ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮಂಡ್ಯ ಪಾಲಿಟಿಕ್ಸ್ ಗೆ ಶರಣು ಶರಣೆಂದ ಕೃಷ್ಣ

By Mahesh
|
Google Oneindia Kannada News

Why SM Krihsna Disappointed
ಬೆಂಗಳೂರು, ಏ.16: ರಾಷ್ಟ್ರ ರಾಜಕಾರಣದಿಂದ ರಾಜ್ಯದ ಕಡೆಗೆ ಮಾಜಿ ವಿದೇಶಾಂಗ ಸಚಿವ ಎಸ್ ಎಂ ಕೃಷ್ಣ ಅವರು ಬರುವ ಸುದ್ದಿ ಹಬ್ಬುತ್ತಿದ್ದಂತೆ ವಿಧಾನಸಭೆ ಚುನಾವಣೆಯಲ್ಲಿ ಬಹುಮತ ಪಡೆದು ಅಧಿಕಾರ ಕೈಗೆ ಬಂದಷ್ಟೇ ಖುಷಿ ಎಲ್ಲೆಡೆ ವ್ಯಕ್ತವಾಗಿತ್ತು. ಆದರೆ, ಈ ರಣೋತ್ಸಾಹಕ್ಕೆ ಬಂಡಾಯದ ಬಿಸಿ ತಟ್ಟಿ ಹಿರಿಯ ಮುಖಂಡ ಎಸ್ಸೆಂ ಕೃಷ್ಣ ಅವರ ಮನಸ್ಸಿಗೆ ಘಾಸಿಯಾಗಿ ಪಾಂಚಜನ್ಯ ಊದುವುದನ್ನು ಮರೆಯುವಂತೆ ಮಾಡಿಬಿಟ್ಟಿತು.

ಮಾಜಿ ಮುಖ್ಯಮಂತ್ರಿ ಎಸ್.ಎಂ.ಕೃಷ್ಣ ಚುನಾವಣೆಯಲ್ಲಿ ತಟಸ್ಥವಾಗಿ ಉಳಿಯಲು ನಿರ್ಧರಿಸಿದ್ದಾರೆ. ಪ್ರಸಕ್ತ ಚುನಾವಣೆಯಲ್ಲಿ ತಮ್ಮ ಬೆಂಬಲಿಗರಿಗೆ ಟಿಕೆಟ್ ಸಿಗದಿರುವುದರಿಂದ ಬೇಸರಗೊಂಡಿದ್ದಾರೆ ಎಂದು ಅಷ್ಟು ಲೈಟ್ ಆಗಿ ಹೇಳಲು ಬರುವುದಿಲ್ಲ. ಕೃಷ್ಣ ಅವರನ್ನು ಮುಂದಿನ ಮುಖ್ಯಮಂತ್ರಿ ಅಭ್ಯರ್ಥಿ ಎಂದೇ ಬಿಂಬಿಸಲಾಯಿತು. ನಂತರ ಚುನಾವಣೆ ಸಾರಥ್ಯ ನೀಡಲಾಗುತ್ತೆ ಎನ್ನಲಾಗಿತ್ತು. ಆದರೆ, ಎಲ್ಲವೂ ಉಲ್ಟಾ ಹೊಡೆಯಿತು.

ಮುಖ್ಯಮಂತ್ರಿ ಅಭ್ಯರ್ಥಿ ಘೋಷಿಸದಿರುವುದು, ಟಿಕೆಟ್ ಗೊಂದಲ, ಪ್ರಚಾರ ಕೊರತೆ ಎಲ್ಲವೂ ತಲೆನೋವಾಗಿ ಹೈ ಕಮಾಂಡ್ ಕೂಡಾ ಡಲ್ ಹೊಡೆಯ ತೊಡಗಿದ್ದು, ಕೃಷ್ಣ ಅವರ ಸೂಕ್ಷ್ಮ ಮನಸ್ಸಿಗೆ ಘಾಸಿಯಾಗಿದೆ. ಸಾಲದ್ದಕ್ಕೆ ಸ್ವಂತ ಊರು ಮಂಡ್ಯ ಪಾಲಿಟಿಕ್ಸ್ ಕಂಡು ಬೆಚ್ಚಿದ್ದಾರೆ. ಅಂಬರೀಷ್ ತಮ್ಮ ನಟನಾ ಕೌಶಲ್ಯದ ಮೂಲಕ ಬೆಂಬಲಿಗ ಲಿಂಗರಾಜುಗೆ ಟಿಕೆಟ್ ಕೊಡಿಸಿದ್ದು ಕೃಷ್ಣ ಅವರಿಗೆ ಹಿನ್ನಡೆ ಎಂದರೂ ತಪ್ಪಾಗಲಾರದು.

ಬಿಜೆಪಿ ರೀತಿಯಲ್ಲೇ ಈಗ ಕಾಂಗ್ರೆಸ್‌ನಿಂದ ಪ್ರಬಲ ನಾಯಕರು ಹಿಂದೆ ಸರಿಯುತ್ತಿದ್ದಾರೆ. ಎ.ಕೃಷ್ಣಪ್ಪ ಜೆಡಿಎಸ್ ತೆನೆ ಹೊತ್ತ ನಡುವೆಯೇ ಈಗ ದಾವಣಗೆರೆ, ಬಳ್ಳಾರಿಯಲ್ಲೂ ಬಂಡಾಯದ ಬಿಸಿ ಜೋರಾಗಿರುವುದು ಗೊತ್ತೇ ಇದೆ.

ಈ ನಡುವೆ ತಮ್ಮ ಬೆಂಬಲಿಗರಿಗೆ ಟಿಕೆಟ್ ನೀಡದೆ ತಮ್ಮನ್ನು ಕಡೆಗಣಿಸಿದ ಹೈಕಮಾಂಡ್ ವರ್ತನೆಗೆ ನಯವಾಗಿಯೇ ತಿರುಗೇಟು ನೀಡಿರುವ ಎಸ್.ಎಂ.ಕೃಷ್ಣ ಅವರು ಚುನಾವಣೆ ಪ್ರಕ್ರಿಯೆಯಿಂದ ದೂರ ಉಳಿಯುವ ನಿರ್ಧಾರ ಮಾಡಿದ್ದಾರೆ. ಈ ವಿಷಯ ತಿಳಿಯುತ್ತಿದ್ದಂತೆಯೇ ಕಾಂಗ್ರೆಸ್‌ನ ಒಂದು ವಲಯ ತೀವ್ರ ಚಿಂತೆಗೆ ಒಳಗಾಗಿದ್ದು, ಚುನಾವಣೆಗೆ ಮುನ್ನವೇ ಇಂತಹ ಪರಿಸ್ಥಿತಿ ಎದುರಾದರೆ ಮುಂದೇನು ಎಂಬ ಆತಂಕ ಹುಟ್ಟಿದೆ.

ಕೃಷ್ಣ ಅವರನ್ನು ಸಾಕಷ್ಟು ಬಾರಿ ಅಪಮಾನಿಸಲಾಗಿದೆ. ಹೀಗಿರುವಾಗ ತನ್ನನ್ನು ನಂಬಿರುವ ಕೈ ನಾಯಕರಿಗೆ ಹೇಗೆ ಮುಖ ತೋರಿಸುತ್ತಾರೆ ಎಂದು ಅವರ ಕಟ್ಟಾ ಬೆಂಬಲಿಗ ಕಾಂಗ್ರೆಸ್ ನಾಯಕರೊಬ್ಬರು ಹೆಸರು ಹೇಳಲು ಇಚ್ಚಿಸದೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಎಸ್.ಎಂ.ಕೃಷ್ಣ ಅವರು ತಟಸ್ಥವಾಗಿ ಉಳಿದರೆ ಮುಂದೆ ಏನು ಎಂಬ ಚಿಂತೆ ಶುರುವಾಗಿದ್ದು, ಹೇಗಾದರೂ ಮಾಡಿ ಮನವೊಲಿಸಿ ಎಲೆಕ್ಷನ್ ಅಖಾಡಕ್ಕೆ ಕರೆತರುವ ಪ್ರಕ್ರಿಯೆಗೆ ಕೆಲ ನಾಯಕರು ಚಾಲನೆ ನೀಡಿದ್ದಾರೆಂದು ಹೇಳಲಾಗಿದೆ.

ದಾವಣಗೆರೆಯಲ್ಲಿ ಶಾಮನೂರು ಶಿವಶಂಕರಪ್ಪ ಅವರಿಗೂ ಬಂಡಾಯದ ಬಿಸಿ ತಟ್ಟಿದ್ದು, ಇನ್ನು ಅವರ ಪುತ್ರ ಎಸ್.ಎಸ್.ಮಲ್ಲಿಕಾರ್ಜುನ ಅವರು ಟಿಕೆಟ್ ಪಡೆಯಲು ಸಾಕಷ್ಟು ಪ್ರಯಾಸ ಪಡುತ್ತಿದ್ದಾರೆ. ಇಲ್ಲಿ ಮಹಿಮಾ ಪಟೇಲ್ ಸೇರಿದಂತೆ ಮೂವರ ಹೆಸರುಗಳು ಕೇಳಿಬರುತ್ತಿವೆ. ಇಲ್ಲಿ ಯಾರಿಗೆ ಟಿಕೆಟ್ ನೀಡಿದರೂ ಕೂಡ ಬಂಡಾಯದ ಬಾವುಟ ಹಾರುವುದು ನಿಶ್ಚಿತ ಎಂದು ಹೇಳಲಾಗುತ್ತಿದೆ.

ಬಳ್ಳಾರಿಯಲ್ಲೂ ಇದೇ ಪರಿಸ್ಥಿತಿ ಮುಂದುವರಿದಿದ್ದು, ಕೊನೆ ಕ್ಷಣದಲ್ಲಿ ಕಾಂಗ್ರೆಸ್‌ಗೆ ಕೈ ಕೊಡಲು ಕೆಲವರು ಚಿಂತನೆ ನಡೆಸಿದ್ದಾರೆಂದು ಕೂಡ ತಿಳಿದುಬಂದಿದೆ.

ಚಿಕ್ಕಬಳ್ಳಾಪುರ ವಿಧಾನಸಭಾ ಕ್ಷೇತ್ರದಲ್ಲಿ ಕೆ.ಸುಧಾಕರ್‌ಗೆ ಟಿಕೆಟ್ ನೀಡಿರುವುದನ್ನು ಖಂಡಿಸಿ ಕಾಂಗ್ರೆಸ್ ಮುಖಂಡ ಆಂಜಿನಪ್ಪ ಅವರ ಬೆಂಬಲಿಗರು ಪ್ರತಿಭಟನೆ ನಡೆಸುತ್ತಿದ್ದು, ಜಿಲ್ಲೆಯಲ್ಲಿ ಇದೇ ರೀತಿಯ ವಾತಾವರಣ ಕೆಲ ಪ್ರದೇಶಗಳಲ್ಲಿ ಕಂಡುಬರುತ್ತಿರುವುದು ಕಾಂಗ್ರೆಸ್‌ಗೆ ಬಿಸಿ ತುಪ್ಪವಾಗಿ ಪರಿಣಮಿಸಿದೆ.

English summary
Congress candidate selection for the May 5 Assembly elections has stirred a hornets’ nest with several senior leaders openly airing their resentment on being ignored. In Mandya SM Krishna was ditched by Ambareesh and his supporters and SMK is disappointed
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X