ಕೇರಳಕ್ಕೆ ಮುಂಗಾರು, 48 ಗಂಟೆಗಳಲ್ಲಿ ಕರ್ನಾಟಕಕ್ಕೆ

ಬರಗಾಲದಿಂದ ಮತ್ತು ಕುಡಿಯುವ ನೀರಿಲ್ಲದೆ ತತ್ತರಿಸಿರುವ ಕರ್ನಾಟಕಕ್ಕೆ ಇದಕ್ಕಿಂತ ಉತ್ತಮ ಸುದ್ದಿ ಮತ್ತೊಂದಿಲ್ಲ. ರಾಜ್ಯದ ಎಲ್ಲೆಡೆ ರೈತರು ಕೂಡ ಭೂಮಿಯ ಉಳುಮೆ ಮಾಡಿ, ನೆಲವನ್ನು ಹಸನು ಮಾಡಿ ಬೀಜ ಬಿತ್ತಲು ಅಣಿಯಾಗಿ ನಿಂತಿದ್ದಾರೆ. ಮಳೆಯ ಹನಿಗಳು ನೆಲವನ್ನು ಚುಂಬಿಸುತ್ತಿದ್ದಂತೆಯೆ ಬಿತ್ತನೆ ಕಾರ್ಯ ಆರಂಭವಾಗಲಿದೆ.
ಮುಂಗಾರು ಕೇರಳ ಪ್ರವೇಶಿಸಿದ್ದರಿಂದ ಕೇರಳದೆಲ್ಲೆಡೆ ಮತ್ತು ತಮಿಳುನಾಡಿನ ಅನೇಕ ಪ್ರದೇಶಗಳಲ್ಲಿ ಭಾರೀ ಮಳೆ ಸುರಿಯುತ್ತಿದೆ ಎಂದು ಭಾರತೀಯ ಹವಾಮಾನ ಇಲಾಖೆಯ ಪ್ರಧಾನ ನಿರ್ದೇಶಕ ಎಲ್.ಎಸ್. ರಾಥೋಡ್ ಅವರು ಹೇಳಿದ್ದಾರೆ.
ಮುಂದಿನ 24 ಗಂಟೆಗಳಲ್ಲಿ ಕೇರಳ ಮತ್ತು ತಮಿಳುನಾಡಿನ ಅನೇಕ ಭಾಗಗಳಲ್ಲಿ ಭಾರೀ ಮಳೆ ಸುರಿಯಲಿದೆ ಎಂದು ಹವಾಮಾನ ಇಲಾಖೆ ಎಚ್ಚರಿಸಿದೆ. ಮೀನುಗಾರರು ಸಮುದ್ರಕ್ಕೆ ಇಳಿಯದಂತೆ ಹವಾಮಾನ ತಜ್ಞರು ಎಚ್ಚರಿಕೆ ನೀಡಿದ್ದಾರೆ.
ಜೂನ್ ನಿಂದ ಸೆಪ್ಟೆಂಬರ್ ವರೆಗೆ ಇರುವ ಮುಂಗಾರು ಮಳೆಯನ್ನು ದೇಶದ ನೀರಾವರಿ ಇಲ್ಲದ ಶೇ.55ರಷ್ಟು ಪ್ರದೇಶ ನೆಚ್ಚಿಕೊಂಡಿದೆ. ಕಳೆದ ವರ್ಷ ಸಾಮಾನ್ಯ ಪ್ರಮಾಣಕ್ಕಿಂತ ಶೇ.8ರಷ್ಟು ಮಳೆ ಬಿದ್ದಿದ್ದರಿಂದ ಕರ್ನಾಟಕ ಸೇರಿದಂತೆ ಹಲವಾರು ರಾಜ್ಯಗಳು ಬರಗಾಲದಿಂದ ತತ್ತರಿಸಿದ್ದವು. ಈ ಬಾರಿಯಾದರೂ ಸಾಮಾನ್ಯ ಮಳೆಯಾಗಿ ನೀರಿನ ಕೊರತೆಯನ್ನು ನೀಗಿಸಲಿ ಎಂದು ಎಲ್ಲರ ನಿರೀಕ್ಷೆಯಾಗಿದೆ.
ರಾಜ್ಯಾದ್ಯಂತ ಮಳೆ : ಕರ್ನಾಟಕದಾದ್ಯಂತ ಮುಂಗಾರುಪೂರ್ವ ಮಳೆ ಸುರಿಯುತ್ತಿದ್ದು, ಬೆಂಗಳೂರು, ಕೊಪ್ಪಳ, ರಾಯಚೂರು ಜಿಲ್ಲೆಯ ಸಿಂಧನೂರು, ಹಾಸನ ಜಿಲ್ಲೆಯ ಬೇಲೂರಿನಲ್ಲಿ ಕಳೆದ 24 ಗಂಟೆಗಳಲ್ಲಿ 10 ಸೆಂ.ಮೀ. ಮಳೆಯಾಗಿದೆ. ಕೊಪ್ಪಳ ಜಿಲ್ಲೆಯ ಗಂಗಾವತಿ, ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ, ಬೆಂಗಳೂರು ಜಿಲ್ಲೆಯ ಸೋಮಪುರದಲ್ಲಿ 9 ಸೆಂ.ಮೀ. ಮಳೆ ಬಿದ್ದಿದೆ.


Click it and Unblock the Notifications
