ಪಾಕಿಸ್ತಾನ ಪ್ರಧಾನಿ ಗದ್ದುಗೆಗೆ ನವಾಜ್ ಶರೀಫ್
ಇಸ್ಲಾಮಾಬಾದ್, ಮೇ 12: ಪಾಕಿಸ್ತಾನದಲ್ಲಿ ನಡೆದ ಸಾರ್ವತ್ರಿಕ ಚುನಾವಣೆಯಲ್ಲಿ ಮಾಜಿ ಪ್ರಧಾನಿ ನವಾಜ್ ಶರೀಫ್ ನೇತೃತ್ವದ ಪಿಎಂಎಲ್-ಎನ್ ಪಕ್ಷ ಸ್ಪಷ್ಟ ಬಹುಮತದೊಂದಿಗೆ ಅಧಿಕಾರ ಗದ್ದುಗೆ ಹಿಡಿಯಲು ವೇದಿಕೆ ಸಿದ್ಧಗೊಂಡಿದೆ. ದೇಶದ ಮೂರನೆ ಬಾರಿಗೆ ಪ್ರಧಾನಿಯಾಗಿ ನವಾಜ್‌ಶರೀಫ್ ಅಧಿಕಾರ ಸ್ವೀಕರಿಸುವುದು ಬಹುತೇಕ ಖಚಿತವಾಗಿದೆ.
ಒಟ್ಟು 272 ರಾಷ್ಟ್ರೀಯ ಅಸೆಂಬ್ಲಿಯ ಕ್ಷೇತ್ರಗಳಿಗೆ ನಡೆದ ಚುನಾವಣೆಯಲ್ಲಿ ನವಾಜ್ ಶರೀಫ್ ಅವರ ಪಿಎಂಎಲ್-ಎನ್ 130ಕ್ಕೂ ಹೆಚ್ಚು ಕ್ಷೇತ್ರಗಳಲ್ಲಿ ಜಯ ಸಾಧಿಸಿದ್ದು, ಸ್ಪಷ್ಟ ಬಹುಮತದೊಂದಿಗೆ ಅಧಿಕಾರ ಹಿಡಿಯುವತ್ತ ಮುನ್ನುಗ್ಗಿದೆ. ಮತಗಳ ಎಣಿಕೆ ಮುಂದುವರೆದಿದ್ದು, ಬಹುತೇಕ ಎಲ್ಲ ಕ್ಷೇತ್ರಗಳಲ್ಲಿ ಶರೀಫ್ ಪಕ್ಷ ಇತರೆ ಪಕ್ಷಗಳನ್ನು ಹಿಂದಿಕ್ಕಿ ಮುನ್ನಡೆ ಸಾಧಿಸಿದೆ.
ಮಾಜಿ ಕ್ರಿಕೆಟಿಗ ಇಮ್ರಾನ್ ಖಾನ್ ನೇತೃತ್ವದ ತೆಹ್ರಿಕ್ ಇ ಇನ್ಸಾಫ್ ಹಾಗೂ ಪಾಕಿಸ್ತಾನ್ ಪೀಪಲ್ ಪಾರ್ಟಿ ಕಳಪೆ ಪ್ರದರ್ಶನ ನೀಡಿದೆ. ಎರಡು ಪಕ್ಷಗಳು ತಲಾ 35 ಸ್ಥಾನಗಳನ್ನು ಗಳಿಸಿದೆ ಎಂದು ಸ್ಥಳೀಯ ಸುದ್ದಿಸಂಸ್ಥೆ ವರದಿ ಮಾಡಿದೆ.

ಲಾಹೋರ್, ಇಸ್ಲಾಮಾಬಾದ್, ಕರಾಚಿ, ಪಂಜಾಬ್ ಸೇರಿದಂತೆ ಬಹುತೇಕ ಎಲ್ಲ ಕಡೆಯೂ ಪಿಎಂಎಲ್-ಎನ್ ಅಭ್ಯರ್ಥಿಗಳು ಜಯ ಸಾಧಿಸಿದ್ದಾರೆ. ಫಲಿತಾಂಶ ಪ್ರಕಟಗೊಳ್ಳುತ್ತಿದ್ದಂತೆ ರಾಷ್ಟ್ರವನ್ನುದ್ದೇಶಿಸಿ ಮಾತನಾಡಿದ ಶರೀಫ್ ತಮ್ಮ ಪಕ್ಷವನ್ನು ಬೆಂಬಲಿಸಿರುವ ಮತದಾರರಿಗೆ ಕೃತಜ್ಞತೆ ಸಲ್ಲಿಸಿದರು. ಸಮ್ಮಿಶ್ರ್ತ ಸರ್ಕಾರದ ಭಯಬೇಡ, ಸ್ಪಷ್ಟ ಬಹುಮತದೊಂದಿಗೆ ಸರ್ಕಾರ ರಚಿಸುವ ಜನಾದೇಶ ಹೊರಬೀಳಲಿದೆ ಎಂದಿದ್ದಾರೆ.
ನಮ್ಮ ನಿರೀಕ್ಷೆಗೂ ಮೀರಿ ಜನರು ಪಕ್ಷವನ್ನು ಬೆಂಬಲಿಸಿದ್ದಾರೆ. ರಾಷ್ಟ್ರೀಯ ಅಸೆಂಬ್ಲಿಯಲ್ಲಿ ನಾವು ಪೂರ್ಣ ಬಹುಮತದೊಂದಿಗೆ ಅಧಿಕಾರ ಗದ್ದುಗೆ ಹಿಡಿಯಲಿದ್ದೇವೆ. ಚುನಾವಣಾ ಪ್ರಚಾರದ ವೇಳೆ ನಾವು ಜನರಿಗೆ ನೀಡಿದ ಭರವಸೆಗಳನ್ನು ಈಡೇರಿಸುತ್ತೇವೆಂದು ವಾಗ್ದಾನ ಮಾಡಿದರು.
ಇಮ್ರಾನ್ ಖಾನ್ ಗೆ ಜಯ: ಪಾಕಿಸ್ತಾನದಲ್ಲಿ ನಡೆದ ಸಾರ್ವತ್ರಿಕ ಚುನಾವಣೆಯಲ್ಲಿ ಮಾಜಿ ಕ್ರಿಕೆಟಿಗ ಹಾಗೂ ತೆಹರಿಕ್-ಇ-ಇನ್ಸಾಫ್ ಪಕ್ಷದ ಮುಖ್ಯಸ್ಥ ಇಮ್ರಾನ್ ಖಾನ್ ಭಾರೀ ಮತಗಳ ಅಂತರದಿಂದ ಜಯಗಳಿಸಿದ್ದಾರೆ. ಪಂಜಾಬ್ ಪ್ರಾಂತ್ಯದಿಂದ ಸ್ಪರ್ಧಿಸಿದ್ದ ಇಮ್ರಾನ್ ಖಾನ್ ಸುಮಾರು ಒಂದು ಲಕ್ಷಕ್ಕೂ ಅಧಿಕ ಮತಗಳ ಅಂತರದಿಂದ ರಾಷ್ಟ್ರೀಯ ಅಸೆಂಬ್ಲಿಗೆ ಪ್ರವೇಶಿಸಿದ್ದಾರೆ.
ಉಗ್ರರ ಅಟ್ಟಹಾಸ : ತಾಲಿಬಾನ್ ಉಗ್ರರ ಅಟ್ಟಹಾಸದ ನಡುವೆಯೇ ಪಾಕಿಸ್ತಾನದ ಐತಿಹಾಸಿಕ ಚುನಾವಣೆ ಯಶಸ್ವಿಯಾಗಿ ನಡೆದಿತ್ತು. ಚುನಾವಣೆಯನ್ನು ಗುರಿಯಾಗಿಟ್ಟುಕೊಂಡು ಉಗ್ರರು ಕರಾಚಿ ಹಾಗೂ ಇನ್ನಿತರ ಕಡೆಗಳಲ್ಲಿ ನಡೆಸಿದ ಬಾಂಬ್ ಸ್ಫೋಟಕ್ಕೆ ಕನಿಷ್ಠ 24 ಮಂದಿ ಬಲಿಯಾಗಿದ್ದು, ಹಲವು ಮಂದಿ ಗಾಯಗೊಂಡಿದ್ದರು. ಒಟ್ಟಾರೆಯಾಗಿ ಉಗ್ರರ ಅಟ್ಟಹಾಸಕ್ಕೆ 24 ಮಂದಿ ಬಲಿಯಾಗಿದ್ದಾರೆ. ಈ ಮೂಲಕ ಚುನಾವಣಾ ಹಿಂಸಾಚಾರಕ್ಕೆ ಬಲಿಯಾದವರ ಸಂಖ್ಯೆ 129 ಆಗಿದೆ.
ಶೇ.75 ಮತದಾನ: ಉಗ್ರರ ದಾಳಿ ಭೀತಿಯ ವಾತಾವರಣದ ನಡುವೆಯೂ ಪಾಕ್ ಜನತೆ ಧೈರ್ಯವಾಗಿ ಮುಂದೆ ಬಂದು ಮತದಾನ ಮಾಡುವ ಮೂಲಕ ಅಚ್ಚರಿ ಮೂಡಿಸಿತ್ತು. ಶನಿವಾರ ಶೇ.70ರಿಂದ 75ರಷ್ಟು ಮತದಾನ ದಾಖಲಾಗಿದೆ ಎಂದು ಮುಖ್ಯ ಚುನಾವಣಾ ಆಯುಕ್ತ ಫಕ್ರುದ್ದೀನ್ ಜಿ. ಇಬ್ರಾಹಿಂ ಹೇಳಿದ್ದಾರೆ. ನಿರೀಕ್ಷೆಗೂ ಮೀರಿ ಹಕ್ಕು ಚಲಾಯಿಸಿದ ಜನ 272 ಮಂದಿ ಅಭ್ಯರ್ಥಿಗಳ ಹಣೆಬರಹವನ್ನು ಬರೆದಿದ್ದಾರೆ. ಸರಳ ಬಹುಮತ ಪಡೆಯಲು 137 ಸೀಟುಗಳ ಅಗತ್ಯವಿದೆ.
ಇದೇ ವೇಳೆ, ಅನಪೇಕ್ಷಿತ ಚಟುವಟಿಕೆಗಳಲ್ಲಿ ತೊಡಗಿದ್ದಾರೆ ಎಂಬ ಆರೋಪ ಹೊರಿಸಿ ನ್ಯೂಯಾರ್ಕ್ ಟೈಮ್ಸ್ ಇಸ್ಲಾಮಾಬಾದ್ ಬ್ಯೂರೋ ಮುಖ್ಯಸ್ಥರನ್ನು ಪಾಕ್ ಸರ್ಕಾರ ಗಡೀಪಾರು ಮಾಡಿದೆ. ಚುನಾವಣೆ ಹಿನ್ನೆಲೆಯಲ್ಲಿ ಡೆಕ್ಲನ್ ವಾಲ್ಶ್ ಮೇಲೆ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಚುನಾವಣಾ ಆಯುಕ್ತ ಫಕ್ರುದ್ದೀನ್ ಜಿ. ಇಬ್ರಾಹಿಂ ಹೇಳಿದ್ದಾರೆ.












Click it and Unblock the Notifications