ಮೋದಿ ಭಾಷಣದ ವೈಖರಿಗೆ ಬೆಂಗಳೂರಿಗರು ಮೋಡಿ

ಬೆಂಗಳೂರು, ಏ. 28 : ಆಗಸದಲ್ಲಿ ಕಪ್ಪಡರಿದ ಮೋಡಗಳು ಮಳೆ ಸುರಿಸಲಿಲ್ಲ, ಆದರೆ ಗುಜರಾತ್ ಮುಖ್ಯಮಂತ್ರಿ ಮಾತಿನ ಹೊಳೆ ಹರಿಸಿದರು. ಬೆಂಗಳೂರಿನ ಬಸವನಗುಡಿಯ ನ್ಯಾಷನಲ್ ಕಾಲೇಜು ಮೈದಾನದಲ್ಲಿ ನೆರೆದಿದ್ದ ಲಕ್ಷಾನುಗಟ್ಟಲೆ ಜನರು ಮೋದಿ ಮಾತಿನ ಮಳೆಗೆ, ಮೋಡಿಗೆ ತೊಯ್ದು ತೊಪ್ಪೆಯಾದರು.

ಸುಮಾರು ಒಂದೂವರೆ ಗಂಟೆ ಪ್ರಖರ ಭಾಷಣ ಮಾಡಿದ ನರೇಂದ್ರ ಮೋದಿ, ಬಿಜೆಪಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಅವರ ಆಡಳಿತ ವೈಖರಿಯನ್ನು, ಮೆದುಮಾತಿನ ಅವರ ವ್ಯಕ್ತಿತ್ವವನ್ನು, ರಾಜ್ಯವನ್ನು ಮುನ್ನಡೆಸುವ ಸಾಮರ್ಥ್ಯವನ್ನು ಹಾಡಿಹೊಗಳಿದರು. ಮೇ 5ರಂದು ನಡೆಯಲಿರುವ ಕರ್ನಾಟಕ ವಿಧಾನಸಭೆ ಚುನಾವಣೆಯಲ್ಲಿ ಕಮಲದ ಗುರುತಿಗೆ ಮತ ನೀಡಿ ಬಿಜೆಪಿ ಮತ್ತೆ ಅಧಿಕಾರಕ್ಕೆ ಬರಬೇಕೆಂದು ಆಶೀರ್ವಾದ ಮಾಡಿರಿ ಎಂದು ಕೋರಿದರು.

ಕರ್ನಾಟಕದ ಜನತೆ ಕಾಂಗ್ರೆಸ್‌ನಂಥ ವಿಶ್ವಾಸದ್ರೋಹಿ, ಅಸಮರ್ಥ, ವಿಷ ಬಿತ್ತುವಂಥ ಪಕ್ಷಕ್ಕೆ ಅಧಿಕಾರ ನೀಡುವುದಿಲ್ಲ ಎಂಬ ವಿಶ್ವಾಸವಿದೆ ಎಂದ ಅವರು, ಗುಜರಾತ್ ಜನರು ಮೋದಿಯಲ್ಲಿ ವಿಶ್ವಾಸವಿಟ್ಟಂತೆ ಜಗದೀಶ್ ಶೆಟ್ಟರ್ ಅವರ ಮೇಲೂ ವಿಶ್ವಾಸ ತೋರಲಿದೆ ಎಂದು ಆಶಾಭಾವನೆ ವ್ಯಕ್ತಪಡಿಸಿದರು. ಅವರು ಅಪ್ಪಿತಪ್ಪಿಯೂ ಇತರ ಪಕ್ಷಗಳ ಬಗ್ಗೆ ಚಕಾರವೆತ್ತಲಿಲ್ಲ, ಬಿಜೆಪಿ ಬಿಟ್ಟು ಕೆಜೆಪಿ ಕಟ್ಟಿರುವ ಯಡಿಯೂರಪ್ಪ ಬಗ್ಗೆಯೂ ಪ್ರಸ್ತಾಪಿಸಲಿಲ್ಲ.

ಭಾಷಣದುದ್ದಕ್ಕೂ ರಾಜ್ಯದ ಬಿಜೆಪಿಯ ಸಾಧನೆಯನ್ನು ಹೊಗಳುವುದಕ್ಕಿಂತ, ದೆಹಲಿಯಲ್ಲಿ ದೇಶದ ಚುಕ್ಕಾಣಿ ಹಿಡಿದಿರುವ ಕಾಂಗ್ರೆಸ್ ಆಡಳಿತವನ್ನು ಹೆಚ್ಚಾಗಿ ತೆಗಳಿದರು. ಚಿನ್ನದ ಚಮಚವನ್ನು ಬಾಯಲ್ಲಿ ಹುಟ್ಟಿದ ನಾಯಕರಿಗೆ ದೇಶದ ಇತಿಹಾಸದ, ಭದ್ರತೆಯ, ಅಭಿವೃದ್ಧಿಯ ಮತ್ತು ಸುರಕ್ಷತೆಯ ಬಗ್ಗೆ ಎಲ್ಲಿ ಕಾಳಜಿ ಇರುತ್ತದೆ ಎಂದು ಪರೋಕ್ಷವಾಗಿ ರಾಹುಲ್ ಗಾಂಧಿ ಅವರನ್ನು ವಾಚಾಮಗೋಚರವಾಗಿ ತರಾಟೆ ತೆಗೆದುಕೊಂಡರು.

Narendra Modi in Bangalore

ಮೋದಿ ಭಾಷಣದ ಮುಖ್ಯಾಂಶಗಳು

* ಚಿನ್ನದ ಚಮಚವನ್ನು ಬಾಯಲ್ಲಿ ಇಟ್ಟು ಹುಟ್ಟಿದವರು ಕರ್ನಾಟಕ ಭ್ರಷ್ಟಾಚಾರದಲ್ಲಿ ವಿಶ್ವ ದಾಖಲೆ ಮಾಡಿದೆ ಎನ್ನುತ್ತಾರೆ. ಆದರೆ, 2ಜಿ ಹಗರಣವೊಂದೇ ಅವರು ಮಾಡಿರುವ ಭ್ರಷ್ಟಾಚಾರಕ್ಕೆ ಕನ್ನಡಿ ಹಿಡಿಯುತ್ತದೆ. 1.76 ಲಕ್ಷ ಕೋಟಿ ರು. ಹಗರಣದಲ್ಲಿ ಇರುವ ಸೊನ್ನೆಗಳನ್ನು ರೇಸ್ ಕೋರ್ಸ್ ರಸ್ತೆಯಿಂದ ಬರೆಯಲು ಶುರು ಮಾಡಿದರೆ, ಕೊನೆಯ ಸೊನ್ನೆ 10 ಜನಪಥ್ ರಸ್ತೆಗೆ ಮುಟ್ಟುತ್ತದೆ ಎಂಬುದು ಅದಕ್ಕೆ ತಿಳಿದಿಲ್ಲವೆ?

* ಕ್ರಿಮಿನಲ್‌ಗಳಿಗೆ ಟಿಕೆಟ್ ನೀಡುವುದಿಲ್ಲವೆಂದು ಜೈಪುರದಲ್ಲಿ ಕಾಂಗ್ರೆಸ್ ಹೇಳಿತ್ತು. ಆದರೆ, ಅದು ಹೇಳುವುದೇ ಒಂದು ಮಾಡುವುದೇ ಒಂದು. ಕ್ರಿಮಿನಲ್‌ಗಳಿಗೆ ಕಾಂಗ್ರೆಸ್ ಟಿಕೆಟ್ ನೀಡಿಲ್ಲವೆ? ನಾಯಕರ ಮಕ್ಕಳಿಗೆ, ಮೊಮ್ಮಕ್ಕಳಿಗೆ ಟಿಕೆಟ್ ನೀಡಿದೆ. ಅದನ್ನು ನಂಬಬೇಡಿ. ನಾವು ನಮ್ಮ ತಪ್ಪುಗಳನ್ನು ತಿದ್ದಿಕೊಳ್ಳಲು ಸಿದ್ಧ.

* ಮಗನೇ ಅಧಿಕಾರ ವಿಷ ಆಗಿರುತ್ತದೆ ಎಂದು ಅಮ್ಮ ಮಗನಿಗೆ ಹೇಳುತ್ತಾಳೆ. ಇದೇ ಕಾಂಗ್ರೆಸ್ ಇಡೀ ದೇಶದಲ್ಲಿ ವಿಷವನ್ನು ಪಸರಿಸುತ್ತಿದೆ. ಇದೇ ಕಾಂಗ್ರೆಸ್ ರೀತಿನೀತಿ. ಇದೇ ಕಾಂಗ್ರೆಸ್ ಭ್ರಷ್ಟಾಚಾರದ ವಿಷ ಹಬ್ಬಿಸುತ್ತಿದೆ. ನಮಗೆ ಕರ್ನಾಟಕವನ್ನು ರಕ್ಷಿಸಬೇಕಾಗಿದೆ. ಇಂಧವರ ಕೈಗೆ ಕರ್ನಾಟಕವನ್ನು ನೀಡಬೇಡಿ.

* ಇಲ್ಲಿರುವ ಜನರು ವಿದ್ಯಾವಂತರು. ಇಲ್ಲಿ ಎಲ್ಲಕಡೆಯಿಂದಲೂ ಜನರು ಬರುತ್ತಾರೆ. ಕರ್ನಾಟಕ ಮಿನಿ ಹಿಂದೂಸ್ತಾನ್ ಇದ್ದಂತೆ. ಆದರೆ, ಕಾಂಗ್ರೆಸ್ ಅನ್ಯ ರಾಜ್ಯದಿಂದ ಬಂದಿರುವ ಜನರಲ್ಲಿ ಭೇದಭಾವ ತುಂಬುತ್ತಿದೆ. ಆದರೆ, ಅವರು ರಾಜ್ಯದಿಂದ ಹೊರಹೋಗದಂತೆ ತಡೆದ ಅಶೋಕ್ ಅವರನ್ನು ಅಭಿನಂದಿಸುತ್ತೇನೆ.

* ಕಾಂಗ್ರೆಸ್ ಮಿತ್ರರಿಗೆ ಚಾಲೇಂಜ್ ನೀಡುತ್ತೇನೆ. ಚಿನ್ನದ ಸ್ಪೂನ್ ಇಟ್ಟು ಹುಟ್ಟಿದ ನಾಯಕರಿಗೆ ಸವಾಲು ಹಾಕುತ್ತೇನೆ. 5 ವರ್ಷಗಳ ಬಿಜೆಪಿ ಸರಕಾರ ಅಥವಾ 5 ವರ್ಷಗಳ ಕಾಂಗ್ರೆಸ್ ಸರಕಾರದ ಸಾಧನೆಯನ್ನು ತುಲನೆ ಮಾಡಲಿ. ಭಾರತೀಯ ಜನತಾ ಪಕ್ಷದ ಸರಕಾರ ಕಾಂಗ್ರೆಸ್‌ ಸರಕಾರಕ್ಕಿಂತ ಉತ್ತಮವಾಗಿದೆ. ಇದನ್ನು ಯಾರಾದರೂ ಅಲ್ಲಗಳೆಯಲಿ.

* 21ನೇ ಏಪ್ರಿಲ್ ದಂದು ಲೋಕಸೇವಾ ಆಯೋಗದ ದಿನ ಆಚರಿಸಲಾಗುತ್ತದೆ. ಅಂದು ಉತ್ತಮ ಸಾಧನೆ ಮೆರೆದ ಸರಕಾರಕ್ಕೆ ಪ್ರಶಸ್ತಿ ಪ್ರಧಾನಿಯೇ ನೀಡುತ್ತಾರೆ. 7 ಪ್ರಶಸ್ತಿಗಳಲ್ಲಿ ಒಂದೂ ಪ್ರಶಸ್ತಿ ಕಾಂಗ್ರೆಸ್ ಸರಕಾರಕ್ಕೆ ದೊರೆಯಲಿಲ್ಲ. ಕರ್ನಾಟಕಕ್ಕೆ 2 ಪ್ರಶಸ್ತಿ ಮತ್ತು 1 ಗುಜರಾತ್ ಸರಕಾರಕ್ಕೆ ದೊರೆಯಿತು. ಸಿಕ್ಕಿಂಗೂ ಸಿಕ್ಕಿತು. ಕಾಂಗ್ರೆಸ್ ಸಿಕ್ಕಿಂಗೂ ಸಮಾನವಾಗಿಲ್ಲ. ಕಾಂಗ್ರೆಸ್ ದೇಶಕ್ಕೆ ಭಾರವಾಗಿದೆ.

* ದೊಡ್ಡಮಗಳಿಗೆ ದುಃಖವಾಗಿದ್ದರೆ ಚಿಕ್ಕಮಗಳಿಗೆ ಮದುವೆ ಮಾಡುತ್ತೀರಾ? ಕಾಂಗ್ರೆಸ್ಸಿನ ಎಷ್ಟೇ ನಾಯಕರು ಬರಲಿ, ಕರ್ನಾಟಕದ ಜನತೆ ಅವರಿಗೆ ಪ್ರಶ್ನೆ ಕೇಳಲಿ. ಅವರಾರೂ ಮೀಡಿಯಾವನ್ನು ಸಂಧಿಸುವುದಿಲ್ಲ, ಉತ್ತರ ನೀಡುವುದಿಲ್ಲ. ಅತ್ಯಂತ ದೊಡ್ಡ ಸರಕಾರ ದಿಲ್ಲಿಯಲ್ಲಿದೆ. ಎಲ್ಲ ಸರಕಾರಗಳು, ಕಾರ್ಪೊರೇಷನ್‌ಗಳು ಮತ್ತು ಸಿಬಿಐ ಕೂಡ ದಿಲ್ಲಿಯಲ್ಲಿದೆ. ಎಲೆ ಮೇಲೆ ಕೈಯಿಟ್ಟು ಉತ್ತರಿಸಿ ದಿಲ್ಲಿ ಸುರಕ್ಷಿತವಾಗಿದೆಯೆ? ಸಣ್ಣ ದಿಲ್ಲಿಯನ್ನು ಸಂಭಾಳಿಸದವರು ಕರ್ನಾಟಕವನ್ನು ಸಂಭಾಳಿಸುತ್ತಾರೆಯೆ?

* ಗುಜರಾತ್‌ದಲ್ಲಿಯೂ ಬಿಜೆಪಿ ಅನೇಕ ಅಡೆತಡೆಗಳನ್ನು ಎದುರಿಸಿತು. ನಮಗೂ ಸಾಕಷ್ಟು ಸಂಕಷ್ಟಗಳು ಬಂದಿದ್ದವು. ಆದರೆ, ಜನರು ನಮ್ಮ ತಪ್ಪನ್ನು ಮನ್ನಿಸಿ ನಮ್ಮನ್ನು ಆಶೀರ್ವದಿಸಿದರು. ಸತತ 12 ವರ್ಷಗಳಿಂದ ರಾಜ್ಯದಲ್ಲಿ ಬಿಜೆಪಿ ಅಧಿಕಾರ ಸ್ಥಾಪಿಸಿದೆ. ಇದೇ ರೀತಿಯ ಭರವಸೆ ಕರ್ನಾಟಕದ ಮತದಾರರ ಮೇಲೆಯೂ ಇದೆ. ಯಾರಿಗೆ ಕರ್ನಾಟಕದ ಭವಿಷ್ಯದ ಅಭಿವದ್ಧಿಯ ಚಿಂತೆಯಿದೆ ಅವರು ಬಿಜೆಪಿಯನ್ನು ಮೇ 5ರ ಚುನಾವಣೆಯಲ್ಲಿ ಖಂಡಿತ ಗೆಲ್ಲಿಸುತ್ತಾರೆಂಬ ಭರವಸೆಯಿದೆ.

* ಕರ್ನಾಟಕ ಮುಂದಿನ 5 ವರ್ಷಗಳ ಅಧಿಕಾರವನ್ನು ನೀಡಲು ಚುನಾವಣೆ ಎದುರಿಸುತ್ತಿದೆ. ಕರ್ನಾಟಕದ ಭವಿಷ್ಯವನ್ನು ಯಾರ ಕೈಗೆ ನೀಡುತ್ತೀರಿ? ಕಾಂಗ್ರೆಸ್‌ನ ಕೈ ಕಾಣುತ್ತಿದೆಯೇ ಹೊರತು, ಮುಖ್ಯಮಂತ್ರಿ ಅಭ್ಯರ್ಥಿ ಯಾರೆಂದು ಕಾಣಿಸುತ್ತಿಲ್ಲ.ಬರೀ ಕೈ ತೋರಿಸುವುದನ್ನು ಬಿಡಿ, ಮುಖ ತೋರಿಸಿ.ಆಂತರಿಕ ಸಂಕಷ್ಟಗಳು, ಏಳುಬೀಳುಗಳು ಬಂದಿದ್ದವು. ಆದರೆ, ಕರ್ನಾಟಕ ವಿಕಾಸ ಯಾತ್ರೆಯಲ್ಲಿ ಯಾವತ್ತೂ ಬೀಳಲಿಲ್ಲ. ಅದಕ್ಕೆ ಜಗದೀಶ್ ಶೆಟ್ಟರ್ ಅವಕಾಶ ಮಾಡಿಕೊಡಲಿಲ್ಲ.

* ಉತ್ಸಾಹ ತುಂಬಿದ ಸಹಸ್ರಾರು ಜನರಿಗೆ ಅಭಿನಂದನೆ ಸಲ್ಲಿಸುತ್ತೇನೆ. ನಿಮ್ಮ ಪ್ರೇಮವನ್ನು, ಆದರವನ್ನು, ಭಾವನೆಯನ್ನು ನಾನೆಂದೂ ಮರೆಯುವುದಿಲ್ಲ.

* ಬೇರೊಬ್ಬ ನಾಯಕನನ್ನು ನೋಡಲು ಅವರ ಮಾತು ಕೇಳು ಇಷ್ಟೊಂದು ಜನ ಬೆಂಗಳೂರಿನಲ್ಲಿ ನೆರೆದಿರಲಿಕ್ಕಿಲ್ಲ. ಇಷ್ಟೊಂದು ಜನ ನೆರೆದಿದ್ದನ್ನು ಮತ್ತು ಇಂಥ ಅಭೂತಪೂರ್ವ ವಾತಾವರಣವನ್ನು ಮೋದಿ ಕೂಡ ಬೇರೆಲ್ಲೂ ಕಂಡಿರಲಿಕ್ಕಿಲ್ಲ. ಮೈದಾನದಲ್ಲಿ ನೆರೆದವರಿಗೆ ಇದೊಂದು ಅವಿಸ್ಮರಣೀಯ ಅನುಭವ.

* 6.45ಕ್ಕೆ : ಬಸವನಗುಡಿ ಮೈದಾನಕ್ಕೆ ನರೇಂದ್ರ ಮೋದಿ ಆಗಮನ. ಇನ್ನೈದು ನಿಮಿಷದಲ್ಲಿ ಭಾಷಣ ಆರಂಭ ಎಂದು ನಿರ್ಮಲಾ ಸೀತಾರಾಮನ್ ಅವರಿಂದ ಹೇಳಿಕೆ ಬರುತ್ತಿದ್ದಂತೆ ಬೋಲೋ ಭಾರತ್ ಮತಾ ಕೀ ಜೈ ಎಂಬ ಕೂಗು.

ವೆಂಕಯ್ಯ ನಾಯ್ಡು ತಮಾಷೆ ಭಾಷಣ : ನರೇಂದ್ರ ಮೋದಿ ಕಾಂಗ್ರೆಸ್ ಪಾಲಿನ ಯಮಧರ್ಮ. ಡೈನಾಸ್ಟಿ ಈಸ್ ನಾಸ್ಟಿ ಫಾರ್ ಡೆಮಾಕ್ರಸಿ ಎಂದು ವೆಂಕಯ್ಯ ನಾಯ್ಡು ಹೇಳಿದಾಗ ಮೈದಾನದಲ್ಲಿ ಕಿವಿಗಡಚಿಕ್ಕುವ ಚಪ್ಪಾಳೆಯ ಸುರಿಮಳೆ. ಇಂಥ ಒನ್ ಲೈನರ್‌ಗಳು ವೆಂಕಯ್ಯ ನಾಯ್ಡು ಅವರಿಂದ ಮಾತ್ರ ಆಡಲು ಸಾಧ್ಯ ಎಂದು ಟ್ವಿಟ್ಟಿಗರು ಉದ್ಗರಿಸಿದರು.

* ಪಿಎಂ ಪ್ರಿಸೈಡ್ಸ್, ಮೇಡಂ ಡಿಸೈಡ್ಸ್, ಕಾಂಗ್ರೆಸ್ ವಿಲ್ ಬಿ ಔಟ್, ದೇರ್ ಈಸ್ ನೋ ಡೌಟ್ ಎಂದೇ ಪ್ರಾಸಬದ್ಧವಾಗಿ ಮತ್ತು ತಮಾಷೆಯಾಗಿ ತೆಲುಗಿನಲ್ಲಿ ಮಾತು ಆರಂಭಿಸಿದ ನಾಯ್ಡು, ಬೆಂಗಳೂರು ಏರ್ಪೋರ್ಟ್, ಮೆಟ್ರೋ, ಕಾವೇರಿ 4ನೇ ಹಂತ, ಹಳ್ಳಿಗಳಲ್ಲಿ ಸಿಮೆಂಟ್ ರಸ್ತೆ ಕಂಡಿರುವುದು ಬಿಜೆಪಿ ಆಡಳಿತದಲ್ಲಿ ಎಂದರು. ಕಾಂಗ್ರೆಸ್ ಇಡೀ ದೇಶವನ್ನು ಆಳಿ ಹಾಳು ಮಾಡಿದೆ ಎಂದು ಟೀಕಾಪ್ರಹಾರ ಮಾಡಿದರು.

ಬಿಜೆಪಿಯನ್ನು ಗೆಲ್ಲಿಸಿ ಎಂದ ಅಶೋಕ್ : ಮೋದಿ ಅವರು ವೇದಿಕೆಗೆ ಬರುವುದು ತಡವಾಗಿದ್ದರಿಂದ ಜನರನ್ನುದ್ದೇಶಿಸಿ ಉಪ ಮುಖ್ಯಮಂತ್ರಿ ಆರ್ ಅಶೋಕ್ ಅವರು ಭಾಷಣ ಆರಂಭಿಸಿದರು. ರಸ್ತೆ ನಿರ್ಮಾಣ, ಫ್ಲೈಓವರ್ ನಿರ್ಮಾಣ, ಕುಡಿಯುವ ನೀರು ಮುಂತಾದವುಗಳನ್ನು ಕಳೆದ 5 ವರ್ಷಗಳಲ್ಲಿ ಕಂಡಿದ್ದೇ ಆದರೆ ಬಿಜೆಪಿಗೆ ಮತ ನೀಡಿ ಗೆಲ್ಲಿಸಿ ಎಂದು ಮನವಿ ಮಾಡಿದರು. ಅಷ್ಟರಲ್ಲಿ ಮಳೆ ಸಣ್ಣದಾಗಿ ಆರಂಭವಾಗಿತ್ತು.

* ಮೋದಿ ವೇದಿಕೆಗೆ ಬರುವುದು ಸಂಜೆ 6 ಗಂಟೆಗೆ ನಿಗದಿಯಾಗಿದ್ದರಿಂದ ಹಾಡುಗಾರ ಶಶಿಧರ ಕೋಟಿ ಅವರ ಸುಮಧುರ ಗಾಯನ ಕೇಳಿ ಜನರು ಆನಂದಹೊಂದಿದರು. ಅದಾಗಲೆ ವೇದಿಕೆಯ ಮೇಲೆ ಆರ್. ಅಶೋಕ್, ಸುರೇಶ್ ಕುಮಾರ್, ರಾಮಚಂದ್ರ ಗೌಡ, ರಾಮಾ ಜೋಯಿಸ್ ಮುಂತಾದವರು ಬಂದಿದ್ದರು.

* ಬಸವನಗುಡಿ ನ್ಯಾಷನಲ್ ಕಾಲೇಜು ಮೈದಾನ ಕಿಕ್ಕಿರಿದು ತುಂಬಿದೆ. ಎಣಿಸಲಾರದಷ್ಟು ಜನ. ಮಳೆಯಾಗುವ ಭೀತಿಯನ್ನೂ ಧಿಕ್ಕರಿಸಿ ಆಕಾಶವೇ ಚಪ್ಪರ ಎಂದು ಜನರು ಕುಳಿತಿದ್ದಾರೆ. ವಯಸ್ಸಾದ ನಾಗರಿಕರು ಕೂಡ ಮೈದಾನದಲ್ಲಿ ಜಮಾಯಿಸಿರುವುದು ಮೋದಿ ಮೋಡಿಗೆ ಹಿಡಿದ ಕನ್ನಡಿ.

ಮೋದಿ ಬರುವ ಮೊದಲು : ರೇನ್ ರೇನ್ ಗೋ ಅವೇ ಕಮ್ ಅಗೇನ್ ಅನದರ್ ಡೇ... ಬಸವನಗುಡಿ ನ್ಯಾಷನಲ್ ಕಾಲೇಜು ಮೈದಾನಕ್ಕೆ ಕರ್ನಾಟಕದ ನಾನಾ ಜಿಲ್ಲೆಗಳಿಂದ ಸಮರೋಪಾದಿಯಲ್ಲಿ ಹರಿದು ಬರುತ್ತಿರುವ ಜನರು ಮತ್ತು ಮೈದಾನದಲ್ಲಿ ಕುಳಿತು ಮೆಸೇಜ್ ಮೇಲೆ ಮೆಸೇಜ್ ಕುಟ್ಟುತ್ತಿರುವ ನೆಟ್ಟಿಗರು ಗುನುಗುತ್ತಿರುವ ಒಂದೇ ಒಂದು ರೈಮ್. ಮತ್ತು ಅವರೆಲ್ಲರೂ ಜಪಿಸುತ್ತಿರುವುದು ನಮೋ ಮಂತ್ರ.

ನ್ಯಾಷನಲ್ ಕಾಲೇಜು ಮೈದಾನದಲ್ಲಿ ನೆರೆದಿರುವ ಲಕ್ಷಾಂತರ ಜನರು ಮಾತ್ರವಲ್ಲ ಆಗಸದಾದ್ಯಂತ ಅಡರಿಕೊಂಡಿರುವ ಕಪ್ಪು ಮೋಡಗಳು ಕೂಡ ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿ ಅವರ ಮಾತುಗಳನ್ನು ಕೇಳಲು ಬಂದಿದ್ದವಾ? ಇನ್ನು ಸೋಷಿಯಲ್ ಮೀಡಿಯಾ ತಂಡವೇ ಸರ್ವ ಅಸ್ತ್ರಗಳನ್ನು ಹಿಡಿದುಕೊಂಡು ಅಂತರ್ಜಾಲಕ್ಕೆ ದಾಳಿ ಇಡಲು ಸಜ್ಜಾಗಿವೆ.

ಮೈದಾನದುದ್ದಕ್ಕೂ ಜನರಲ್ಲಿ ವಿದ್ಯುತ್ ಸಂಚಾರವಾದಂಥ ವಾತಾವರಣ. ಈ ದೇಶಕ್ಕೆ ನಿಜವಾದ ದೇಶಭಕ್ತನೇ ಪ್ರಧಾನಿಯಾಗಬೇಕು ಮತ್ತು ಆ ದೇಶಭಕ್ತ ನರೇಂದ್ರ ಮೋದಿಯೇ ಎಂಬ ಸಂದೇಶಗಳು ಟ್ವಿಟ್ಟರಿನಲ್ಲಿ ಹರಿದಾಡುತ್ತಿದ್ದವು. ಮೈಸೂರು ಮಂಡ್ಯ ಶಿವಮೊಗ್ಗದಿಂದ ಮಾತ್ರವಲ್ಲ ದೂರದ ಪುಣೆಯಿಂದಲೂ ಹಲವಾರು ಜನರು ಮೋದಿ ಭಾಷಣ ಕೇಳಲು ಬಂದಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+