ಚುನಾವಣೆಗೆ ಕೈಪಾಳಯದ ರಹಸ್ಯ ಕಾರ್ಯತಂತ್ರ

ಚುನಾವಣಾ ಪರಿಶೀಲನಾ ಸಮಿತಿ ಅಧ್ಯಕ್ಷ ಲೂಸಿಯಾನೋ ಫೆಲೆರೋ ಅಧ್ಯಕ್ಷತೆಯಲ್ಲಿ ಮಂಗಳವಾರ ನಡೆದ ಸ್ಕ್ರೀನಿಂಗ್ ಕಮಿಟಿ ಸಭೆಯಲ್ಲಿ ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ್ ಮತ್ತು ವಿಪಕ್ಷ ನಾಯಕ ಸಿದ್ದರಾಮಯ್ಯ ಮುಂತಾದವರು ಪಾಲ್ಗೊಂಡಿದ್ದರು. ಅಭ್ಯರ್ಥಿಗಳ ಆಯ್ಕೆ ಕುರಿತು ಅನುಸರಿಸಬೇಕಾದ ಕಾರ್ಯತಂತ್ರಗಳ ಕುರಿತು ಮಂಗಳವಾರ ಮಹತ್ವದ ಚರ್ಚೆ ನಡೆಸಲಾಗಿದೆ ಎಂದು ಪಕ್ಷದ ಮೂಲಗಳು ತಿಳಿಸಿವೆ.
ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಗಳ ಸಂಖ್ಯೆ ಹೆಚ್ಚಾಗಿದೆ. ಟಿಕೆಟ್ ಬಯಸಿದ ಅಭ್ಯರ್ಥಿಗಳು ದೆಹಲಿಯಲ್ಲೇ ವಾಸ್ತವ್ಯ ಹೂಡಿದ್ದಾರೆ. ಸ್ಕ್ರೀನಿಂಗ್ ಕಮಿಟಿ ಸಭೆಯನ್ನು ದೆಹಲಿ ಹೊರವಲಯದ ಅಜ್ಞಾತ ಸ್ಥಳದಲ್ಲಿ ನಡೆಸಲಾಗುತ್ತಿದೆ. ಸಭೆಯಲ್ಲಿ ಅಂತಿಮಗೊಳಿಸಿದ ಪಟ್ಟಿಯನ್ನು ಕೇಂದ್ರ ಚುನಾವಣಾ ಸಮಿತಿಯ ಮಾ.30ರ ಸಭೆ ಬಳಿಕ ಅಂತಿಮಗೊಳಿಸಲಾಗುತ್ತದೆ ಎಂದು ತಿಳಿದುಬಂದಿದೆ.
ವಲಸಿಗರ ಸೇರ್ಪಡೆ, ಕ್ರಿಮಿನಲ್ ಹಿನ್ನೆಲೆವುಳ್ಳ ಅಭ್ಯರ್ಥಿಗಳಿಗೆ ಟಿಕೆಟ್ ನೀಡಿಕೆ, ಸಂಸದರಿಗೆ ವಿಧಾನಸಭೆ ಟಿಕೆಟ್ ನೀಡಿಕೆ ಮುಂತಾದ ವಿಚಾರಗಳ ಬಗ್ಗೆ ಮಂಗಳವಾರ ಚರ್ಚೆ ನಡೆಸಲಾಗಿದೆ. ಬುಧವಾರವೂ ಸಭೆ ಮುಂದುವರೆಯಲಿದ್ದು, ಸೋನಿಯಾಗಾಂಧಿ ಅಧ್ಯಕ್ಷತೆಯಲ್ಲಿ ನಡೆಯುವ ಸಭೆಯಲ್ಲಿ ಅಭ್ಯರ್ಥಿಗಳ ಪಟ್ಟಿ ಅಂತಿಮಗೊಳಿಸಲು ನಿರ್ಣಯ ತೆಗೆದುಕೊಳ್ಳಲಾಗಿದೆ.
ಸ್ಟಾರ್ ಪ್ರಚಾರಕರು : ಬಿಜೆಪಿ ಸರ್ಕಾರದ ಆಡಳಿತ ವಿರೋಧಿ ಅಲೆ ಬಳಸಿಕೊಂಡು ಅಧಿಕಾರ ಪಡೆಯುವ ಉತ್ಸಾಹದಲ್ಲಿರುವ ಕಾಂಗ್ರೆಸ್ ರಾಜ್ಯದಲ್ಲಿ ಚುನಾವಣೆ ಪ್ರಚಾರಕ್ಕೆ ಸ್ಟಾರ್ ಪ್ರಚಾರಕರನ್ನು ಕರೆತರಲು ನಿರ್ಧರಿಸಲಾಗಿದೆ. ರಕ್ಷಣಾ ಸಚಿವ ಎ.ಕೆ.ಆಂಟನಿ ನೇತೃತ್ವದ ಸಮನ್ವಯ ಸಮಿತಿ ಸಭೆಯಲ್ಲಿ ಪ್ರಚಾರಕರ ಪಟ್ಟಿ ಸಿದ್ಧಪಡಿಸಲಾಗಿದೆ.
ವಿಧಾನಸಭೆ ಚುನಾವಣೆ ಮುಗಿದ ಬಳಿಕ ಲೋಕಸಭೆ ಚುನಾವಣೆಯೂ ಎದುರಾಗುವುದರಿಂದ ಪ್ರಚಾರ ಕಾರ್ಯಕ್ಕೆ ಹೆಚ್ಚಿನ ಮಹತ್ವ ನೀಡಲಾಗಿದೆ. ಸೋನಿಯಾಗಾಂಧಿ, ರಾಹುಲ್ ಗಾಂಧಿ, ಪ್ರಧಾನಿ ಮನಮೋಹನ್ ಸಿಂಗ್, ಗುಲಾಂ ನಬಿ ಅಜಾದ್, ಸಲ್ಮಾನ್ ಖುರ್ಷಿದ್ ಸ್ಟಾರ್ ಪ್ರಚಾರಕರಾಗಿ ರಾಜ್ಯಕ್ಕೆ ಆಗಮಿಸಲಿದ್ದಾರೆ.
ರಾಹುಲ್ ಬಳಿ ಸಮೀಕ್ಷಾ ವರದಿ : ರಾಜ್ಯದಲ್ಲಿ ಇದುವರೆಗೂ ಚುನಾವಣಾ ಸೋಲು-ಗೆಲುವಿನ ಕುರಿತು ವಿವಿಧ ಸಂಸ್ಥೆಗಳು ಮಾಡಿದ ಸಮೀಕ್ಷಾ ವರದಿ ಇಟ್ಟುಕೊಂಡಿರುವ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ, ವಿವರವಾದ ಅಧ್ಯಯನ ನಡೆಸುತ್ತಿದ್ದಾರೆ. ಪರಮೇಶ್ವರ್ ಮತ್ತು ಸಿದ್ದರಾಮಯ್ಯ ಅವರ ಜೊತೆ ಚುನಾವಣೆ ಕಾರ್ಯತಂತ್ರದ ಕುರಿತು ವಿವರವಾದ ಮಾತುಕತೆ ನಡೆಸಿದ್ದಾರೆ.
ರಾಜ್ಯದ ಕಾಂಗ್ರೆಸ್ ನ ಪ್ರಮುಖ ನಾಯಕರು ದೆಹಲಿಯಲ್ಲಿಯೇ ವಾಸ್ತವ್ಯ ಹೂಡಿದ್ದು, ನಿರಂತರವಾಗಿ ಸಭೆಗಳನ್ನು ನಡೆಸುವ ಮೂಲಕ ಚುನಾವಣಾ ತಂತ್ರ ರೂಪಿಸುತ್ತಿದ್ದಾರೆ. ಅಭ್ಯರ್ಥಿಗಳ ಪಟ್ಟಿ ಅಂತಿಮಗೊಂಡರೆ ಮುಂದಿನ ಸಿದ್ದತೆಗಳ ಬಗ್ಗೆ ರೂಪುರೇಷೆ ತಯಾರಿಸಲು ನಿರ್ಧರಿಸರಿದ್ದಾರೆ ಎಂದು ತಿಳಿದು ಬಂದಿದೆ.
ನೀವೇ ಆಗಿರಿ ಕರ್ನಾಟಕದ ಗುರು | ಮತ ಹಾಕ್ತೀನಂತ ಪ್ರಮಾಣ ಮಾಡಿ












Click it and Unblock the Notifications