ಕಾರವಾರ: ನೌಕಾಪಡೆ ಲೈಂಗಿಕ ಹಗರಣ, ತನಿಖೆಗೆ

ಈ ಪ್ರಕರಣದ ತಪ್ಪಿತಸ್ಥರು ಯಾರೇ ಆದರೂ ಬಿಡುವುದಿಲ್ಲ, ಕಠಿಣ ಕ್ರಮ ಜರುಗಿಸಲಾಗುವುದು, ಈಗಾಗಲೇ ತನಿಖೆಗೆ ಆದೇಶಿಸಲಾಗಿದೆ ಎಂದು ರಕ್ಷಣಾ ಸಚಿವ ಎ.ಕೆ. ಆಂಟನಿ ಆದೇಶಿಸಿದ್ದಾರೆ.
ನೌಕಾಸೇನೆಯಲ್ಲಿ ಲೆಫ್ಟಿನೆಂಟ್ ಕಮಾಂಡರ್ ಆಗಿರುವ ತನ್ನ ಪತಿ ಕಾರವಾರದ ಸೀಬರ್ಡ್ ನೌಕಾ ನೆಲೆಯಲ್ಲಿ ಹಡಗು ದುರಸ್ತಿ ಯಾರ್ಡ್(Naval Ship Repair Yard) ನಲ್ಲಿ ಕರ್ತವ್ಯದಲ್ಲಿದ್ದಾರೆ. ಅವರ ಸಹೋದ್ಯೋಗಿಗಳೊಂದಿಗೆ ಲೈಂಗಿಕ ಸಂಪರ್ಕದಲ್ಲಿ ಭಾಗಿಯಾಗಬೇಕೆಂದು ತನ್ನನ್ನು ಬಲವಂತ ಪಡಿಸಿದರು ಹಾಗೂ ಮದ್ಯಪಾನ ಸೇವಿಸುವಂತೆ ಪ್ರಚೋದಿಸಿದರು ಎಂದು ಕಮಾಂಡರ್ ಪತ್ನಿ ದೂರಿದ್ದಾರೆ.
ಘಟನೆಯ ಬಳಿಕ ತವರು ಮನೆಗೆ ತೆರಳಿದ ಮಹಿಳೆ, ತನ್ನ ಪತಿ ದೈಹಿಕ ಹಾಗೂ ಮಾನಸಿಕವಾಗಿ ತನಗೆ ಕಿರುಕುಳ ನೀಡುತ್ತಿದ್ದಾರೆ ಎಂದು ಗೋಳಾಡಿದ್ದಾರೆ. ಎಂಬಿಎ ಪದವೀಧರೆಯಾಗಿರುವ ಈಕೆ ಕಳೆದ ವರ್ಷ ಫೆಬ್ರವರಿ ತಿಂಗಳಿನಲ್ಲಿ ಅಧಿಕಾರಿಯನ್ನು ವಿವಾಹವಾಗಿದ್ದರು.
ಲೈಂಗಿಕ ಸಂಪರ್ಕಕ್ಕಾಗಿ ಬಲವಂತ ಪಡಿಸಿದ ವಿಷಯವನ್ನು ಎಲ್ಲಿಯಾದರು ಬಾಯ್ಬಿಟ್ಟರೆ ನಿನ್ನ ನಗ್ನ ಚಿತ್ರವನ್ನು ಅಂತರ್ಜಾಲದಲ್ಲಿ ಹಾಕಿ ಮಾನವನ್ನು ಹರಾಜುಗೊಳಿಸುತ್ತೇನೆ ಎಂದು ಕಮಾಂಡರ್ ಹೆದರಿಸಿದ್ದಾರೆ. ಮಹಿಳೆ ಏಪ್ರಿಲ್ 30ರಂದು ಪತಿಯ ವಿರುದ್ಧ ರಕ್ಷಣಾ ಸಚಿವರಿಗೆ ದೂರು ನೀಡಿದ್ದು, ಅಧಿಕಾರಿಯ ವಿರುದ್ಧ ಶಿಸ್ತು ಕ್ರಮ ಜರಗಿಸಬೇಕೆಂದು ಆಗ್ರಹಿಸಿದ್ದರು.
ಆರೋಪದ ಕುರಿತು ಅಧಿಕಾರಿ ಯಾವುದೇ ಪ್ರತಿಕ್ರಿಯೆ ನೀಡಲಿಲ್ಲ. ಈ ಹಿಂದೆಯೂ ನೌಕಾ ಸೇನೆಯ ಅಧಿಕಾರಿಗಳ ವಿರುದ್ಧ ಈ ರೀತಿಯ ಲೈಂಗಿಕ ಆರೋಪಗಳು ಈ ಹಿಂದೆಯೂ ಕೇಳಿ ಬಂದಿತ್ತು. ಇದರಲ್ಲಿ ಪ್ರಮುಖವಾಗಿ ಕೊಚ್ಚಿಯಲ್ಲಿರುವ ಲೆಫ್ಟಿನೆಂಟ್ ಕಮಾಂಡರ್ ರೊಬ್ಬರ ಪತ್ನಿ, ಪತಿ ತನ್ನನ್ನು ಅವರ ಸಹೋದ್ಯೋಗಿಗಳೊಂದಿಗೆ ವಿನಿಮಯ ಮಾಡಿಕೊಂಡಿದ್ದರು ಎಂದು ಆರೋಪಿಸಿದ್ದರು.
ರಷ್ಯಾದ ಮಹಿಳೆಯೊಬ್ಬರ ಜೊತೆ ಹಿರಿಯ ನೌಕಾಪಡೆ ಅಧಿಕಾರಿ ಅವರ ಚಿತ್ರಗಳು ಕಾಣಿಸಿಕೊಂಡು ನೌಕಾಪಡೆ ತಲೆತಗ್ಗಿಸುವಂತಾಗಿತ್ತು. ರಷ್ಯಾದಲ್ಲಿ ಐಎನ್ ಎಸ್ ವಿಕ್ರಮಾದಿತ್ಯ ನಿರ್ಮಾಣದಲ್ಲಿ ತೊಡಗಿದ್ದ ಅಧಿಕಾರಿಯನ್ನು ಕರ್ತವ್ಯದಿಂದ ವಜಾಗೊಳಿಸುವಂತೆ ರಕ್ಷಣಾ ಸಚಿವರು ಆದೇಶಿಸಿದ್ದರು.












Click it and Unblock the Notifications