ಏಕಪಕ್ಷೀಯ ವಿಚ್ಛೇದನದ ವಿರುದ್ಧ ಸಿಡಿದೆದ್ದ ಮುಸ್ಲಿಂ ಮಹಿಳೆ

ಜೂನ್ 12, ಬುಧವಾರದಂದು ಭಾರತೀಯ ಮುಸ್ಲಿಂ ಮಹಿಳಾ ಆಂದೋಲನದ ಕಾರ್ಯಕರ್ತರು, ಮೌಖಿಕ ವಿಚ್ಛೇದನವನ್ನು ಸಂಪೂರ್ಣವಾಗಿ ರದ್ದುಗೊಳಿಸುವ ತಮ್ಮ ಬೇಡಿಕೆಯನ್ನು ಮುಂದಿಟ್ಟುಕೊಂಡು, ಬಳ್ಳಾರಿ, ಮುಂಬೈ, ಅಹಮದಾಬಾದ್, ಭೋಪಾಲ್, ಕಟಕ್, ಚೆನ್ನೈ, ಪಟ್ನಾ, ರಾಂಚಿ, ಬೆಂಗಳೂರು, ಜೈಪುರ ಹಾಗೂ ಕೊಲ್ಕೊತ್ತಾಗಳಲ್ಲಿ ಪ್ರತಿಭಟನೆ ನಡೆಸಿದರು.
ಮಹಿಳೆಯರ ಆಕ್ಷೇಪಣೆಯೇನು? : ಸ್ಕೈಪ್, ಫೇಸ್‌ಬುಕ್, ಎಸ್ಸೆಮ್ಮೆಸ್, ಇಮೇಲ್, ಫೋನ್, ಪತ್ರ ಇತ್ಯಾದಿ ಮಾಧ್ಯಮಗಳನ್ನು ಮುಸ್ಲಿಂ ಪುರುಷರು ತಮ್ಮ ಪತ್ನಿಯಿಂದ ವಿಚ್ಛೇದನ ಪಡೆಯಲು ಬಳಸಿಕೊಳ್ಳಲು ಪ್ರಾರಂಭಿಸಿದ್ದಾರೆ. ಈ ಕ್ರಮ ಕಾನೂನು ಬಾಹಿರವೆಂದು ಸಾರಬೇಕು ಎಂಬ ಮುಸ್ಲಿಂ ಮಹಿಳೆಯರ ನಿರಂತರ ಬೇಡಿಕೆಯಿದ್ದರೂ ಕೂಡ ಸರ್ಕಾರ ಇಂಥದ್ದೊಂದು ಮೌಖಿಕ ವಿಚ್ಛೇದನದ ಸಮಸ್ಯೆ ಅಸ್ತಿತ್ವದಲ್ಲಿದೆಯೆಂದು ಒಪ್ಪಿಕೊಳ್ಳಲು ನಿರಾಕರಿಸುತ್ತಿದೆ.
ಬೇಡಿಕೆಗಳು ಏನೇನು? : ಇಸ್ಲಾಂ ವಿರೋಧಿ ಮೌಖಿಕ ವಿಚ್ಛೇದನ ಕಾನೂನು ಬಾಹಿರ ಎಂದು ಘೋಷಿಸಬೇಕು. ಮುಸ್ಲಿಂ ಕೌಟುಂಬಿಕ ಕಾನೂನನ್ನು ಜಾರಿಗೊಳಿಸಬೇಕು. ಹಿಂದೂ, ಕ್ರೈಸ್ತ ಮತ್ತು ಪಾರ್ಸಿಗಳಂತೆ ಮುಸ್ಲಿಂರಿಗೂ ವೈಯಕ್ತಿಕ ಕಾನೂನು ಜಾರಿಯಾಗಬೇಕು.
ಕೊರಗು ಏನು? : ಭಾರತದಲ್ಲಿನ ಹಿಂದೂ, ಕ್ರೈಸ್ತ ಮತ್ತು ಪಾರ್ಸಿಗಳಿಗೆ ಪಾರ್ಲಿಮೆಂಟಿನಿಂದ ಅನುಮೋದಿಸಲ್ಪಟ್ಟ ವೈಯಕ್ತಿಕ ಕಾನೂನುಗಳಿವೆ. ಆದರೆ ಮುಸಲ್ಮಾನರಿಗೆ ಇರುವುದು ಕೇವಲ ಮುಸ್ಲಿಂ ಮದುವೆ ರದ್ದತಿ ಕಾಯಿದೆ 1939, ಹಾಗೂ ಮುಸ್ಲಿಂ ಮಹಿಳೆಯರ ರಕ್ಷಣಾ ಕಾಯಿದೆ 1986. ಶರಿಯತ್ ಕಾಯಿದೆ(1937)ಯಲ್ಲಿ ಯಾವುದೇ ಆದೇಶಾರ್ಥಕವಾದ ಕಾನೂನಿಲ್ಲ. ನ್ಯಾಯ ತೀರ್ಮಾನಗಳು ಮುಲ್ಲಾ, ತ್ಯಾಬ್ಜಿಯವರ ವಿವರಣೆಗಳನ್ನು ಅವಲಂಬಿಸಿವೆ. ಔಪಚಾರಿಕವಾದ ಕಾನೂನು ವ್ಯವಸ್ಥೆಯ ಹೊರಗಡೆ ಖಾಜಿ, ಉಲೇಮಾಗಳು ನ್ಯಾಯ ತೀರ್ಮಾನಗಳನ್ನು ನಡೆಸಲು, ಫಾತ್ವಾಗಳನ್ನು ಹೊರಡಿಸಲು ಮುಕ್ತರಾಗಿರುತ್ತಾರೆ. ಇವು ಕುರಾನನ್ನೂ, ಸಾಂವಿಧಾನಿಕ ಮೌಲ್ಯಗಳನ್ನೂ ಸಂಪೂರ್ಣವಾಗಿ ಉಲ್ಲಂಘಿಸುತ್ತದೆ.
ಮನವಿಪತ್ರ ಸಲ್ಲಿಕೆ : ರಾಜ್ಯ ಹಾಗೂ ರಾಷ್ಟ್ರೀಯ ಅಲ್ಪಸಂಖ್ಯಾತ ಆಯೋಗ, ರಾಜ್ಯ ಹಾಗೂ ರಾಷ್ಟ್ರೀಯ ಮಾನವ ಹಕ್ಕು ಆಯೋಗ, ರಾಷ್ಟ್ರೀಯ ಕಾನೂನು ಆಯೋಗ, ಹಾಗೂ ಪ್ರಧಾನಮಂತ್ರಿ ಡಾ .ಮನಮೋಹನ ಸಿಂಗ್ ಇವರುಗಳಿಗೆ ಮನವಿಯನ್ನು ಜಿಲ್ಲಾಧಿಕಾರಿಗಳ ಮುಖಾಂತರ ಸಲ್ಲಿಸಲಾಗಿದೆ.


Click it and Unblock the Notifications
