ಭಾರತೀಯ ಸೇನೆಯಲ್ಲಿ ದಾಖಲೆ ನಿರ್ಮಿಸಿದ ಎರಡು ಮಕ್ಕಳ ತಾಯಿ

ಪ್ರಾಂತೀಯ ಸೇನೆಯ 969 ರೈಲ್ವೆ ಎಂಜಿನಿಯರಿಂಗ್ ರೆಜಿಮೆಂಟ್‌ನಲ್ಲಿ 35ರ ಹರೆಯದ ಶಾಂತಿ ತಿಗ್ಗಾ ಮೊದಲ ಮಹಿಳಾ ಯೋಧರಾಗಿ ಸೇವೆಗೆ ನಿಯೋಜಿತರಾಗಿದ್ದಾರೆ. ಪುರುಷ ಸಹೋದ್ಯೋಗಿಗಳಂತೆ ದೈಹಿಕ ಪರೀಕ್ಷೆಗಳಲ್ಲಿ ಉತ್ತಮ ಪ್ರದರ್ಶನ ನೀಡಿರುವ ಶಾಂತಿ ಸೇನೆಯಲ್ಲಿ ಯೋಧರ ಹುದ್ದೆಗೆ ಆಯ್ಕೆಯಾಗಿದ್ದಾರೆ.
'ನನ್ನ ಪತಿ ಸಾವನ್ನಪ್ಪಿದ ಬಳಿಕ 2005ರಲ್ಲಿ ಅನುಕಂಪದ ನೆಲೆಯಲ್ಲಿ ಭಾರತೀಯ ರೈಲ್ವೆಯಲ್ಲಿ ಉದ್ಯೋಗ ಪಡೆದೆ. ರೈಲ್ವೆಯ ಪ್ರಾಂತೀಯ ಸೇನೆಯ ಕುರಿತು ನಾನು ಕಳೆದ ವರ್ಷವಷ್ಟೇ ತಿಳಿದೆ. ಹೀಗಾಗಿ ಅದಕ್ಕೆ ಸೇರ್ಪಡೆಯಾಗಲು ಬಯಸಿದೆ. ಅಧಿಕಾರಿಗಳಿಗಿಂತ ಕಡಿಮೆ ದರ್ಜೆಯ ಹುದ್ದೆಗಳಿಗೆ ಮಹಿಳೆಯರು ಸೇರಿಲ್ಲ ಎಂಬ ವಿಷಯ ನನಗೆ ತಿಳಿದಿರಲಿಲ್ಲ. ಆದರೆ ಇದು ತುಂಬಾ ಕಠಿಣವಾಗಿತ್ತು' ಎನ್ನುತ್ತಾರೆ ಶಾಂತಿ.
'ಸೇನೆಯಲ್ಲಿ ಮಹಿಳೆಯರಿಗೆ ಯುದ್ಧರಹಿತ ಘಟಕಗಳಲ್ಲಿ ಅಧಿಕಾರಿಗಳಾಗಿ ಸೇರ್ಪಡೆಯಾಗುವ ಅವಕಾಶವಿತ್ತು. ಆದರೆ ಸುಮಾರು 13 ಲಕ್ಷ ಸಿಬ್ಬಂದಿಯನ್ನು ಹೊಂದಿರುವ ಪ್ರಬಲ ಸೇನೆಯಲ್ಲಿ ಶಾಂತಿ ತಿಗ್ಗಾ ಪ್ರಥಮ ಮಹಿಳಾ ಯೋಧರಾಗಿ ಆಯ್ಕೆಯಾಗಿ ವಿಶಿಷ್ಟ ಸಾಧನೆ ಮಾಡಿದ್ದಾರೆ' ಎಂದು ಹಿರಿಯ ಸೇನಾ ಅಧಿಕಾರಿಯೊಬ್ಬರು ಹೇಳಿದ್ದಾರೆ.
'ಆಕೆ ಎಲ್ಲ ದೈಹಿಕ ಪರೀಕ್ಷೆಗಳಲ್ಲಿ ಅದ್ಭುತ ಪ್ರದರ್ಶನ ನೀಡಿದ್ದಾರೆ. 1.4 ಕಿ.ಮೀ. ಓಟವನ್ನು ಪುರುಷ ಸೋದ್ಯೋಗಿಗಳಿಗಿಂತ ಐದು ಸೆಕೆಂಡ್ ಕಡಿಮೆ ಸಮಯದಲ್ಲಿ ಪೂರ್ಣಗೊಳಿಸಿದ್ದಾರೆ. 50 ಮೀಟರ್ ಓಟವನ್ನು 12 ಸೆಕೆಂಡ್‌ಗಳಲ್ಲಿ ಪೂರ್ಣಗೊಳಿಸಿದ್ದಾರೆ. ಇದನ್ನು ಶ್ರೇಷ್ಠ ಪ್ರದರ್ಶನ ಎಂದು ಪರಿಗಣಿಸಲಾಗಿದೆ' ಎಂದು ಅಧಿಕಾರಿ ತಿಳಿಸಿದ್ದಾರೆ.
ಪಶ್ಚಿಮ ಬಂಗಾಳದ ಜಲ್‌ಪಾಯಿಗುರಿ ಜಿಲ್ಲೆಯ ಚಲ್ಸ ನಿಲ್ದಾಣದಲ್ಲಿ ಭಾರತೀಯ ರೈಲ್ವೆಯ ಉದ್ಯೋಗಿಯಾಗಿ ಸೇವೆ ಸಲ್ಲಿಸುತ್ತಿದ್ದರು. ಕಳೆದ ವರ್ಷ ಅವರು ಪ್ರಾಂತೀಯ ಸೇನೆಗೆ ಸೇರ್ಪಡೆಯಾಗಲು ಸ್ವಯಂ ಆಸಕ್ತಿ ತೋರಿದ್ದರು.












Click it and Unblock the Notifications