ರಣಬಿಸಿಲು: ಕೊತಕೊತನೆ ಕುದಿಯುತ್ತಿದೆ ಬೆಂಗಳೂರು
ಬೆಂಗಳೂರು, ಮಾರ್ಚ್ 29: ರಾಜಧಾನಿ ನಿಜಕ್ಕೂ ಅಗ್ನಿಕುಂಡವಾಗಿ ಮಾರ್ಪಟ್ಟಿದೆ. ಕಳೆದ ಏಳೆಂಟು ವರ್ಷಗಳಲ್ಲಿ ಇಂಥಾ ಬಿಸಿಲು ಕಂಡೇ ಇರಲಿಲ್ಲ. ಇನ್ನೇನು ಮಾರ್ಚ್ ಮುಗಿಯುತ್ತಾ ಬಂತು; ಏಪ್ರಿಲ್ ತಿಂಗಳೂ ಹೀಗೇ ರಣಬಿಸಿಲು ಕಾಡಲಿದ್ದು, ಬೆಂಗಳೂರು ಕೊತಕೊತನೆ ಕುದಿಯಲಿದೆ. ಬೆಂಗಳೂರಿನಲ್ಲಿ ಈ ಹಿಂದೆ ಈ ಪಾಟಿ ಬಿಸಿಲು ಇರುತ್ತಿರಲಿಲ್ಲ. ಆದರೆ ಇತ್ತೀಚಿನ ದಿನಗಳಲ್ಲಿ ಸಾಕಪ್ಪಾ ಸಾಕು ಅನ್ನಿಸುವಂತಾಗಿದೆ ಬಿಸಿಲಿನ ಪ್ರತಾಪ.
ನಿನ್ನೆ ಗುರುವಾರ ಮಟಮಟ ಮಧ್ಯಾಹ್ನ 37 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗಿತ್ತು. ಈ ಪಾಟಿ ಬಿಸಿಲು 2005ರಲ್ಲಿ ಕಾಡಿತ್ತು. ಕಳೆದೆಂಟು ವರ್ಷದಲ್ಲಿ ಮಾರ್ಚ್ ತಿಂಗಳ ಇದೇ ದಿನ ಸರಾಸರಿ ತಾಪಮಾನ 36 ಡಿಗ್ರಿಯಷ್ಟಿತ್ತು. 1996ರಲ್ಲಿ ಮಾರ್ಚ್ ತಿಂಗಳ ಗರಿಷ್ಠ ತಾಮಪಾನ 37.3 ಡಿಗ್ರಿಯಿತ್ತು. ನೆರೆಯ ರಾಜ್ಯಗಳಲ್ಲೂ ತಾಮಪಾನ ಹೀಗೇ ಇದೆ. ಆಂಧ್ರ 43 ಡಿಗ್ರಿ ಸೆಲ್ಸಿಯಸ್ ಗೆ ತಲುಪಲಿದೆ.

ಸ್ವಲ್ಪ ಸಹಿಸಿಕೊಳ್ಳಿ. ಇದು ಇಷ್ಟಕ್ಕೇ ನಿಲ್ಲುವುದಿಲ್ಲ. ಈ ವಾರವಿಡೀ ಇದೇ ತಾಪಮಾನ ಹೀಗೇ ಮುಂದುವರಿಯಲಿದೆ. ಅದೇ ರಾತ್ರಿ ಸ್ವಲ್ಪ ತಂಪಾಗಲಿದ್ದು, 22 ಡಿಗ್ರಿ ಸೆಲ್ಸಿಯಸ್ ತಾಪಮಾನವಿರುತ್ತದೆ.
ಮುಂದಿನ ತಿಂಗಳು ಬಿಸಿಲಿನ ತಾಪ 40 ಡಿಗ್ರಿ ಸೆಲ್ಸಿಯಸ್ ತಲುಪಲಿದೆ. ಮೋಡ ಕಟ್ಟದಿರುವುದು ಮತ್ತು ಬಲವಾದ ಗಾಳಿ ಬೀಸದಿರುವುದು ಈ ವೈಪರೀತ್ಯಕ್ಕೆ ಕಾರಣವಾಗಿದೆ. ಬೇಸಿಗೆ ತುಸು ಬೇಗನೇ ಕಾಣಿಸಿಕೊಂಡಿರುವುದೂ ಶಾಖ ಹೆಚ್ಚಳಕ್ಕೆ ಹೇತುವಾಗಿದೆ. ಸಾಮಾನ್ಯವಾಗಿ ಬೆಂಗಳೂರಿನಲ್ಲಿ ಮೋಡ ಹೆಚ್ಚಾಗಿರುತ್ತದೆ ಮತ್ತು ಗಾಳಿ ಜೋರಾಗಿ ಬೀಸುತ್ತಿರುತ್ತದೆ.
ಯುಗಾದಿಗೆ ಮುನ್ನ ಅಷ್ಟೋ ಒಷ್ಟೋ ಮಳೆಯಾಗುತ್ತದೆ. ಆದರೆ ಅದರಿಂದ ಶಾಖ ಮತ್ತಷ್ಟು ಹೆಚ್ಚಾಗಲಿದೆಯಷ್ಟೇ. ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತವಾಗಿ ಮಳೆ ಬಂದರಷ್ಟೇ ಬೆಂಗಳೂರು ಜನ ಪ್ರಖರ ಬಿಸಿಲಿನ ಪ್ರಕೋಪದಿಂದ ಪಾರಾಗಬಲ್ಲರು.












Click it and Unblock the Notifications