ಇನ್ಫಿ ಮೇಲೆ ಮತ್ತೆ ಬಿತ್ತು 582 ಕೋಟಿ ತೆರಿಗೆ ನೋಟಿಸ್

ಇದು 2009ರ ಆರ್ಥಿಕ ವರ್ಷಕ್ಕೆ ಅನ್ವಯವಾಗುವ ಬಾಕಿ. ಆದರೆ ಅದಕ್ಕೂ ಮುನ್ನ 2005ರಿಂದ ಸತತ ನಾಲ್ಕು ವರ್ಷಗಳಿಗೆ Infosys Technologies Ltd ಸುಮಾರು 1,175 ಕೋಟಿ ರೂ. ತೆರಿಗೆ ಪೆಂಡಿಂಗ್ ಇದೆ. ಈ ಸಂಬಂಧ, ಇನ್ಫಿಗೆ ಹೊಸದಾಗಿ ನೋಟಿಸ್ ನೀಡಿರುವ ಆದಾಯ ತೆರಿಗೆ ಇಲಾಖೆಯು ತಕ್ಷಣ ಬಾಕಿ ಮೊತ್ತ ಪಾವತಿಸುವಂತೆ ತಾಕೀತು ಮಾಡಿದೆ. ಇದರಿಂದ ಪ್ರತಿಷ್ಠಿತ ಇನ್ಫೋಸಿಸ್ ಕಂಪನಿಯ ತೆರಿಗೆ ಸಂಕಷ್ಟ ಮತ್ತಷ್ಟು ಬಿಗಡಾಯಿಸಿದೆ.
ಇನ್ಫೋಸಿಸ್ 2005ರಿಂದ 2008ರ ವರೆಗೆ ನಡೆಸಿರುವ ಸಾಫ್ಟ್‌ವೇರ್ ರಫ್ತು ವಹಿವಾಟು ಮತ್ತು ಒಟ್ಟಾರೆ ವಹಿವಾಟನ್ನು ಪರಿಗಣಿಸಿ, ಆದಾಯ ತೆರಿಗೆ ಇಲಾಖೆ ತೆರಿಗೆ ಬೇಡಿಕೆಯ ನೋಟಿಸ್ ಜಾರಿ ಮಾಡಿದೆ. ದೇಶದ ಹೊರಗೆ ಎಸ್‌ಟಿಪಿ ಘಟಕಗಳು ಮತ್ತು ವಿಶೇಷ ಆರ್ಥಿಕ ವಲಯಗಳಲ್ಲಿ ಸಂಪಾದಿಸಿರುವ ಲಾಭಾಂಶಕ್ಕೆ ಸಂಬಂಧಿಸಿದಂತೆ 2007 ಮತ್ತು 2008ರ ಸಾಲಿನ ತೆರಿಗೆ ಪಾವತಿಸಬೇಕು ಎಂದು ಆದಾಯ ತೆರಿಗೆ ಇಲಾಖೆ ಸೂಚಿಸಿದೆ ಎಂದು ಇನ್ಫೋಸಿಸ್ ವಿವರ ನೀಡಿದೆ.
ಆದರೆ ಜಪ್ಪಯ್ಯ ಅಂದರೂ ತಾನು ಈ ತೆರಿಗೆ ಮೊತ್ತವನ್ನು ಪಾವತಿಸುವುದಿಲ್ಲ ಎಂದಿರುವ ಇನ್ಫೋಸಿಸ್ ಈ ಹಿಂದಿನಂತೆ ಮತ್ತೆ ಕಾನೂನು ಹೋರಾಟ ನಡೆಸುವುದಾಗಿ ತಿಳಿಸಿದೆ. 2005ರಿಂದ ಅನ್ವಯವಾಗುವಂತೆ ನಾಲ್ಕು ವರ್ಷಗಳ 1,175 ಕೋಟಿ ರೂ. ತೆರಿಗೆ ಬಾಕಿ ಪಾವತಿಸುವುದರ ವಿರುದ್ಧವೂ ಇನ್ಫೋಸಿಸ್ ಕಾನೂನು ಸಮರ ನಡೆಸುತ್ತಿದೆ.
ಅದಾದ ನಂತರ, 2009ರ ಆರ್ಥಿಕ ವರ್ಷಕ್ಕೆ ಸಂಬಂಧಿಸಿದಂತೆ ಬೆಂಗಳೂರು ಆದಾಯ ತೆರಿಗೆ ಆಯುಕ್ತರ ಕಾರ್ಯಾಲಯವು ಮೇ 2ರಂದು ಹೊಸದಾಗಿ ನೋಟಿಸ್ ನೀಡಿದೆ.












Click it and Unblock the Notifications