ಚೊಚ್ಚಲ ಮಹಿಳಾ ಯೋಧೆ ಶಾಂತಿ ನಿಗೂಢ ಆತ್ಮಹತ್ಯೆ

ಪಶ್ಚಿಮ ಬಂಗಾಲದ ಜಲ್‌ಪಾಯಿಗುರಿ ಜಿಲ್ಲೆಯ ರೈಲ್ವೆ ಆಸ್ಪತ್ರೆಯಲ್ಲಿ ನೇಣು ಹಾಕಿಕೊಂಡು ಶಾಂತಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಅಲಿಪುರ್ ದೌರ್ ರೈಲ್ವೆ ಆಸ್ಪತ್ರೆಯ ಶೌಚಾಲಯದಲ್ಲಿ ನೇಣುಹಾಕಿಕೊಂಡ ಸ್ಥಿತಿಯಲ್ಲಿ ಶಾಂತಿ ಅವರ ದೇಹ ಕಂಡುಬಂದಿತ್ತು. ಶಾಂತಿ ಸಾವು ಹಲವು ಅನುಮಾನಗಳಿಗೆ ಕಾರಣವಾಗಿದೆ.
ಕಳೆದ ವಾರ ಗ್ರಾಮದ ಸಮೀಪ ರೈಲ್ವೆ ಹಳಿ ಬಳಿ ಅವರನ್ನು ಮರವೊಂದಕ್ಕೆ ಕಟ್ಟಿಹಾಕಲಾಗಿತ್ತು. ನಂತರ, ಅಪರಿಚಿತರು ತನ್ನನ್ನು ಅಪಹರಿಸಿದ್ದಾರೆ ಎಂದು ಶಾಂತಿ ಹೇಳಿಕೊಂಡಿದ್ದರು. ಆಗ ಅವರನ್ನು ಆಸ್ಪತ್ರೆಗೆ ಸೇರಿಸಲಾಗಿತ್ತು.
ಶೌಚಾಲಯದಿಂದ ಶಾಂತಿ ಎಷ್ಟು ಹೊತ್ತಾದರೂ ಹೊರಗೆ ಬಾರದಿದ್ದಾಗ ಅವರ ಪುತ್ರ ಶೌಚಾಲಯದ ಬಾಗಿಲು ಒಡೆದು ಒಳಹೋಗಿ ನೋಡಿದಾಗ ತಾಯಿ ನೇಣಿಗೆ ಬಿಗಿದುಕೊಂಡಿರುವುದು ಕಂಡುಬಂದಿದೆ.
ಎರಡು ಮಕ್ಕಳ ತಾಯಿ ಶಾಂತಿ ತಿಗ್ಗಾ ಅವರು 2004 ರಲ್ಲಿ ರೈಲ್ವೆಯಲ್ಲಿ ಉದ್ಯೋಗದಲ್ಲಿದ್ದ ಪತಿಯನ್ನು ಕಳೆದುಕೊಂಡಿದ್ದರು. 2005ರಲ್ಲಿ ಅನುಕಂಪದ ನೆಲೆಯಲ್ಲಿ ಭಾರತೀಯ ರೈಲ್ವೆಯಲ್ಲಿ ಉದ್ಯೋಗ ಪಡೆದಿದ್ದರು. ತದನಂತರ 2011ರಲ್ಲಿ ಭಾರತೀಯ ಸೇನೆಯಲ್ಲಿ ಮೊಟ್ಟಮೊದಲ ಮಹಿಳಾ ಯೋಧರಾಗಿ ಸೇರ್ಪಡೆಯಾಗಿದ್ದರು. ಸೇನೆಯಲ್ಲಿ ಅಧಿಕಾರಿಗಳಿಗಿಂತ ಕಡಿಮೆ ದರ್ಜೆಯ ಹುದ್ದೆಗಳಿಗೆ ಮಹಿಳೆಯರು ಸೇರಿಲ್ಲ ಎಂಬುದು ಗಮನಾರ್ಹ.
ಪ್ರಾಂತೀಯ ಸೇನೆಯ 969 ರೈಲ್ವೆ ಎಂಜಿನಿಯರಿಂಗ್ ರೆಜಿಮೆಂಟ್‌ನಲ್ಲಿ ಶಾಂತಿ ತಿಗ್ಗಾ ಮೊದಲ ಮಹಿಳಾ ಯೋಧರಾಗಿ ಸೇವೆ ಸಲ್ಲಿಸುತ್ತಿದ್ದರು. ಪುರುಷ ಸಹೋದ್ಯೋಗಿಗಳಂತೆ ದೈಹಿಕ ಪರೀಕ್ಷೆಗಳಲ್ಲಿ ಉತ್ತಮ ಪ್ರದರ್ಶನ ನೀಡಿದ್ದ ಶಾಂತಿ, ಸೇನೆಯಲ್ಲಿ ಯೋಧರ ಹುದ್ದೆಗೆ ಆಯ್ಕೆಯಾಗಿದ್ದರು.












Click it and Unblock the Notifications