ತೆಂಗಿನಕಾಯಿಯೊಳಗೆ ಬ್ರಹ್ಮ ರಾಕ್ಷಸನಿದ್ದಾನೆ : ಪ್ರಹ್ಲಾದ್ ಜೋಷಿ

ಶಿವಮೊಗ್ಗದ ಎನ್ಇಎಸ್ ಮೈದಾನದಲ್ಲಿ ಬಿಜೆಪಿಯ ವಿಜಯ ಸಂಕಲ್ಪ ಸಮಾವೇಶ ಉದ್ಘಾಟಿಸಿ ಮಾತನಾಡಿದ ಪ್ರಹ್ಲಾದ್ ಜೋಷಿ, ಯಡಿಯೂರಪ್ಪ ಅವರ ಬಿಜೆಪಿ ಮುಳುಗುವ ಹಡಗು ಎಂಬ ಹೇಳಿಕೆಯನ್ನು ಖಂಡಿಸಿದರು. ಸಿಬಿಐ ಭೀತಿಯಿಂದಾಗಿ ಹಡಗಿಗೆ ಕನ್ನ ಕೊರೆದು ಓಡಿಹೋಗಿರುವುದು ಸ್ವತಃ ಯಡಿಯೂರಪ್ಪ ಎಂದು ವ್ಯಂಗ್ಯವಾಡಿದರು.
ಕಾಂಗ್ರೆಸ್ ನೊಂದಿಗೆ ಹೊಂದಾಣಿಕೆ ಮಾಡಿಕೊಂಡಿರುವ ಕೆಜೆಪಿ ಪಕ್ಷಕ್ಕೆ ಜನರು ಮತ ನೀಡಬಾರದು ಎಂದು ಮನವಿ ಮಾಡಿದ ಅವರು, ತೆಂಗಿನಕಾಯಿ ಗುರುತಿಗೆ ಮತ ನೀಡಿದರೆ ಅದರೊಳಗಿರುವ ಬ್ರಹ್ಮ ರಾಕ್ಷಸ ಹೊರಬಂದು ನಿಮ್ಮನ್ನು ನಾಶ ಮಾಡುತ್ತಾನೆ ಎಂದು ಹೇಳಿದರು.
ಕೆಜೆಪಿ ಪಕ್ಷಕ್ಕೆ ದೀರ್ಘವಾದ ಭವಿಷ್ಯವಿಲ್ಲ ಎಂದ ಅವರು, ಹಾವೇರಿಯಲ್ಲಿ ಆರಂಭವಾದ ಕೆಜೆಪಿ ಚುನಾವಣೆಯ ನಂತರ ಶಿಕಾರಿಪುರದಲ್ಲಿ ಅಂತ್ಯಗೊಳ್ಳಲಿದೆ ಎಂದು ಭವಿಷ್ಯ ನುಡಿದರು. ಬಿಜೆಪಿಯಲ್ಲಿದ್ದು, ಅಧಿಕಾರ ಅನುಭವಿಸಿದ ಯಡಿಯೂರಪ್ಪ ಈಗ ಅದೇ ಪಕ್ಷವನ್ನು ಟೀಕಿಸುತ್ತಿದ್ದಾರೆ. ಅವರಿಗೆ ಸ್ಪಲ್ಪವೂ ನೈತಿಕತೆ ಇಲ್ಲ ಎಂದು ಆರೋಪಿಸಿದರು.
ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಮಾತನಾಡಿ, ಸರ್ಕಾರ ಬೀಳಿಸುವ ವಿಫಲಯತ್ನದ ನಂತರ ಪ್ರತ್ಯೇಕ ಪಕ್ಷ ಕಟ್ಟಿದ ಯಡಿಯೂರಪ್ಪ ಪದೇ ಪದೇ ಬಿಜೆಪಿ ನಾಯಕರು ನನ್ನ ಬೆನ್ನಿಗೆ ಚೂರಿ ಹಾಕಿದರು ಎಂದು ಹೇಳಿಕೆ ನೀಡುತ್ತಿದ್ದಾರೆ. ನಾನು ಅವರ ಬೆನ್ನು ಒಮ್ಮೆ ನೋಡಿ ಎಷ್ಟು ಜನ ಚೂರಿ ಹಾಕಿದ್ದಾರೆ ಎಂದು ನೋಡಬೇಕು ಎಂದು ಕುಹಕವಾಡಿದರು.
ಯಡಿಯೂರಪ್ಪ ತಾವು ಮಾಡಿದ ಅಪರಾಧದಿಂದಾಗಿ ಜೈಲಿಗೆ ಹೋದರು, ಅವರು ಅಧಿಕಾರದಿಂದ ಕೆಳಗಿಳಿಯಲು ಬಿಜೆಪಿ ನಾಯಕರು ಕಾರಣರಲ್ಲ ಎಂದು ಸ್ಪಷ್ಟಪಡಿಸಿದರು. ರಾಜ್ಯ ಬಿಜೆಪಿ ಸರ್ಕಾರ ಐದು ವರ್ಷಗಳಲ್ಲಿ ಅನೇಕ ಸಾಧನೆ ಮಾಡಿದೆ. ಪಕ್ಷದ ಸಾಧನೆಯನ್ನು ಗಮನಿಸಿ ಮುಂದಿನ ಚುನಾವಣೆಯಲ್ಲಿ ಬಿಜೆಪಿಗೆ ಮತ ನೀಡುವಂತೆ ಅವರು ಮನವಿ ಮಾಡಿದರು.
ಬಿಜೆಪಿ ಶಕ್ತಿ ಪ್ರದರ್ಶನ : ಕೆಜೆಪಿ ಮತ್ತು ಬಿಜೆಪಿ ಎಂದು ಪಕ್ಷಗಳು ವಿಭಜನೆ ಆದ ನಂತರ ಮೊದಲ ಬಾರಿಗೆ ಜಿಲ್ಲಾ ಬಿಜೆಪಿ ಯಡಿಯೂರಪ್ಪ ವಿರುದ್ಧ ಬೃಹತ್ ಶಕ್ತಿ ಪ್ರದರ್ಶನ ನಡೆಸಿದೆ. ಮುಖ್ಯಮಂತ್ರಿ ಜಗದೀಶ್ ಶೆಟ್ಟರ್, ಬಿಜೆಪಿ ಅಧ್ಯಕ್ಷ ಪ್ರಹ್ಲಾದ್ ಜೋಷಿ, ಉಪ ಮುಖ್ಯಮಂತ್ರಿ ಕೆ.ಎಸ್.ಈಶ್ವರಪ್ಪ, ಬಿಜೆಪಿ ಪ್ರಧಾನ ಕಾರ್ಯದರ್ಶಿ ಅನಂತ ಕುಮಾರ್ ಮುಂತಾದವರು ಒಗ್ಗಟ್ಟಾಗಿ ಪಕ್ಷಕ್ಕೆ ಮತ ನೀಡುವಂತೆ ಮನವಿ ಮಾಡಿದರು.
ಜಿಲ್ಲಾ ಚುನಾವಣಾ ಕಣ ರಂಗೇರುತ್ತಿದ್ದು, ಯಡಿಯೂರಪ್ಪ ಮತ್ತು ಈಶ್ವರಪ್ಪ ಅವರ ನಡುವಿನ ವೈಯಕ್ತಿಯ ಪ್ರತಿಷ್ಠೆಗಳು ಜಿಲ್ಲೆಯ ಚುನಾವಣಾ ಕಾವನ್ನು ಇನ್ನಷ್ಟು ಹೆಚ್ಚಿಸಿದೆ. ನಾಯಕರ ವಾಗ್ದಾಳಿಗಳು ಮುಂದುವರೆದಿದ್ದು, ಜನರ ಒಲವು ಯಾರ ಕಡೆ ಇದೆ ಎಂಬುದು ತೀವ್ರ ಕುತೂಹಲ ಮೂಡಿಸಿದೆ.
ನೀವೇ ಆಗಿರಿ ಕರ್ನಾಟಕದ ಗುರು | ಮತ ಹಾಕ್ತೀನಂತ ಪ್ರಮಾಣ ಮಾಡಿ












Click it and Unblock the Notifications