ಸೋನಿಯಾ ಬಳಿ ಅಭ್ಯರ್ಥಿಗಳ ಪಟ್ಟಿ : ಯಾರಿಗೆ ಟಿಕೆಟ್

ಬುಧವಾರ ತಡರಾತ್ರಿಯವರೆಗೂ ನವದೆಹಲಿಯಲ್ಲಿ ನಡೆದ ಸಭೆಯಲ್ಲಿ, 224 ಕ್ಷೇತ್ರಗಳ ಅಭ್ಯರ್ಥಿಗಳ ಪಟ್ಟಿ ಅಂತಿಮಗೊಳಿಸಲಾಗಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ್ ಹೇಳಿದ್ದಾರೆ. ವಲಸಿಗರ ಸೇರ್ಪಡೆ ಕುರಿತಂತೆ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾಗಾಂಧಿ ಅವರ ನಿರ್ಧಾರವೇ ಅಂತಿಮ ಎಂದು ಸ್ಪಷ್ಟಪಡಿಸಿದ್ದಾರೆ.
ಕಾಂಗ್ರೆಸ್ ಸ್ಕ್ರೀನಿಂಗ್ ಕಮಿಟಿ ಅಧ್ಯಕ್ಷ ಲೂಸಿಯಾನೋ ಫೆಲೆರೋ ರಾಹುಲ್ ಗಾಂಧಿ ಅವರ ಆದೇಶದಂತೆ ಎಲ್ಲಾ ಅಭ್ಯರ್ಥಿಗಳ ಕುರಿತು ಪರಿಶೀಲನೆ ನಡೆಸಿ, ಪಟ್ಟಿ ಅಂತಿಮಗೊಳಿಸಿದ್ದಾರೆ. ಹಾಲಿ ಶಾಸಕರು, ಹಿರಿಯ ನಾಯಕರು, ಒಬ್ಬರೇ ಟಿಕೆಟ್ ಆಕಾಂಕ್ಷಿಗಳಾಗಿರುವ ಕ್ಷೇತ್ರಗಳ 100 ಅಭ್ಯರ್ಥಿಗಳ ಮೊದಲ ಪಟ್ಟಿ.
ವಲಸೆ ಬಂದವರು, ಹೆಚ್ಚು ಆಕಾಂಕ್ಷಿಗಳಿರುವ ನಾಯಕರ ವಿವರ ಒಳಗೊಂಡ ಉಳಿದ ಕ್ಷೇತ್ರಗಳ ಅಭ್ಯರ್ಥಿಗಳ ಪಟ್ಟಿ ಎಂದು ಎರಡು ಪಟ್ಟಿಗಳನ್ನು ತಯಾರಿಸಲಾಗಿದೆ ಎಂದು ಪಕ್ಷದ ಮೂಲಗಳು ಹೇಳಿವೆ. ಇಂದು ಸೋನಿಯಾಗಾಂಧಿ ಅಧ್ಯಕ್ಷತೆಯಲ್ಲಿ ಕೇಂದ್ರ ಚುನಾವಣಾ ಸಮಿತಿ ಸಭೆ ನಡೆಯಲಿದ್ದು, ಪಟ್ಟಿಗೆ ಅಂತಿಮ ಮುದ್ರೆ ಬೀಳುವ ಸಾಧ್ಯತೆ ಇದೆ.
ರಾಜ್ಯ ನಾಯಕರೊಂದಿಗೆ ಸಭೆ : ಗುರುವಾರ ಬೆಳಗ್ಗೆ 10.45ಕ್ಕೆ ರಾಜ್ಯ ನಾಯಕರೊಂದಿಗೆ ಸಭೆ ನಡೆಸಲು ಸೋನಿಯಾಗಾಂಧಿ ಸಮಯಾವಕಾಶ ನೀಡಿದ್ದಾರೆ. ಚುನಾವಣಾ ಸಿದ್ದತೆ, ಪ್ರಚಾರ ತಂತ್ರಗಳ ಕುರಿತು ಸೋನಿಯಾ ರಾಜ್ಯ ನಾಯಕರೊಂದಿಗೆ ಸಮಾಲೋಚನೆ ನಡೆಸಲಿದ್ದಾರೆ. ಪರಮೇಶ್ವರ್, ವಿಪಕ್ಷ ನಾಯಕ ಸಿದ್ದರಾಮಯ್ಯ, ಕೇಂದ್ರ ಸಚಿವರು ಪಾಲ್ಗೊಳ್ಳುವ ನಿರೀಕ್ಷೆ ಇದೆ.
ಇಂದು ಸಂಜೆ ಕಾಂಗ್ರೆಸ್ ಕೇಂದ್ರ ಚುನಾವಣಾ ಸಮಿತಿ ಸಭೆ ನಡೆಯಲಿದ್ದು, ಅಭ್ಯರ್ಥಿಗಳ ಪಟ್ಟಿ ಅಂತಿಮಗೊಳ್ಳುವ ಸಂಭವವಿದೆ. ಸ್ಕ್ರೀನಿಂಗ್ ಕಮಿಟಿ ಅಧ್ಯಕ್ಷ ಲೂಸಿಯಾನೋ ಫೆಲೆರೋ, ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ, ಕೆಪಿಸಿಸಿ ಅಧ್ಯಕ್ಷ ಪರಮೇಶ್ವರ್, ಸಿದ್ದರಾಮಯ್ಯ ಮುಂತಾದವರು ಭಾಗವಹಿಸಲಿದ್ದಾರೆ.
ವಲಸಿಗರ ನಿರ್ಧಾರ :ನಾಲ್ವರು ವಲಸಿಗರ ಸೇರ್ಪಡೆಗೆ ಕಾಂಗ್ರೆಸ್ ಈಗಾಗಲೇ ಸಮ್ಮತಿ ಸೂಚಿಸಿದೆ. ಉಳಿದ ವಲಸಿಗರ ಸೇರ್ಪಡೆ ಬಗ್ಗೆ ಇಂದು ಅಂತಿಮ ನಿರ್ಧಾರ ಹೊರಬೀಳಲಿದೆ. ವಲಸಿಗರ ನಿರ್ಧಾರ, ಅಭ್ಯರ್ಥಿಗಳ ಪಟ್ಟಿ ಅಂತಿಮ ಮುಂತಾದ ಬೆಳವಣಿಗೆಗಳಿಂದಾಗಿ ಇಂದು ಕಾಂಗ್ರೆಸ್ ಲ್ಲಿ ಮಹತ್ವದ ನಿರ್ಧಾರಗಳು ಪ್ರಕಗೊಳ್ಳುವ ಸಂಭವವಿದೆ.
ನೀವೇ ಆಗಿರಿ ಕರ್ನಾಟಕದ ಗುರು | ಮತ ಹಾಕ್ತೀನಂತ ಪ್ರಮಾಣ ಮಾಡಿ












Click it and Unblock the Notifications