ಕೊಪ್ಪಳ: ಮನುಷ್ಯನ ಕಚ್ಚಿದ ನಾಯಿ ಸತ್ತೇ ಹೋಯಿತು!

ತಾಲೂಕಿನ ತಿಗರಿ ಗ್ರಾಮದ ಮಧ್ಯ ವಯಸ್ಕ ದೇವಪ್ಪ ನಾಗರಾಳ ಹೊಲದಲ್ಲಿ ಕೆಲಸ ಮಾಡಲು ಹೊರಟಿದ್ದಾಗ ಆತನ ಕಾಲಿಗೆ ನಾಯಿ ಕಚ್ಚಿದೆ. ಆತನ ದುರಾದೃಷ್ಟವೆಂಬಂತೆ ಆ ನಾಯಿ ತಕ್ಷಣವೇ ಸತ್ತು ಹೋಗಿದೆ. ಇದರಿಂದ ಕೊಪ್ಪಳ ತಾಲೂಕಿನ ಗ್ರಾಮಸ್ಥರು ಆತಂಕಗೊಂಡಿರುವುದಷ್ಟೇ ಅಲ್ಲ, ಇಡೀ ವೈದ್ಯಲೋಕ ಆತಂಕದಿಂದ ದೇವಪ್ಪ ನಾಗರಾಳ ಅವರನ್ನೇ ದುರಗುಟ್ಟಿಕೊಂಡು ನೋಡುತ್ತಿದೆ.
'ನಾಯಿಯೊಂದು ತನ್ನನ್ನು ಕಚ್ಚಿದೆ. ಆದರೆ ಆ ನಾಯಿ ತಕ್ಷಣ ಸತ್ತುಹೋಗಿದೆ' ಎಂದು ದೇವಪ್ಪ, ಬೆಟಗೇರಿ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ತೆರಳಿ ನಡೆದ ಘಟನೆಯನ್ನು ವೈದ್ಯರಿಗೆ ತಿಳಿಸಿದ್ದಾನೆ. ಇದರಿಂದ ಚಿಂತೆಗೀಡಾದ ಅಲ್ಲಿನ ವೈದ್ಯರು ಒಂದಷ್ಟು ಪ್ರಾಥಮಿಕ ಚಿಕಿತ್ಸೆ ನೀಡಿ, ಮುಂಜಾಗ್ರತಾ ಕ್ರಮವಾಗಿ ಆತನನ್ನು ಬೆಂಗಳೂರಿಗೆ ಕಳುಹಿಸಿಕೊಟ್ಟಿದ್ದಾರೆ.
'ನಾಯಿ ಕಡಿದ ದೇವಪ್ಪನಿಗೆ ರೇಬಿಫೋರ್ ಹಾಗೂ ಟಿಟಿ ಇಂಜೆಕ್ಷನ್ ನೀಡಲಾಗಿದೆ. ನಾಯಿಯೇ ಸತ್ತಿದ್ದರಿಂದ ಮುಂಜಾಗ್ರತಾ ಕ್ರಮವಾಗಿ ಅವರನ್ನು ಬೆಂಗಳೂರಿನ ನಿಮ್ಹಾನ್ಸ್ ಆಸ್ಪತ್ರೆಗೆ ಕಳುಹಿಸಿ ಕೊಡಲಾಗಿದೆ' ಎಂದು ತಾಲೂಕು ವೈದ್ಯಾಧಿಕಾರಿ ಹಾಗೂ ಬೇಟಗೇರಿ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ. ದಾನ ರೆಡ್ಡಿ ತಿಳಿಸಿದ್ದಾರೆ.
'ರೇಬಿಫೋರ್ ಇಂಜೆಕ್ಷನ್‌ನ ಪರಿಣಾಮ ಒಂದು ವಾರದ ನಂತರ ಗೊತ್ತಾಗುತ್ತದೆ. ತಕ್ಷಣವೇ ಅರಿಯಬೇಕು ಎಂದರೆ ಆ್ಯಂಟಿ ರೇಬಿ ಸಿರಮ್ ಇಂಜೆಕ್ಷನ್ ಕೊಡಬೇಕು. ಅದು ಬೆಂಗಳೂರಿನ NIMHANS ಬಿಟ್ಟರೆ ಬೇರೆಲ್ಲೂ ಸಿಗೊಲ್ಲ. ಹಾಗಾಗಿ ಅವರನ್ನು ತಕ್ಷಣ ಬೆಂಗಳೂರಿಗೆ ಕಳುಹಿಸಲಾಗಿದೆ' ಎಂದು ಡಾ. ದಾನ ರೆಡ್ಡಿ ಹೇಳಿದ್ದಾರೆ.
ವೈದ್ಯರ ಈ ಮಾತುಗಳನ್ನು ಕೇಳಿದ ದೇವಪ್ಪ ನಾಗರಾಳ ಮತ್ತು ಆತನ ಕುಟುಂಬ ಮತ್ತಷ್ಟು ಗಾಬರಿಗೊಂಡಿದೆ. ಬೆಂಗಳೂರಿನ NIMHANSಗೆ ದಾಖಲಾಗಿರುವ ದೇವಪ್ಪನ ರಕ್ತವನ್ನು ಭಾನುವಾರವೇ ಪರೀಕ್ಷೆಗೊಳಪಡಿಸಲಾಗಿದೆ. ಸೋಮವಾರ ಪರೀಕ್ಷಾ ವರದಿ ಬರಲಿದೆ. ಏನಾಗುತ್ತದೋ ಎಂದು ದೇವಪ್ಪನ ಸಹೋದರ ಹೇಮರಡ್ಡಿ ಆತಂಗೊಂಡಿದ್ದಾರೆ.
ನೀವೇ ಆಗಿರಿ ಕರ್ನಾಟಕದ ಗುರು | ಮತ ಹಾಕ್ತೀನಂತ ಪ್ರಮಾಣ ಮಾಡಿ












Click it and Unblock the Notifications