ರಾಜೀನಾಮೆ ಬೆದರಿಕೆ ಹಾಕಿದ ಮಹಿಳಾ ಕಾಂಗ್ರೆಸ್

ತಮಗೆ ಟಿಕೆಟ್ ಬೇಕೆಂದು ಪುರುಷ ಅಭ್ಯರ್ಥಿಗಳು ವಿವಿಧ ರೀತಿಯ ಒತ್ತಡ ತಂತ್ರ ಅನುಸರಿಸಿ ವರಿಷ್ಠರಿಗೆ ತಲೆನೋವಾಗಿ ಪರಿಣಮಿಸಿದ್ದರು. ಈಗ ಕೆಪಿಸಿಸಿಯ ಮಹಿಳಾ ಪದಾಧಿಕಾರಿಗಳು ಮಹಿಳೆಯರಿಗೆ ಹೆಚ್ಚಿನ ಟಿಕೆಟ್ ನೀಡದಿದ್ದರೆ ರಾಜೀನಾಮೆ ನೀಡುವುದಾಗಿ ಎಚ್ಚರಿಕೆ ನೀಡಿದ್ದಾರೆ.
ಸಮನ್ವಯ ಸಮಿತಿ ಸದಸ್ಯೆ ವಾಸಂತಿ ಶಿವಣ್ಣ, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿಗಳಾದ ಮಲ್ಲಾಜಮ್ಮ, ಚಂದ್ರಕಲಾ, ಚುನಾವಣಾ ಸಮಿತಿ ಸದಸ್ಯೆ ಸುಮಾ ವಸಂತ್, ಅಖಿಲ ಭಾರತ ಮಹಿಳಾ ಕಾಂಗ್ರೆಸ್ ಕಾರ್ಯದರ್ಶಿ ಬಿ.ಸಿ.ಗೀತಾ, ಜಲಜಾ ನಾಯಕ ರಾಜೀನಾಮೆ ನೀಡುವುದಾಗಿ ಪತ್ರ ಬರೆದಿದ್ದಾರೆ.
ಕಳೆದ ಬಾರಿಯ ಚುನಾವಣೆಯಲ್ಲಿ 11 ಮಹಿಳೆಯರಿಗೆ ಟಿಕೆಟ್ ನೀಡಲಾಗಿತ್ತು. ಈ ಬಾರಿ ಕೇವಲ 8 ಮಹಿಳೆಯರಿಗೆ ಟಿಕೆಟ್ ನೀಡಲಾಗಿದೆ ಎಂದು ಪದಾಧಿಕಾರಿಗಳು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಮಹಿಳೆಯೇ ಅಧ್ಯಕ್ಷೆಯಾಗಿರುವ ಕಾಂಗ್ರೆಸ್ ಪಕ್ಷದಲ್ಲಿ ಇಂತಹ ಪರಿಸ್ಥಿತಿ ಬರಬಾರದಾಗಿತ್ತು. ಟಿಕೆಟ್ ನೀಡದಿದ್ದರೆ ತಮ್ಮ ಹುದ್ದೆಗಳಿಗೆ ರಾಜೀನಾಮೆ ನೀಡುವುದಾಗಿ ಪತ್ರದಲ್ಲಿ ಉಲ್ಲೇಖಿಸಿದ್ದಾರೆ.
ಪರಮೇಶ್ವರ್ ವಿರುದ್ಧ ಗರಂ : ಕರ್ನಾಟಕದ ಮಹಿಳೆಯರ ನಿಯೋಗ ಸೋನಿಯಾ ಗಾಂಧಿ ಅವರನ್ನು ಭೇಟಿ ಮಾಡಿದಾಗ ಹೆಚ್ಚಿನ ಪ್ರಾತಿನಿಧ್ಯ ನೀಡುವ ಭರವಸೆ ನೀಡಿದ್ದರು. ಆದರೆ, ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮಶ್ವರ್ ಮತ್ತು ವಿಪಕ್ಷ ನಾಯಕ ಸಿದ್ಧರಾಮಯ್ಯ ಮಹಿಳೆಯರಿಗೆ ಟಿಕೆಟ್ ನೀಡದಂತೆ ವರಿಷ್ಠರಿಗೆ ಸೂಚಿಸಿದ್ದಾರೆ ಎಂದು ಟಿಕೆಟ್ ವಂಚಿತರು ಆರೋಪ ಮಾಡುತ್ತಿದ್ದಾರೆ.
ಮುಂದುವರೆದ ಪ್ರತಿಭಟನೆ : ಹಾವೇರಿ, ರಾಣಿಬೆನ್ನೂರು, ಬೆಂಗಳೂರಿನ ಸಿ.ವಿ.ರಾಮನ್ ನಗರ ಮುಂತಾದ ಕ್ಷೇತ್ರಗಳ ಕಾರ್ಯಕರ್ತರು ಟಿಕೆಟ್ ನೀಡುವಂತೆ ಒತ್ತಾಯಿಸಿ ಕೆಪಿಸಿಸಿ ಕಚೇರಿ ಮುಂದೆ ಬುಧವಾರವು ಪ್ರತಿಭಟನೆ ನಡೆಸಿದರು.
ಕಾಂಗ್ರೆಸ್ ಮುಖಂಡ ಡಿ.ಕೆ.ಶಿವಮಕುಮಾರ್ ಕೆಪಿಸಿಸಿ ಕಚೇರಿಯಲ್ಲಿ ಕಾರ್ಯಕರ್ತರ ಸಮಸ್ಯೆ ಆಲಿಸಿ ಹೈ ಕಮಾಂಡ್ ಗೆ ತಿಳಿಸುವುದಾಗಿ ಭರವಸೆ ನೀಡಿದರು. ಕೆಪಿಸಿಸಿ ಕಚೇರಿ ಕಾರ್ಯಕರ್ತರಿಗೆ ದೇವಾಲಯವಿದ್ದಂತೆ ಇಲ್ಲಿ ಬಂದು ಸಮಸ್ಯೆ ಹೇಳಿಕೊಳ್ಳುವುದು ಸಾಮಾನ್ಯ. ಅದನ್ನು ಬಗೆಹರಿಸುತ್ತೇವೆ ಎಂದು ಡಿ.ಕೆ.ಶಿವಕುಮಾರ್ ಹೇಳಿದರು.
ನೀವೇ ಆಗಿರಿ ಕರ್ನಾಟಕದ ಗುರು | ಮತ ಹಾಕ್ತೀನಂತ ಪ್ರಮಾಣ ಮಾಡಿ












Click it and Unblock the Notifications