸಿಕೊಂಡಿತು. ಪರಿಶೀಲನೆಯ ವೇಳೆ ತಪ್ಪು ಹಾಗೆಯೇ ಉಳಿದುಕೊಳ್ಳಲು ಕಾರಣರಾದ ಬ್ಯಾಂಕಿನ ಇನ್ನೊಬ್ಬ ಉದ್ಯೋಗಿಯನ್ನು ಕೆಲಸದಿಂದ ತೆಗೆದುಹಾಕಲಾಯಿತು. ಇದನ್ನು ಪ್ರಶ್ನಿಸಿ ಆ ಉದ್ಯೋಗಿ ನ್ಯಾಯಾಲಯಕ್ಕೆ ಹೋದರು. 48 ವರ್ಷದ ಆ ಉದ್ಯೋಗಿಯನ್ನು ಕೆಲಸಕ್ಕೆ ಮತ್ತೆ ಸೇರಿಸಿಕೊಳ್ಳಬೇಕೆಂದು ನ್ಯಾಯಾಲಯ ತೀರ್ಪು ನೀಡಿದೆ. (ಪಿಟಿಐ)


Click it and Unblock the Notifications
