ಗುಟ್ಕಾ, ವಿಡಿಯೋ ಪಾರ್ಲರ್ ನಿಷೇಧ, ಮುಂದೇನು?

ಗುಟ್ಕಾದಲ್ಲಿ ನಿಕೋಟಿನ್ ಸೇರಿದಂತೆ ಹಲವು ರೀತಿಯ ರಾಸಾಯನಿಕಗಳನ್ನು ಬಳಸಲಾಗಿರುತ್ತದೆ. ಇದರಿಂದ ರಾಜ್ಯದ ಜನತೆಯ ಆರೋಗ್ಯಕ್ಕೆ ಹಾನಿಯಾಗುತ್ತದೆ. ಇದಕ್ಕೆ ಆಸ್ಪದ ನೀಡಲು ಸರ್ಕಾರ ಸಿದ್ಧ ಇಲ್ಲ. ಅಡಿಕೆ ಬೆಳೆಗಾರರಿಗೆ ಸುಪಾರಿ ಸೇರಿದಂತೆ ಇತರೆ ರೀತಿಯ ಪದಾರ್ಥಗಳಿಗೆ ಅನುಕೂಲ ಮಾಡಿಕೊಡಲಾಗುತ್ತದೆ. ಗುಟ್ಕಾ ಮಾತ್ರ ನಿಷೇಧಿಸಲಾಗಿದ್. ಸುಪಾರಿ ಅಲ್ಲ ಎಂದು ಆರೋಗ್ಯ ಸಚಿವ ಯು.ಟಿ ಖಾದರ್ ಸ್ಪಷ್ಟಪಡಿಸಿದ್ದಾರೆ.
ಸುಪ್ರೀಂಕೋರ್ಟ್ ಆದೇಶದಂತೆ ರಾಜ್ಯದಲ್ಲಿ ಗುಟ್ಕಾ ನಿಷೇಧಿಸಬೇಕು ಎಂದು ಆರೋಗ್ಯ ಇಲಾಖೆಯಿಂದ ಮುಖ್ಯಮಂತ್ರಿ ಕಚೇರಿಗೆ ಒಂದು ವಾರದ ಹಿಂದೆಯೇ ಮನವಿ ಸಲ್ಲಿಸಲಾಗಿತ್ತು. ಇದಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೂ ಸಮ್ಮತಿಸಿದ್ದಾರೆ. ಅದಕ್ಕೆ ಅವರು ಅಂಕಿತವನ್ನೂ ಹಾಕಿದ್ದು, ಸರ್ಕಾರಿ ಆದೇಶ ಶುಕ್ರವಾರ ಪ್ರಕಟಿಸಲಾಗಿದೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದಲ್ಲಿ ಗುರುವಾರ ನಡೆದ ಮಂತ್ರಿಗಳ ಪರಿಷತ್‌ನಲ್ಲೂ ಗುಟ್ಕಾ ನಿಷೇಧ ಸಂಬಂಧ ಚರ್ಚೆ ಆಗಿದೆ. ಕೆಲವು ಸಚಿವರು ಇದಕ್ಕೆ ವಿರೋಧ ವ್ಯಕ್ತಪಡಿಸಿದ್ದರು.
ಬಿಜೆಪಿಯ ನಾಯಕರಾದ ವಿಶ್ವೇಶ್ವರ ಹೆಗಡೆ ಕಾಗೇರಿ, ನಳೀನ್ ಕುಮಾರ್ ಕಟೀಲ್, ಡಿ.ಎನ್ ಜೀವರಾಜ್ ಅವರು ಸರ್ಕಾರದ ಆದೇಶಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ. ದೇಶದಲ್ಲಿ ಇದುವರೆಗೆ 24 ರಾಜ್ಯಗಳಲ್ಲಿ ಮತ್ತು 3 ಕೇಂದ್ರಾಡಳಿತ ಪ್ರದೇಶದಲ್ಲಿ ಗುಟ್ಕಾ ನಿಷೇಧವಿದೆ. ಪ್ಲಾಸ್ಟಿಕ್ ಸ್ಯಾಚೆಯಲ್ಲಿ ತಂಬಾಕು ಪದಾರ್ಥ ಮಾರಾಟವನ್ನು ಸುಪ್ರೀಂಕೋರ್ಟ್ ಈಗಾಗಲೇ ನಿಷೇಧಿಸಿದೆ.
ಆಹಾರ ಭದ್ರತೆ ಹಾಗೂ ಗುಣಮಟ್ಟ(ಮಾರಾಟ ನಿರ್ಬಂಧ ಹಾಗೂ ನಿಷೇಧ) ಕಾಯ್ದೆ 2011 ಹಾಗೂ ಆಹಾರ ಭದ್ರತೆ ಕಾಯ್ದೆ 2006ರ ಅನ್ವಯ ಇದು ಜಾರಿಗೊಳ್ಳಲಿದೆ. ಆಹಾರ ಉತ್ಪನ್ನಗಳಲ್ಲಿ (2,3,4) ತಂಬಾಕು ಹಾಗೂ ನಿಕೋಟಿನ್ ಬಳಕೆ ನಿರ್ಬಂಧಿಸಲಾಗುತ್ತದೆ.
ವಿಡಿಯೋ ಪಾರ್ಲರ್ ನಿಷೇಧ: ಬೆಂಗಳೂರು ನಗರ ಪೊಲೀಸರ ಮಾಹಿತಿ ಮೇರೆಗೆ ಅನೈತಿಕ ಚಟುವಟಿಕೆ ತಾಣಗಳಾಗುತ್ತಿರುವ ವಿಡಿಯೋ ಗೇಮ್ಸ್ ಪಾರ್ಲರ್ ಗಳನ್ನು ಬಂದ್ ಮಾಡುವಂತೆ ಸರ್ಕಾರ ಆದೇಶ ಹೊರಡಿಸಿದೆ.
ಮೆಜೆಸ್ಟಿಕ್, ಎಂಜಿ ರಸ್ತೆ, ಕೋರಮಂಗಲ, ಎಚ್ ಎಸ್ ಆರ್ ಲೇಔಟ್ ಸೇರಿದಂತೆ ನಗರದ ಹೊರವಲಯದ ಕೆಲವು ಪ್ರದೇಶಗಳಲ್ಲಿ ಸುಮಾರು 250ಕ್ಕೂ ಅಧಿಕ ವಿಡಿಯೋ ಪಾರ್ಲರ್ ಗಳು ಕಾರ್ಯ ನಿರ್ವಹಿಸುತ್ತಿದೆ.
ಈ ವಿಡಿಯೋ ಪಾರ್ಲರ್ ಗಳು ಜೂಜಿನ ಅಡ್ಡೆ ಹಾಗೂ ಪಿಂಪ್ ಗಳ ಆವಾಸ ಸ್ಥಾನವಾಗುತ್ತಿದೆ ಎಂಬ ಮಾಹಿತಿ ಬಂದ ಹಿನ್ನೆಲೆಯಲ್ಲಿ ಈ ಕ್ರಮ ಜರುಗಿಸಲಾಗಿದೆ ಎಂದು ಗೃಹ ಸಚಿವ ಕೆಜೆ ಜಾರ್ಜ್ ವಿವರಿಸಿದ್ದಾರೆ.












Click it and Unblock the Notifications