ಗಾರ್ಡನ್ ಸಿಟಿ ಗಾರ್ಬೇಜ್ ಸಿಟಿ ಮಾಡಿದ ಬಿಜೆಪಿ

ಬೆಂಗಳೂರು ಹಾಗೂ ಕರ್ನಾಟಕ ಅಭಿವೃದ್ಧಿಯತ್ತ ಸಾಗಬೇಕಾದರೆ ಕಾಂಗ್ರೆಸ್‌ನ್ನು ಅಧಿಕಾರಕ್ಕೆ ತರುವುದು ಅನಿವಾರ್ಯವಾಗಿದೆ ಎಂದು ಕೇಂದ್ರ ಪ್ರವಾಸೋದ್ಯಮ ಸಚಿವ ಹಾಗೂ ತೆಲುಗು ನಟ ಚಿರಂಜೀವಿ ಹೇಳಿದ್ದಾರೆ.ಶಿಡ್ಲಘಟ್ಟದ ಟಿ.ಬಿ. ರಸ್ತೆಯಲ್ಲಿ ರೋಡ್ ಶೋ ನಡೆಸಿ, ಕಾಂಗ್ರೆಸ್ ಅಭ್ಯರ್ಥಿ ವಿ.ಮುನಿಯಪ್ಪ ಪರ ಮತ ಯಾಚನೆ ನಡೆಸಿ, ನೆಹರೂ ಕ್ರೀಡಾಂಗಣದಲ್ಲಿ ಸೇರಿದ್ದ ಸಾವಿರಾರು ಅಭಿಮಾನಿಗಳು ಹಾಗೂ ಕಾಂಗ್ರೆಸ್ ಕಾರ್ಯಕರ್ತರನ್ನುದ್ದೇಶಿಸಿ ಮಾತನಾಡಿದರು.
ಬಿಜೆಪಿ, ಜೆಡಿಎಸ್ ಪಕ್ಷಗಳನ್ನು ತರಾಟೆಗೆ ತೆಗೆದುಕೊಂಡ ಚಿರಂಜೀವಿ, ಕಳೆದ ವಿಧಾನಸಭಾ ಚುನಾವಣೆಯಲ್ಲಿ ರಾಜ್ಯದ ಜನತೆ ಬಿಜೆಪಿ ಸರಕಾರಕ್ಕೆ ಕೊಟ್ಟ ಬಹುಮತವನ್ನು ಸದುಪಯೋಗಪಡಿಸಿಕೊಂಡು ರಾಜ್ಯದ ಅಭಿವೃದ್ಧಿಯನ್ನು ಮಾಡುವ ಬದಲಾಗಿ ಭ್ರಷ್ಟಾಚಾರದಲ್ಲಿ ತೊಡಗಿದ್ದ ಬಿಜೆಪಿಯ ಮುಖ್ಯಮಂತ್ರಿ ಹಾಗೂ ಸಚಿವರು ಜೈಲಿಗೆ ಪೆರೇಡ್ ನಡೆಸಿದ್ದಾರೆ ಎಂದು ಟೀಕಿಸಿದರು.
ಯಥಾ ರಾಜ ತಥಾ ಪ್ರಜಾ ಎನ್ನುವಂತೆ ರಾಜ್ಯದ ಮುಖ್ಯಮಂತ್ರಿ ಭ್ರಷ್ಟಾಚಾರಕ್ಕೆ ಇಳಿದಿದ್ದರಿಂದ ಅವರ ಸಂಪುಟದಲ್ಲಿನ ಸಚಿವರೂ ಭ್ರಷ್ಟಾಚಾರದಲ್ಲಿ ತೊಡಗಿದ್ದಾರೆ. ಗ್ರಾಮೀಣ ಭಾಗಗಳ ಅಭಿವೃದ್ಧಿಗಾಗಿ ಕೇಂದ್ರ ಸರಕಾರವು ಬಡವರಿಗಾಗಿ ಉದ್ಯೋಗ ಖಾತರಿ ಯೋಜನೆಯಡಿಯಲ್ಲಿ ನೀಡಿರುವ ಕೋಟ್ಯಂತರ ರೂ.ಗಳ ಹಣವನ್ನು ಉಪಯೋಗಿಸಿಕೊಳ್ಳದೆ ದುರುಪಯೋಗ ಮಾಡಿಕೊಳ್ಳಲಾಗಿದೆ. ಬಡವರಿಗಾಗಿ ನೀಡಿರುವ ಹಣವನ್ನು ಕಸಿದುಕೊಳ್ಳಲಾಗಿದೆ ಎಂದು ಚಿರಂಜೀವಿ ಕಿಡಿಕಾರಿದರು.
ನೀರಾವರಿ ಯೋಜನೆ ಭರವಸೆ: ಕಾಂಗ್ರೆಸ್ ಪ್ರಣಾಳಿಕೆಯಲ್ಲಿ ಹೇಳಿರುವಂತೆ ಬಯಲು ಸೀಮೆಗಳಾದ ಈ ಭಾಗಕ್ಕೆ ಶಾಶ್ವತ ನೀರಾವರಿ ಯೋಜನೆಯನ್ನು ಜಾರಿಗೆ ತರಲು ಕಾಂಗ್ರೆಸ್ ಬದ್ಧವಾಗಿದೆ, ರಾಜ್ಯದ ಜನತೆ ಕುಡಿಯುವ ನೀರಿಗೆ ಪರದಾಡುವಂಥ ಪರಿಸ್ಥಿತಿ ನಿರ್ಮಾಣವಾಗಿದೆ. ರಾಜ್ಯಕ್ಕೆ ಬರುತ್ತಿರುವ ಸವಲತ್ತುಗಳು ನೆರೆ ರಾಜ್ಯಗಳ ಪಾಲಾಗುತ್ತಿವೆ. ರಾಜ್ಯದ ಹಿತವನ್ನು ಕಾಯಬೇಕಾಗಿದ್ದ ರಾಜ್ಯದ ಜನಪ್ರತಿನಿಧಿಗಳು ರಾಜ್ಯವನ್ನು ಕೊಳ್ಳೆ ಹೊಡೆಯುವುದರಲ್ಲಿ ತಲ್ಲೀನರಾಗಿದ್ದಾರೆ.
ಪವಿತ್ರವಾದ ವಿಧಾನಸೌಧದಲ್ಲಿ ಜನರ ಕಷ್ಟಸುಖಗಳ ಬಗ್ಗೆ ಚರ್ಚೆ ನಡೆಸಬೇಕಾದಂತಹ ಸಚಿವರು ಅಶ್ಲೀಲ ದೃಶ್ಯಗಳನ್ನು ನೋಡುವ ಮೂಲಕ ರಾಜ್ಯದ ಮಾನ ಮರ್ಯಾದೆಯನ್ನು ಗಾಳಿಗೆ ತೂರಿದ್ದಾರೆ. ಅಂಥ ಪಕ್ಷಕ್ಕೆ ಬೆಂಬಲ ನೀಡುತ್ತೀರಾ ಎಂದು ಅವರು ಪ್ರಶ್ನಿಸಿದರು. ಜೆಡಿಎಸ್ ಕೂಡಾ ಅಧಿಕಾರದ ಆಸೆಗಾಗಿ ರಾಜ್ಯವನ್ನು ತಮ್ಮ ಕುಟುಂಬದ ರಾಜಕಾರಣಕ್ಕೆ ಬಳಸಿಕೊಳ್ಳುತ್ತಿದೆ.
ಕೇವಲ ಒಂದು ಕುಟುಂಬದಲ್ಲಿ ಐದು ಮಂದಿಗಿಂತಲೂ ಹೆಚ್ಚು ರಾಜಕಾರಣಿಗಳಿದ್ದು, ಅಧಿಕಾರವು ಒಂದೇ ಕುಟುಂಬಕ್ಕೆ ಸೀಮಿತವಾಗಿರಬೇಕು ಎನ್ನುವಂತಹ ಮನೋಭಾವನೆಯನ್ನು ಇಟ್ಟುಕೊಂಡಿರುವ ಪಕ್ಷವಾಗಿ ಜೆಡಿಎಸ್ ಮುಂದುವರಿಯುತ್ತಿದೆ ಎಂದು ಚಿರಂಜೀವಿ ಹೇಳಿದರು.












Click it and Unblock the Notifications