ಚುನಾವಣೆ: 10 ಲಕ್ಷಕ್ಕಿಂತ ಹೆಚ್ಚು ಹಣ ಡ್ರಾ ಮಾಡಿದ್ರೆ..
ಬೆಂಗಳೂರು, ಮಾ 27: ಚುನಾವಣಾ ನೀತಿ ಸಂಹಿತೆ ಜಾರಿಯಾದ ಹಿನ್ನಲೆಯಲ್ಲಿ ಚುನಾವಣಾ ಆಯೋಗ ರಾಜಕೀಯ ಪಕ್ಷಗಳ ಚಲನವಲನದ ಬಗ್ಗೆ ತೀವ್ರ ನಿಗಾ ಇಟ್ಟಿದೆ. ಈ ಸಂಬಂಧ ಅಕ್ರಮ ಹಣ ಚಲಾವಣೆ ಆಗುವುದನ್ನು ತಡೆ ಹಿಡಿಯಲು ಹತ್ತು ಲಕ್ಷಕ್ಕಿಂತ ಹೆಚ್ಚಿನ ಹಣ ಬ್ಯಾಂಕಿನಿಂದ ಡ್ರಾ ಮಾಡುವ ಗ್ರಾಹಕರ ಬಗ್ಗೆ ಮಾಹಿತಿ ನೀಡಲು ಆಯಾಯ ಬ್ಯಾಂಕಿನ ಪ್ರಭಂದಕರಿಗೆ ಆಯೋಗ ಆದೇಶ ನೀಡಿದೆ.
ಹತ್ತು ಲಕ್ಷಕ್ಕಿಂತ ಹೆಚ್ಚಿನ ಹಣ ಡ್ರಾ ಮಾಡುವ ಗ್ರಾಹಕರ ಮಾಹಿತಿಗಳನ್ನು ಸಂಬಂಧಪಟ್ಟ ಬ್ಯಾಂಕಿನ ಮ್ಯಾನೇಜರ್ ಗಳು ಡೆಪ್ಯುಟಿ ಪೋಲೀಸ್ ಕಮೀಷನರಿಗೆ ನೀಡಲು ಸೂಚಿಸಲಾಗಿದ್ದು, ಬ್ಯಾಂಕಿನಿಂದ ಬರುವ ಮಾಹಿತಿಯನ್ನು ಪೋಲೀಸ್ ಕಮೀಷನರ್ ಚುನಾವಣಾ ಆಯೋಗಕ್ಕೆ ನೀಡುತ್ತಾರೆ ಎಂದು ಚುನಾವಣಾ ಆಯೋಗದ ವಿಶೇಷ ಕರ್ತವ್ಯಾಧಿಕಾರಿ ಪಂಕಜ್ ಕುಮಾರ್ ಪಾಂಡೆ ಹೇಳಿದ್ದಾರೆ.
ರಾಜ್ಯದ ಒಟ್ಟು 224 ಕ್ಷೇತ್ರಗಳ ಪೈಕಿ 54 ಕ್ಷೇತ್ರಗಳ ಮೇಲೆ ಹೆಚ್ಚಿನ ನಿಗಾ ವಹಿಸಲು ಆಯೋಗ ಸೂಚಿಸಿದೆ. ಈ ಕ್ಷೇತ್ರಗಳಲ್ಲಿ ಅಕ್ರಮ ಹಣದ ಹೊಳೆ ಹರಿಯಲಿದೆ ಎನ್ನುವ ಗುಪ್ತಚರ ಇಲಾಖೆಯ ವರದಿಯನ್ನು ಆದರಿಸಿ ಆಯೋಗ ಈ ಆದೇಶ ನೀಡಿದೆ.
ಆದಾಯ ತೆರಿಗೆ, ಅಬಕಾರಿ ಇಲಾಖೆ ಮತ್ತು ಕಸ್ಟಂಸ್ ಇಲಾಖೆಗೆ ಕೂಡಾ ಚುನಾವಣಾ ಅಕ್ರಮ ಕಂಡುಬಂದರೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವಂತೆ ಸ್ಪಷ್ಟ ಸೂಚನೆ ನೀಡಲಾಗಿದೆ ಎಂದು ಪಾಂಡೆ ತಿಳಿಸಿದ್ದಾರೆ.
ಆಯೋಗ ಗುರುತಿಸಿರುವ ಐದು ಸೂಕ್ಷ್ಮ ಜಿಲ್ಲೆಗಳಾವುವು?

ರಾಮನಗರ
ರಾಮನಗರ ಜಿಲ್ಲೆಯ ನಾಲ್ಕೂ ವಿಧಾನಸಭಾ ಕ್ಷೇತ್ರಗಳನ್ನು (ಕನಕಪುರ, ಮಾಗಡಿ, ಚನ್ನಪಟ್ಟಣ ಮತ್ತು ರಾಮನಗರ) ಸೂಕ್ಷ್ಮ ಕ್ಷೇತ್ರವೆಂದು ಗುರುತಿಸಲಾಗಿದೆ.

ಬಳ್ಳಾರಿ
ಬಳ್ಳಾರಿ ನಗರ, ಬಳ್ಳಾರಿ ಗ್ರಾಮಾಂತರ, ಕಂಪ್ಲಿ, ಕೂಡ್ಲಿಗಿ ಸೂಕ್ಷ್ಮ ಕ್ಷೇತ್ರವೆಂದು ಗುರುತಿಸಲಾಗಿದೆ.

ಬೆಂಗಳೂರು ಗ್ರಾಮಾಂತರ
ಬೆಂಗಳೂರು ಗ್ರಾಮಾಂತರ ವ್ಯಾಪ್ತಿಯ ಹೊಸಕೋಟೆ ಮತ್ತು ನೆಲಮಂಗಲ ವಿಧಾನಸಭಾ ಕ್ಷೇತ್ರಗಳನ್ನು ಸೂಕ್ಷ್ಮ ಕ್ಷೇತ್ರವೆಂದು ಆಯೋಗ ಗುರುತಿಸಿದೆ.

ಬೆಂಗಳೂರು ನಗರ
ಬೆಂಗಳೂರು ನಗರದ ಬೊಮ್ಮನಹಳ್ಳಿ, ರಾಜರಾಜೇಶ್ವರಿ ನಗರ, ಕೆ ಆರ್ ಪುರಂ, ದಾಸರಹಳ್ಳಿ ಕ್ಷೇತ್ರಗಳು.

ಶಿವಮೊಗ್ಗ
ಶಿವಮೊಗ್ಗ ನಗರ, ಶಿವಮೊಗ್ಗ ಗ್ರಾಮೀಣ, ಶಿಕಾರಿಪುರ, ಸೊರಬ ಮತ್ತು ಸಾಗರ ಸೂಕ್ಷ್ಮ ಕ್ಷೇತ್ರಗಳು.












Click it and Unblock the Notifications