ಕುಮಾರಸ್ವಾಮಿ ಜೊತೆ ಶ್ರೀರಾಮುಲು ಮೈತ್ರಿ?

ಪರಿಸ್ಥಿತಿ ಹೀಗಿರುವಾಗ ಒಂದು ಹೆಜ್ಜೆ ಮುಂದಿಟ್ಟಿರುವ ಬಿಎಸ್ಆರ್ ಕಾಂಗ್ರೆಸ್ ಪಕ್ಷದ ನಾಯಕ ಬಿ. ಶ್ರೀರಾಮುಲು ಅವರು ಜನತಾದಳ (ಜಾತ್ಯತೀತ) ಪಕ್ಷದೊಡನೆ ಚುನಾವಣಾ ಪೂರ್ವ ಮೈತ್ರಿಗೆ ಮುಂದಾಗಿದ್ದಾರೆ. ಎಲ್ಲ ಪಕ್ಷಗಳು ತಾವು ಏಕಾಂಗಿಯಾಗಿ ಸ್ಪರ್ಧಿಸುವುದಾಗಿ ಹೇಳುತ್ತಿರುವ ಸಂದರ್ಭದಲ್ಲಿ ಈ ಬೆಳವಣಿಗೆ ಭಾರೀ ಕುತೂಹಲವನ್ನು ಕೆರಳಿಸಿದೆ.
ಶನಿವಾರ ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ. ಕುಮಾರಸ್ವಾಮಿ ಅವರ ಮನೆಯಲ್ಲಿ ಅವರ ಮತ್ತು ಶ್ರೀರಾಮುಲು ನಡುವೆ ಮೈತ್ರಿ ಕುರಿತು ಚರ್ಚೆ ನಡೆದಿದೆ. ಚುನಾವಣೆಯಲ್ಲಿ 100 ಸ್ಥಾನಗಳನ್ನು ತಮಗೆ ಬಿಟ್ಟುಕೊಡಬೇಕಾಗಿ ಶ್ರೀರಾಮುಲು ಅವರು ಕುಮಾರಸ್ವಾಮಿಗೆ ಮನವಿ ಮಾಡಿದ್ದಾರೆ ಎಂದು ವಿಶ್ವಸನೀಯ ಮೂಲಗಳಿಂದ ತಿಳಿದುಬಂದಿದೆ. ಈ ಪ್ರಸ್ತಾವನೆಗೆ ಕುಮಾರಸ್ವಾಮಿ ಕೂಡ ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ ಎಂದು ತಿಳಿದುಬಂದಿದೆ.
ಇದೇ ತಿಂಗಳು ನಡೆದ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಬಿಎಸ್ಆರ್ ಕಾಂಗ್ರೆಸ್ ಅಂತಹ ಸಾಧನೆಯನ್ನೇನು ಮಾಡಿಲ್ಲ. ಆದರೆ, ಬಿಜೆಪಿಗೆ ಸರಿಸಮವಾಗಿ ಜೆಡಿಎಸ್ ಸ್ಥಾನಗಳಿಸಿತ್ತು. ಇದನ್ನು ಗಮನದಲ್ಲಿರಿಸಿಕೊಂಡೇ ಮೈತ್ರಿಗೆ ಶ್ರೀರಾಮುಲು ಮುಂದಾಗಿದ್ದಾರೆ. ಕುಮಾರಸ್ವಾಮಿಗೆ ಕೂಡ ಭಾರತೀಯ ಜನತಾ ಪಕ್ಷ ಮತ್ತು ಕಾಂಗ್ರೆಸ್ಸನ್ನು ಹಣಿದು ಹಾಕಲು ಇಂಥದೊಂದು ಮೈತ್ರಿಯ ಅವಶ್ಯಕತೆಯೂ ಇದೆ. ಇದಕ್ಕೆ ದೇವೇಗೌಡರ ಒಪ್ಪಿಗೆ ಇದೆಯಾ? ತಿಳಿದಿಲ್ಲ.
ಒಂದಾನೊಂದು ಕಾಲದಲ್ಲಿ ಹಾವು ಮುಂಗಸಿಯಂತೆ ಇದ್ದ ಶ್ರೀರಾಮುಲು ಮತ್ತು ಕುಮಾರಸ್ವಾಮಿ ಚುನಾವಣೆಗೆ ಸಂಬಂಧಿಸಿದಂತೆ ಮಾತುಕತೆ ನಡೆಸಿರುವುದು ಇದು ಮೊದಲೇನಲ್ಲ. ಹಿಂದೆ, ಕೊಪ್ಪಳ ಕ್ಷೇತ್ರದ ಉಪಚುನಾವಣೆ ಸಂದರ್ಭದಲ್ಲಿ ಕೂಡ ಅವರಿಬ್ಬರು ಗುಟ್ಟಾಗಿ ಒಪ್ಪಂದ ಮಾಡಿಕೊಳ್ಳಲು ಮುಂದಾಗಿದ್ದರು. ಆದರೆ, ದೇವೇಗೌಡರು ಆಗ ಅಡ್ಡಗಾಲು ಹಾಕಿದ್ದರು.. ಈಗ ಬಹಿರಂಗವಾಗಿ ಮೈತ್ರಿಗೆ ಶ್ರೀರಾಮುಲು ಮತ್ತು ಕುಮಾರಸ್ವಾಮಿ ಮುಂದಾಗಿದ್ದಾರೆ. ಇದು ನೈತಿಕ ಮೈತ್ರಿಯಾಗತ್ತಾ, ಅನೈತಿಕ ಮೈತ್ರಿಯಾಗತ್ತಾ ಎಂದು ಕಾಲವೇ ನಿರ್ಧರಿಸಲಿದೆ.
ರೇಣುವಂತೆ ಕಿಸ್ ಕೊಟ್ಟೋರೇ ಇಲ್ಲ : ಯಡಿಯೂರಪ್ಪನವರನ್ನು ನಂಬಿ ಬಿಜೆಪಿಯನ್ನು ತೊರೆದಿರುವ ಮಾಜಿ ಅಬಕಾರಿ ಸಚಿವ ರೇಣುಕಾಚಾರ್ಯ ಅವರಂಥ ಕಿಸ್ ಮಾಸ್ಟರನ್ನು ನಾನು ನೋಡೇ ಇಲ್ಲ ಎಂದು ಆನಂದ್ ಅಸ್ನೋಟಿಕರ್ ಅವರು ವ್ಯಂಗ್ಯವಾಡಿದ್ದಾರೆ. ಅಂಥವರ ಬಗ್ಗೆ ಹೆಚ್ಚು ಮಾತನಾಡುವ ಅವಶ್ಯಕತೆಯೇ ಇಲ್ಲ ಎಂದು ಹೇಳಿರುವ ಅವರು, ಈ ಬಾರಿ ಚುನಾವಣೆಯಲ್ಲಿ ಬಿಜೆಪಿ ಖಂಡಿತ ಬಹುಮತ ಗಳಿಸಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಕೆಜೆಪಿಗೆ ರೇಣುಕಾಚಾರ್ಯ ಅಧಿಕೃತ ಸೇರ್ಪಡೆ : ಹೊನ್ನಾಳಿ ಶಾಸಕ ರೇಣುಕಾಚಾರ್ಯ ಅವರು ಬೆಂಗಳೂರಿನಲ್ಲಿ ಶನಿವಾರ ಕರ್ನಾಟಕ ಜನತಾ ಪಕ್ಷಕ್ಕೆ ಅಧಿಕೃತವಾಗಿ ಸೇರ್ಪಡೆಯಾದರು. ರೇಣುಕಾಚಾರ್ಯ ಕೆಜೆಪಿ ಸೇರುವ ಬಗ್ಗೆ ಯಾವುದೇ ಮಾಹಿತಿ ಇಲ್ಲ ಯಡಿಯೂರಪ್ಪ ಹೇಳಿದ ಮರುದಿನವೇ ಅವರು ಕೆಜೆಪಿಗೆ ಸೇರ್ಪಡೆಯಾಗಿದ್ದಾರೆ. ರೇಣುಕಾಚಾರ್ಯ ಅವರನ್ನು ಕೆಜೆಪಿ ಸೇರಿಸಿಕೊಳ್ಳಬಾರದು ಎಂದು ಶೋಭಾ ಕರಂದ್ಲಾಜೆ ಅವರು ಯಡಿಯೂರಪ್ಪ ಅವರ ಕಿವಿಯೂದಿದ್ದಾರೆ ಎಂದು ಸುದ್ದಿಯಾಗಿದ್ದಕ್ಕೆ ವ್ಯತಿರಿಕ್ತವಾಗಿ ರೇಣುಕಾ ಕೆಜೆಪಿ ಸೇರಿದ್ದಾರೆ.
ಕಣಕ್ಕಿಳಿಯಲು ಭಟ್‌ಗೆ ಒತ್ತಾಯ : ಯುವತಿಯೊಂದಿಗೆ ರಾಸಲೀಲೆಯಾಡಿದ ವಿಡಿಯೋದಲ್ಲಿ ಕಾಣಿಸಿಕೊಂಡಿದ್ದಾರೆ ಎನ್ನಲಾದ ಉಡುಪಿ ಶಾಸಕ ರಘುಪತಿ ಭಟ್ ಅವರು ಈ ಕಳಂಕಕ್ಕೆ ಹಿಂಜರಿಯದೆ ಚುನಾವಣಾ ಕಣಕ್ಕೆ ಇಳಿಯಬೇಕು ಎಂದು ಅವರ ಬೆಂಬಲಿಗರು ಒತ್ತಾಯಿಸಿದ್ದಾರೆ. ರಾಸಲೀಲೆಯ ಸಿಡಿ ಸಾರ್ವಜನಿಕವಾಗಿ ಕಾಣಿಸಿಕೊಂಡ ನಂತರ ನೊಂದಿದ್ದ ರಘುಪತಿ ಭಟ್ ಅವರು ಇನ್ನು ಚುನಾವಣೆಯಲ್ಲಿ ಸ್ಪರ್ಧಿಸುವುದಿಲ್ಲ ಎಂದು ಹೇಳಿಕೆ ನೀಡಿದ್ದರು. ಆದರೆ, ಬೆಂಬಲಿಗರು ಒತ್ತಾಯಿಸಿದಾಗ ತೀವ್ರ ಭಾವುಕತೆಗೊಳಗಾದ ರಘುಪತಿ ಅವರು ಬೆಂಬಲಿಗರೆದಿರು ಕಣ್ಣೀರುಗರೆದರು.
ನೀವೇ ಆಗಿರಿ ಕರ್ನಾಟಕದ ಗುರು | ಮತ ಹಾಕ್ತೀನಂತ ಪ್ರಮಾಣ ಮಾಡಿ












Click it and Unblock the Notifications