ಮೆಟ್ರೋ ಪ್ರಯಾಣ ದರ ಹೆಚ್ಚಳಕ್ಕೆ ನಡೆದಿದೆ ಸಿದ್ಧತೆ

ರಾಜ್ಯ ವಿದ್ಯುಚ್ಛಕ್ತಿ ನಿಯಂತ್ರಣ ಆಯೋಗ ಚುನಾವಣೆ ಮುಗಿದ ನಂತರ ಮೇ 6ರಂದು ವಿದ್ಯುತ್ ದರ ಪರಿಷ್ಕರಣೆ ಮಾಡಿ ಆದೇಶ ಹೊರಡಿಸಿತ್ತು. ನೂತನ ದರಪಟ್ಟಿಯಂತೆ ಬಿಎಂಆರ್ ಸಿಎಲ್ ಪ್ರತಿ ಯೂನಿಟ್ ಗೆ 20 ಪೈಸೆ ಹೆಚ್ಚು ಪಾವತಿ ಮಾಡಬೇಕಾಗಿದೆ.(ವಿದ್ಯುತ್ ದರ ಎಷ್ಟಾಗಿದೆ)
ವಿದ್ಯುತ್ ದರ ಏರಿಕೆಯಿಂದ ಬಿಎಂಆರ್ ಸಿಎಲ್ ಗೆ ಪ್ರತಿ ತಿಂಗಳು ಸುಮಾರು 2 ಲಕ್ಷಕ್ಕೂ ಅಧಿಕ ನಷ್ಟ ಉಂಟಾಗುತ್ತಿದೆ. ಆದ್ದರಿಂದ ಪ್ರಯಾಣ ದರ ಹೆಚ್ಚಿಸಿ ನಷ್ಟವನ್ನು ತುಂಬಿಕೊಳ್ಳಲು ಮೆಟ್ರೋ ನಿಗಮ ಚಿಂತನೆ ನಡೆಸಿ ಪ್ರಸ್ತಾವನೆ ಸಿದ್ಧಗೊಳಿಸಿದೆ.
ಬಿಎಂಆರ್ ಸಿಎಲ್ ಅಧಿಕಾರಿಗಳ ಪ್ರಕಾರ ಪ್ರಯಾಣ ದರ ಹೆಚ್ಚಳಕ್ಕೆ ಮೆಟ್ರೋ ನಿಗಮದಿಂದ ಸಂಪೂರ್ಣ ಸಹಮತ ವ್ಯಕ್ತವಾಗಿದೆ. ಸರ್ಕಾರದ ಅಂತಿಮ ಒಪ್ಪಿಗೆ ಮಾತ್ರ ಬಾಕಿ ಉಳಿದಿದೆ. ಸಚಿವ ಸಂಪುಟ ವಿಸ್ತರಣೆ ಆದ ನಂತರ ಸರ್ಕಾರ ಪ್ರಯಾಣ ದರ ಹೆಚ್ಚಳಕ್ಕೆ ಅನುಮತಿ ನೀಡುವ ಸಾಧ್ಯತೆ ಇದೆ.
ಮೆಟ್ರೋ ನಿಗಮದ ಹಿರಿಯ ಅಧಿಕಾರಿಗಳು ಎರಡು ಬಾರಿ ಸಭೆ ನಡೆಸಿ ಪ್ರಯಾಣವನ್ನು ಪರಿಷ್ಕರಿಸುವ ಪಟ್ಟಿ ಸಿದ್ದಗೊಳಿಸಿ ಸರ್ಕಾರಕ್ಕೆ ಸಲ್ಲಿಸಿದ್ದಾರೆ. ಮುಖ್ಯಮಂತ್ರಿಗಳ ಅಂಕಿತ ಬಿದ್ದರೆ ತಕ್ಷಣ ನೂತನ ದರ ಘೋಷಣೆ ಯಾಗಲಿದೆ. ಪ್ರಯಾಣ ದರ ಎಷ್ಟು ಹೆಚ್ಚಳವಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿಲ್ಲ.
ಹಳೆಯ ಪ್ರಸ್ತಾವನೆ : ಮೆಟ್ರೋ ನಿಗಮಕ್ಕೆ ನಷ್ಟವಾಗುತ್ತಿದೆ ಆದ್ದರಿಂದ ಪ್ರಯಾಣ ದರ ಹೆಚ್ಚಳ ಮಾಡಬೇಕು ಎಂದು ಬಿಎಂಆರ್ ಸಿಎಲ್ ಹಲವಾರು ಬಾರಿ ಸರ್ಕಾರಕ್ಕೆ ಮನವಿ ಮಾಡಿತ್ತು. ಆದರೆ, ಸರ್ಕಾರ ಇದನ್ನು ತಿರಸ್ಕರಿಸಿತ್ತು. ಸದ್ಯ ವಿದ್ಯುತ್ ದರ ಹೆಚ್ಚಳ ಮುಂದಿಟ್ಟುಕೊಂಡು ಪ್ರಯಾಣದ ದರ ಹೆಚ್ಚಳದ ಪ್ರಸ್ತಾವನೆ ಸಲ್ಲಿಸಲಾಗಿದೆ.
ರಾಜ್ಯದ ಮೇಲೆ ಅವಲಂಬನೆ : ಸದ್ಯ ಎಂಜಿ ರಸ್ತೆ ಮತ್ತು ಬೈಯಪ್ಪನಹಳ್ಳಿ ನಡುವೆ ಮಾತ್ರ ಮೆಟ್ರೋ ರೈಲು ಸಂಚರಿಸುತ್ತಿದ್ದು ರೂ.15 ದರ ನಿಗದಿ ಪಡಿಸಲಾಗಿದೆ. ಮೆಟ್ರೋ ನಿಗಮ ರೈಲು ಸಂಚರಿಸಲು ಅಗತ್ಯವಿರುವ ವಿದ್ಯುತ್ ಶಕ್ತಿಗಾಗಿ ರಾಜ್ಯದ ಮೇಲೆ ಅವಲಂಬಿತವಾಗಿದೆ.
ಜುಲೈನಲ್ಲಿ ಮಲ್ಲೇಶ್ವರಂ ಮತ್ತು ಪೀಣ್ಯ ನಡುವಿನ ರೈಲು ಸಂಚಾರ ಆರಂಭವಾಗಲಿದ್ದು ಆಗ ಹೆಚ್ಚಿನ ವಿದ್ಯುತ್ ಅವಶ್ಯಕತೆ ಇರುತ್ತದೆ. ರಾಜ್ಯ ಈಗಾಗಲೇ ವಿದ್ಯುತ್ ಕೊರತೆ ಎದುರಿಸುತ್ತಿದ್ದು, ಅದರ ನಡುವೆಯೇ ಮೆಟ್ರೋ ಯೋಜನೆಗೂ ವಿದ್ಯುತ್ ಪೂರೈಸಬೇಕಾಗಿದೆ.












Click it and Unblock the Notifications