ಪ್ರತಿಪಕ್ಷ ನಾಯಕ ಎಚ್ಡಿಕೆ ಕಾಲೆಳೆಯಲು ಸಿದ್ದು ಪಡೆ ಸನ್ನದ್ದ
ಬೆಂಗಳೂರು, ಜೂನ್ 1- ಜೆಡಿಎಸ್ ರಾಜ್ಯಾಧ್ಯಕ್ಷ ಎಚ್‌ಡಿ ಕುಮಾರಸ್ವಾಮಿ ಅವರೇನೋ ಅಸೆಂಬ್ಲಿಯಲ್ಲಿ ಪ್ರತಿಪಕ್ಷ ನಾಯಕರಾಗಿ ವಿರಾಜಮಾಣರಾಗಿರುವುದು ಸರಿಯಷ್ಟೇ. ಆದರೆ ಅದು ಕಾಂಗ್ರೆಸ್ ಪಕ್ಷಕ್ಕೆ ಅದರಲ್ಲೂ ಕಾಂಗ್ರೆಸ್ ಮುಖ್ಯಮಂತ್ರಿ ಸಿದ್ದರಾಮಯ್ಯಗೆ ಪಸಂದ್ ಆಗಿಲ್ಲ. ಸಿದ್ದರಾಮಯ್ಯ ಮತ್ತು ದೊಡ್ಡಗೌಡರ ಕುಟುಂಬದ ನಡುವಣ ವಿರಸ ಗಮನಿಸುತ್ತಾ ಬಂದವರಿಗೆ ಅದರಲ್ಲಿ ಹೊಸತೇನೂ ಇಲ್ಲ ಎಂಬುದು ಗೊತ್ತಾಗುತ್ತದೆ.
ಈ ಬೆಳವಣಿಗೆಗಳ ಬಗ್ಗೆ ಆ೦ತರ್ಯದಲೇ ಕುದ್ದು ಹೋಗಿರುವ ಕುಮಾರಸ್ವಾಮಿ ಅವರೇ ಇದನ್ನು ಖುದ್ದು ಬಹಿರಂಗಪಡಿಸಿದ್ದಾರೆ. ಒಂದು ವೇಳೆ ಕುಮಾರಸ್ವಾಮಿ ಹೇಳಿದಂತೆ ಕಾಂಗ್ರೆಸ್ ಏನಾದರೂ ಇಂತಹ ಪ್ರಯತ್ನಕ್ಕೆ 'ಕೈ'ಹಾಕಿದ್ದೇ ಆದರೆ ಅದು ನಾಡಿನ ದೌರ್ಭಾಗ್ಯವೇ ಸರಿ.
ಕುಮಾರಣ್ಣ ಪದಚ್ಯುತಿಗೆ ಹಸ್ತೋದಕ:

ಹಾಗೆ ನೋಡಿದರೆ ಕುಮಾರಸ್ವಾಮಿಯವರದ್ದೂ ಹಗ್ಗದ ಮೇಲಿನ ನಡಿಗೆಯೇ. ಅತ್ಯಂತ ಸರಳ ಬೀಜಗಣಿತದ ಪ್ರಕಾರ ಒಂದೇ ಒಂದು ಸೀಟಿನಿಂದ ಕುಮಾರಣ್ಣ ಬಿಜೆಪಿಯಿಂದ ಮುಂದಿದ್ದಾರೆ. ಆ ಒಂದು ಸೀಟು ಆ ಕಡೆ ಈ ಕಡೆ ವಾಲಿದರೂ ಕುಮಾರಸ್ವಾಮಿ ಅವರು ಪ್ರತಿಪಕ್ಷ ಸ್ಥಾನ ವಂಚಿತರಾಗುತ್ತಾರೆ.
ಹಾಗಾಗಿಯೇ ಸಿಎಂ ಸಿದ್ದು 'ಆ ಒಂದೇ ಸ್ಥಾನ ಏಕೆ ನಾಲ್ಕಾರು ಸ್ಥಾನಗಳನ್ನು ಉರುಳಿಸಿ. ನಡೆಯಲಿ ಆಪರೇಷನ್ ಹಸ್ತಾಂತರ' ಎಂದು ಹಸ್ತೋದಕ ನೀಡಿರುವುದಾಗಿ ಕುಮಾರಸ್ವಾಮಿ ನಿನ್ನೆ ಪ್ರತಿಪಕ್ಷ ನಾಯಕನಾಗಿ ಅಧಿಕೃತವಾಗಿ ಘೋಷಣೆಯಾಗುತ್ತಿದ್ದಂತೆ ಅಲ್ಲೇ ವಿಧಾನಸೌಧದ ಮೊಗಸಾಲೆಯಲ್ಲಿ ಸಿದ್ದರಾಮಯ್ಯಗೆ ಕೇಳಿಸುವಷ್ಟು ಜೋರಾಗಿ ಕೂಗಿದ್ದಾರಂತೆ.
ಜೆಡಿಎಸ್ ಶಾಸಕರಾದ ಅಖಂಡ ಶ್ರೀನಿವಾಸಮೂರ್ತಿ (ಪುಲಕೇಶಿ ನಗರ), ಪಿಳ್ಳ ಮುನಿಶಾಮಪ್ಪ (ದೇವನಹಳ್ಳಿ), ಡಾ.ಕೆ ಶ್ರೀನಿವಾಸಮೂರ್ತಿ (ನೆಲಮಂಗಲ) ಮತ್ತು ಬಿಬಿ ನಿಂಗಯ್ಯ (ಮೂಡಿಗೆರೆ) ಅವರನ್ನು ಸೆಳೆಯಲು ಕಾಂಗ್ರೆಸ್ ಇನ್ನಿಲ್ಲದ ಪ್ರಯತ್ನ ನಡೆಸುತ್ತಿದೆಯಂತೆ. ಅಧಿವೇಶನದ ನಂತರ ಈ ಕುತಂತ್ರವನ್ನು ಕಾಂಗ್ರೆಸ್ ಸಾಕಾರಗೊಳಿಸಲಿದೆ ಎಂಬ ಮಾಹಿತಿಯೂ ಕುಮಾರಣ್ಣಗೆ ಸಿಕ್ಕಿದೆಯಂತೆ.
'ಕುಮಾರಸ್ವಾಮಿ ಸಂಸದರಾಗಿದ್ದ ಸಂದರ್ಭದಲ್ಲೇ ಬಿಜೆಪಿ ಸರಕಾರದ ಸಾಕಷ್ಟು ಹಗರಣಗಳನ್ನು ಬಯಲಿಗೆ ತಂದಿದ್ದರು. ಅಧಿಕೃತ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಅವರಿಗಿಂತ ಸಕ್ರಿಯರಾಗಿ ಮತ್ತು ಯಶಸ್ವಿಯಾಗಿ ಕೆಲಸ ಮಾಡಿದ್ದರು. ಹೀಗೆ ಅನಧಿಕೃತ ಪ್ರತಿಪಕ್ಷ ನಾಯಕನಾಗಿ ಮಿಂಚಿದ್ದ ಕುಮಾರಸ್ವಾಮಿ, ಇದೀಗ ವಿಧಾನಸಭೆಗೆ ಆಯ್ಕೆಯಾಗಿರುವುದು ಮಾತ್ರವಲ್ಲ, ಪ್ರತಿಪಕ್ಷ ನಾಯಕನಾಗಿ ಸಿದ್ದರಾಮಯ್ಯ ಅವರ ಎದುರಿಗೇ ಬಂದು ಕುಳಿತಿದ್ದಾರೆ. ಹೀಗಾಗಿ ಆತಂಕಗೊಂಡಿರುವ ಕಾಂಗ್ರೆಸ್ ಮುಖಂಡರು, ಕುಮಾರಸ್ವಾಮಿಗಿಂತ ಸಾಧುಸ್ವಭಾವದ ಜಗದೀಶ್ ಶೆಟ್ಟರ್ ಅವರೇ ಮೇಲು ಎಂಬ ಅಭಿಪ್ರಾಯಕ್ಕೆ ಬಂದಿದ್ದಾರೆ' ಎಂದು ಜೆಡಿಎಸ್ ಮುಖಂಡರೊಬ್ಬರು ಹಕೀಕತ್ತನ್ನು ಬಿಚ್ಚಿಡುತ್ತಾರೆ.
ಜತೆಗೆ, ಆಗಲೇ ಹೇಳಿದಂತೆ ವೈಯಕ್ತಿಕವಾಗಿಯೂ ಕುಮಾರಸ್ವಾಮಿ ಮತ್ತು ಸಿದ್ದರಾಮಯ್ಯ ನಡುವಿನ ಸಂಬಂಧ ಹಳಸಿದೆ. ಈ ಹಿನ್ನೆಲೆಯಲ್ಲಿ ಪ್ರತಿ ಹಂತದಲ್ಲೂ ಸರಕಾರದ ಓಟಕ್ಕೆ ಕುಮಾರಸ್ವಾಮಿ ಅಡ್ಡಗಾಲು ಹಾಕುತ್ತಾರೆ ಎಂಬ ಆತಂಕದಲ್ಲಿ ಜೆಡಿಎಸ್ ಶಾಸಕರಿಗೆ ನಿಗಮ, ಮಂಡಳಿಯ ಆಸೆ ತೋರಿಸಿ ಗಾಳ ಹಾಕಲಾಗುತ್ತಿದೆ ಎಂದೂ ಆ ಮುಖಂಡರು ಕಾಮೆಂಟರಿ ಕೊಟ್ಟಿದ್ದಾರೆ.


Click it and Unblock the Notifications
