'ಬಿಜೆಪಿಯ ಸರ್ವನಾಶಕ್ಕೆ ನರೇಂದ್ರ ಮೋದಿ ಸಾಕು'

ಬಿಜೆಪಿ ನಿಜಕ್ಕೂ ಒತ್ತಡಕ್ಕೆ ಸಿಲುಕಿದೆ. ಭಾವಿ ಪ್ರಧಾನಿ ಎಂದು ಬಿಂಬಿಸಲಾಗುತ್ತಿರುವ ಮೋದಿಯನ್ನು ಪಕ್ಷದ ಸಂಸದೀಯ ಮಂಡಳಿಗೆ ಸೇರಿಸಿಕೊಳ್ಳುವ ಅನಿವಾರ್ಯತೆಗೆ ಸಿಲುಕಿದೆ. ನಿಜಕ್ಕೂ ಬಿಜೆಪಿ ಪಕ್ಷಕ್ಕೆ ಮೋದಿ ಸವಾಲಾಗಿ ಪರಿಣಮಿಸಲಿದ್ದಾರೆ ಎಂದು ಮೋದಿ ಕುರಿತು ಕಾಂಗ್ರೆಸ್ ಸಚಿವ ಕಪಿಲ್ ಸಿಬಲ್ ಭವಿಷ್ಯ ನುಡಿದಿದ್ದಾರೆ.
'ವಾಸ್ತವವಾಗಿ ಮೋದಿಯೇ ಬಿಜೆಪಿಗೆ ಸವಾಲಾಗಿದ್ದಾರೆ. ಮೋದಿಯೇ ಪಕ್ಷವನ್ನು ತಮ್ಮ ಕಬ್ಜಾಗೆ ತೆಗೆದುಕೊಳ್ಳಲು ಹವಣಿಸುತ್ತಿದ್ದಾರೆ. ಅದೊಮ್ಮೆ ಮೋದಿ ಪಕ್ಷವನ್ನು ತಮ್ಮ ಸುಪರ್ದಿಗೆ ತೆಗೆದುಕೊಂಡರು ಅಂದರೆ ಅಲ್ಲಿಗೆ ಮುಗಿಯಿತು ಕಥೆ; ಬಿಜೆಪಿಯದ್ದು' ಎಂದು ಸಿಬಲ್ ಬಣ್ಣಿಸಿದ್ದಾರೆ. ಹೀಗೆ ಯಾಕೆ ಹೇಳುತ್ತಿದ್ದೇನೆ ಅಂದರೆ ಮೋದಿ ಬ್ರ್ಯಾಂಡಿನ ರಾಜಕೀಯಕ್ಕೂ ಬಿಜೆಪಿ ಬ್ರ್ಯಾಂಡಿಗೂ ಸಾಮ್ಯವೇ ಇಲ್ಲ ಎಂದು ಅವರು ತರ್ಕಿಸಿದ್ದಾರೆ.
ಈ ಮೋದಿ ಬೇರೆ ಯಾರಿಗೂ ಸವಾಲು ಆಲ್ಲ. ಬದಲಿಗೆ ಬಿಜೆಪಿಗೇ ಸವಾಲು ಆಗಲಿದ್ದಾರೆ. ಅದು, ಬಿಜೆಪಿ ವರ್ಸಸ್ ಮೋದಿ ಆಗಲಿದೆ. ಮುಂದೆ ಗೊತ್ತಾಗುತ್ತದೆ- ಬಿಜೆಪಿ ಹೇಳಿದಂತೆ ಮೋದಿ ಕೇಳುತ್ತಾರೋ ಅಥವಾ ಅದಕ್ಕೆ ತದ್ವಿರುದ್ದವೋ ಎಂಬುದು ಎಂದು ಸಿಬಲ್ ವಿಶ್ಲೇಷಿಸಿದ್ದಾರೆ.
ಮೋದಿಯ ಪರಮಾಪ್ತ ಅಮಿತ್ ಷಾ ಸಂಸದೀಯ ಮಂಡಳಿಗೆ ಸೇರ್ಪಡೆಯಾಗಿರುವುದು ಬಿಜೆಪಿ ಭವಿಷ್ಯದಲ್ಲಿ ಎತ್ತ ಸಾಗಿದೆ ಎಂಬುದರ ಸೂಚಕವಾಗಿದೆ ಎಂದೂ ಸಿಬಲ್ ಹೇಳಿದ್ದಾರೆ.












Click it and Unblock the Notifications