ತೆನೆ ಹೊರಲು ಸಿದ್ಧವಾದ ಬೇಳೂರು ಗೋಪಾಲಕೃಷ್ಣ

ಬೆಂಗಳೂರಿನಲ್ಲಿ ಮಂಗಳವಾರ ಮಾತನಾಡಿದ ಬೇಳೂರು ಗೋಪಾಲಕೃಷ್ಣ, ಜೆಡಿಎಸ್ ಪಕ್ಷ ಸೇರಿ ಸಾಗರ ಕ್ಷೇತ್ರದಿಂದಲೇ ಸ್ಪರ್ಧಿಸುವ ಬಗ್ಗೆ ಕುಮಾರಸ್ವಾಮಿ ಅವರೊಂದಿಗೆ ಮಾತುಕತೆ ನಡೆಸಿದ್ದೇನೆ. ಅವರು ಒಪ್ಪಿಗೆ ನೀಡಿದ್ದಾರೆ ಶುಕ್ರವಾರ ಜೆಡಿಎಸ್ ಪಕ್ಷ ಸೇರಲಿದ್ದೇನೆ ಎಂದು ಘೋಷಿಸಿದರು.
ಬೇಳೂರು ಸೇರ್ಪಡೆಯಿಂದಾಗಿ ಜೆಡಿಎಸ್ ಪಕ್ಷದ ಶಕ್ತಿ ಶಿವಮೊಗ್ಗ ಜಿಲ್ಲೆಯಲ್ಲಿ ವೃದ್ಧಿಸುವ ಸಾಧ್ಯತೆ ಇದೆ. ಸೊರಬ ಕ್ಷೇತ್ರದಿಂದ ದಿ.ಎಸ್.ಬಂಗಾರಪ್ಪ ಪುತ್ರ ಮಧು ಬಂಗಾರಪ್ಪ ಸ್ಪರ್ಧಿಸಲಿದ್ದಾರೆ. ಸಾಗರ ಕ್ಷೇತ್ರದಿಂದ ಬೇಳೂರು ಸ್ಪರ್ಧಿಸಿದರೆ ಜೆಡಿಎಸ್ ಶಕ್ತಿ ವೃದ್ಧಿಸಲಿದೆ.
ಕಾಡಿದ ಕಾಗೋಡು : ಕಾಂಗ್ರೆಸ್ ಪಕ್ಷ ಸೇರುವ ಉತ್ಸಾಹದಲ್ಲಿದ್ದ ಬೇಳೂರು ಗೋಪಾಲಕೃಷ್ಣ ಅವರಿಗೆ ಹಿರಿಯ ಮುಖಂಡ ಕಾಗೋಡು ತಿಮ್ಮಪ್ಪ ಇನ್ನಿಲ್ಲದಂತೆ ಕಾಡಿದರು. ತಮ್ಮ ಪ್ರಭಾವ ಬಳಸಿ ಬೇಳೂರು ಅವರಿಗೆ ಟಿಕೆಟ್ ದೊರೆಯದಂತೆ ಮಾಡುವಲ್ಲಿ ಯಶಸ್ವಿಯಾಗಿದ್ದರು. (ಕಾಂಗ್ರೆಸ್ ಪಟ್ಟಿ )
ಕಳೆದ ಬಾರಿ ಚುನಾವಣೆಯಲ್ಲಿ ಬೇಳೂರು ವಿರುದ್ಧ ಸ್ಪರ್ಧಿಸಿ ಸೋಲುಂಡಿದ್ದ ಕಾಗೋಡು ತಿಮ್ಮಪ್ಪ ಈ ಬಾರಿಯು ಕಾಂಗ್ರೆಸ್ ಟಿಕೆಟ್ ಪಡೆದಿದ್ದಾರೆ. ಅವರ ರಾಜಕೀಯ ಕಡುವೈರಿ ಜೆಡಿಎಸ್ ನಿಂದ ಸ್ಪರ್ಧಿಸಿದರೆ ಮತ್ತೊಮ್ಮೆ ತೀವ್ರ ಪೈಪೋಟಿ ನಡೆಯಲಿದೆ.
ಬಿಜೆಪಿಗೆ ಅಧಿಕೃತವಾಗಿ ಬೇಳೂರು ಗೋಪಾಲಕೃಷ್ಣ ಇನ್ನೂ ರಾಜೀನಾಮೆ ನೀಡಿಲ್ಲ. ಆದರೆ ಡಿಸಿಎಂ ಕೆ.ಎಸ್.ಈಶ್ವರಪ್ಪ ಈಗಾಗಲೇ ಬೇಳೂರು ಅವರನ್ನು ಪಕ್ಷದಿಂದ ಉಚ್ಛಾಟಿಸಿರುವಂತೆ ಚಾಟಿ ಬೀಸುತ್ತಿದ್ದಾರೆ. ಶುಕ್ರವಾರ ಬೆಳಗ್ಗೆ ಬೇಳೂರು ಬಿಜೆಪಿ ತೊರೆಯಲು ಮುಹೂರ್ತ ಫಿಕ್ಸ್ ಆಗಿದೆ.
ಶುಕ್ರವಾರ ಎರಡು ವಿಕೆಟ್ ಪತನ : ಯುಗಾದಿ ಹಬ್ಬದ ಮರುದಿನ ಹೊಸ ಸಂವತ್ಸರದಲ್ಲಿ ಬಿಜೆಪಿಯ ಎರಡು ವಿಕೆಟ್ ಪತನಗೊಳ್ಳಲಿದೆ. ಜೆಡಿಎಸ್ ಸೇರಲಿರುವ ಬೇಳೂರು ಗೋಪಾಲಕೃಷ್ಣ ಮತ್ತು ವಿಜಯನಗರ ಕ್ಷೇತ್ರದ ಶಾಸಕ ಮತ್ತು ಪವಾಸೋದ್ಯಮ ಸಚಿವ ಆನಂದ್ ಸಿಂಗ್ ಶುಕ್ರವಾರ ಬಿಜೆಪಿಗೆ ರಾಜೀನಾಮೆ ನೀಡುವುದಾಗಿ ಘೋಷಿಸಿದ್ದಾರೆ.
ಚುನಾವಣೆ ಅಧಿಸೂಚನೆ ಪ್ರಕಟಗೊಂಡ ತಕ್ಷಣ ಶಾಸಕರು ತಮ್ಮ ಅಂತಿಮ ರಾಜಕೀಯ ನಿರ್ಧಾರಗಳನ್ನು ತೆಗೆದುಕೊಳ್ಳಲಿದ್ದಾರೆ. ಚುನಾವಣೆಯಲ್ಲಿ ಯಾರು ಗೆಲವು ಸಾಧಿಸಿ ವಿಧಾನಸೌಧಕ್ಕೆ ಮತ್ತೊಮ್ಮೆ ಬರುತ್ತಾರೆ ಎಂಬುದು ಜನರ ತೀರ್ಪಿನ ಮೇಲೆ ನಿರ್ಧರಿತವಾಗಲಿದೆ.
ನೀವೇ ಆಗಿರಿ ಕರ್ನಾಟಕದ ಗುರು | ಮತ ಹಾಕ್ತೀನಂತ ಪ್ರಮಾಣ ಮಾಡಿ












Click it and Unblock the Notifications