ಪ್ರಧಾನಿ ಕಚೇರಿ 1.4 ಕೋಟಿ ರೂ. ಖರ್ಚು ಮಾಡಿದ್ದೇಕೆ?

ಹೈದರಾಬಾದ್ ಮೂಲದ ಸಯ್ಯದ್ ಶಾ ಅಲಿ ಹುಸೇನಿ ಮಾಹಿತಿ ಹಕ್ಕು ಕಾಯಿದೆ ಪ್ರಕಾರ ಸಲ್ಲಿಸಿದ್ದ ಅರ್ಜಿಗೆ ಉತ್ತರಿಸಿರುವ ನವದೆಹಲಿ ಪ್ರಧಾನಿ ಕಚೇರಿ (ಪಿಎಂಒ), ಭೋಜನ ಕೂಟ ಸಂಘಟಿಸಿರುವ ದಿನಾಂಕ ಸೇರಿದಂತೆ ಉಳಿದ ಮಾಹಿತಿಗಳನ್ನು ಭದ್ರತಾ ಕಾರಣಗಳಿಂದಾಗಿ ನೀಡಲಾಗುವುದಿಲ್ಲ ಎಂದು ಹೇಳಿದೆ.
2007ರಲ್ಲಿ ಎಡರಂಗದ ಸಮನ್ವಯ ಸಮಿತಿಗಾಗಿ ಏರ್ಪಡಿಸಲಾಗಿದ್ದ ಭೋಜನ ಕೂಟಕ್ಕಾಗಿಯೇ ಸುಮಾರು 5 ಲಕ್ಷ ರೂ.ಗಳನ್ನು ವ್ಯಯಿಸಲಾಗಿದೆ ಎಂದು ತಿಳಿದು ಬಂದಿದೆ. ಈ ಸಮಯದಲ್ಲಿ ನಾಗರಿಕ ಪರಮಾಣು ಸಹಕಾರ ಒಪ್ಪಂದದ ವಿಷಯದಲ್ಲಿ ಎಡಪಕ್ಷಗಳು ಸರ್ಕಾರದೊಂದಿಗೆ ಮುನಿಸಿಕೊಂಡಿದ್ದವು.
ಸರ್ಕಾರಕ್ಕೆ ನೀಡಿದ ಬೆಂಬಲ ಹಿಂಪಡೆದಿದ್ದವು. ಆಗ ಪ್ರಧಾನಿ ಕಚೇರಿಯಲ್ಲಿ ಭೋಜನ ಕೂಟ ಸಂಘಟಿಸಿ ಎಡಪಕ್ಷಗಳ ಮನವೊಲಿಸಲು ಯುಪಿಎ ಸುಮಾರು 5 ಲಕ್ಷ ವ್ಯಯಿಸಿದೆ. ಆದರೆ, ಈ ಭೋಜನ ಕೂಟದಲ್ಲಿ ಯಾರು ಭಾಗಿಯಾಗಿದ್ದರು ಎಂಬ ಮಾಹಿತಿ ತಿಳಿದುಬಂದಿಲ್ಲ.
ದೇಶವು ಬಡತನ, ಆಹಾರ ಬಿಕ್ಕಟ್ಟು ಹಾಗೂ ಹಣದುಬ್ಬರದಂತಹ ಪರಿಸ್ಥಿತಿ ಎದುರಿಸುತ್ತಿರುವಾಗ ರಾಜಕೀಯ ಲಾಭಕ್ಕಾಗಿ ತೆರಿಗೆದಾರರ ಹಣವನ್ನು ಪೋಲು ಮಾಡಲಾಗಿದೆ ಎಂದು ಅರ್ಜಿದಾರರು ದೂರಿದ್ದಾರೆ.
2004 ರಿಂದ 2013ರ ನಡುವೆ ಪ್ರಧಾನಿ ಕಚೇರಿಯಲ್ಲಿ ಏರ್ಪಡಿಸಿದ್ದ 20 ಭೋಜನ ಕೂಟಗಳಲ್ಲಿ ಒಟ್ಟು 3,064 ಅತಿಥಿಗಳು ಭಾಗವಹಿಸಿದ್ದರು ಎಂದು ಕಚೇರಿ ಮಾಹಿತಿ ನೀಡಿದೆ. ಕೇವಲ 20 ಭೋಜನ ಕೂಟಗಳಿಗೆ ಒಂದು ಕೋಟಿ ಖರ್ಚು ಮಾಡಲಾಗಿದೆಯೇ ಎಂಬ ಪ್ರಶ್ನೆ ಉದ್ಭವವಾಗಿದೆ.
ಎಷ್ಟು ಖರ್ಚು : ಪ್ರಧಾನಿ ಕಚೇರಿಯೇ ನೀಡಿರುವ ಮಾಹಿತಿ ಅನ್ವಯಭೋಜನ ತಯಾರಿಗೆ 60 ಲಕ್ಷ ರೂ, ಶಾಮಿಯಾನ ಹಾಕಲು 57 ಲಕ್ಷ ರೂ , ವಿದ್ಯುತ್ ದೀಪಾಲಂಕಾರಕ್ಕೆ 15 ಲಕ್ಷ ಖರ್ಚು ಮಾಡಲಾಗಿದೆ.
ಕಚೇರಿಯ ಹೂವಿನ ಅಲಂಕಾರಕ್ಕೆ 7 ಲಕ್ಷ ರೂ. ವ್ಯಯಿಸಲಾಗಿದೆ. ಒಟ್ಟಾರೆ ಸರಾಸರಿ, ಪ್ರತಿಯೊಬ್ಬ ಅತಿಥಿಗೆ ಸರ್ಕಾರ ತಲಾ 4,478 ರೂ. ವ್ಯಯಿಸಿದೆ ಎಂಬುದು ಅಂಕಿ ಸಂಖ್ಯೆಗಳ ಸಾರಾಂಶ.
ಇಪ್ಪತ್ತು ಭೋಜನ ಕೂಟಗಳಲ್ಲಿ ಭಾಗವಹಿಸಿದವರ ಹೆಸರುಗಳನ್ನು ಭದ್ರತಾ ಕಾರಣಗಳಿಂದಾಗಿ ಬಹಿರಂಗ ಪಡಿಸಲು ಸಾಧ್ಯವಿಲ್ಲ ಎಂದು ಪ್ರಧಾನಿ ಕಚೇರಿ ತಿಳಿಸಿದೆ. ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿರುವ ಅರ್ಜಿದಾರರು, ಭಾಗವಹಿಸಿದರ ಹೆಸರು ನೀಡಿದರೆ ಎಂತಹ ಭದ್ರತೆ ಲೋಪವಾಗುತ್ತದೆ ಎಂದು ಪ್ರಶ್ನಿಸಿದ್ದಾರೆ. ಅಲ್ಲದೆ ಭೋಜನ ಕೂಟದ ದಿನಾಂಕಗಳನ್ನು ನೀಡುವಂತೆ ಕೋರಿದ್ದಾರೆ.












Click it and Unblock the Notifications