ಪಕ್ಷ ನಿಭಾಯಿಸೋದು ಕಷ್ಟಕಷ್ಟ: 16ರ CP ಸೋನಿಯಾ
ನವದೆಹಲಿ, ಮಾ.15: 'ಕಾಂಗ್ರೆಸ್ ಪಕ್ಷವನ್ನು ನಿಭಾಯಿಸೋದು ನೀವು ಅಂದುಕೊಳ್ಳುವಷ್ಟು ಸುಲಭವಲ್ಲಾ ಕಣ್ರೀ' ಎಂದು ಮೇಡಂ ಸೋನಿಯಾ ಗಾಂಧಿ ಅವರು ಹೇಳಿದ್ದಾರೆ.
127 ವರ್ಷಗಳ ಸುದೀರ್ಘ ಇತಿಹಾಸವಿರುವ ಕಾಂಗ್ರೆಸ್ ಪಕ್ಷದ ಅಧ್ಯಕ್ಷರಾಗಿ ಮೊನ್ನೆ 16ನೇ ವಸಂತಕ್ಕೆ ಕಾಲಿಟ್ಟ ಸಂರ್ಭದಲ್ಲಿ Congress President ಸೋನಿಯಾ ಗಾಂಧಿ ಅವರು ತಮ್ಮ ಮನದಾಳದ ಮಾತನ್ನು ಬಿಚ್ಚಿಟ್ಟಿದ್ದಾರೆ. ಅಂದಹಾಗೆ, ಅತಿ ಹೆಚ್ಚು ದೀರ್ಘಾವಧಿಗೆ ಪಕ್ಷದ ಅಧ್ಯಕ್ಷೆಯಾಗಿ ಸೇವೆ ಸಲ್ಲಿಸುತ್ತಿರುವ ದಾಖಲೆ ಇದೀಗ ಸೋನಿಯಾ ಗಾಂಧಿ ಅವರದ್ದಾಗಿದೆ.
1998ರ ಮಾರ್ಚ್‌ನಲ್ಲಿ ಲೋಕಸಭೆ ಚುನಾವಣೆ ಬಳಿಕ ಸೀತಾರಾಂ ಕೇಸರಿ ಸ್ಥಾನವನ್ನು ಸೋನಿಯಾ ಗಾಂಧಿ ತುಂಬಿದ್ದರು. ಅದಾದ ಬಳಿಕ ಕಾಂಗ್ರೆಸ್ ಅಧ್ಯಕ್ಷೆಯಾಗಿ ಅವಿರೋಧವಾಗಿ ಆಯ್ಕೆಯಾಗುತ್ತಲೇ ಬಂದ ಗಾಂಧಿಯವರದ್ದು, ಇದು ನಾಲ್ಕನೇ ಆಡಳಿತಾವಧಿಯಾಗಿದೆ. ಈ ಅವಧಿ 2015ಕ್ಕೆ ಮುಕ್ತಾಯವಾಗುತ್ತದೆ.

ಕಾಂಗ್ರೆಸ್ ಪಕ್ಷಕ್ಕೆ ಅಧಿನಾಯಕಿಯಾಗಿ ಮುನ್ನಡೆಸುವುದು ಕಷ್ಟ ಕಷ್ಟ ಎಂದಿರುವ ಸೋನಿಯಾ ಈ ಹುದ್ದೆಯನ್ನು ನಿಭಾಯಿಸುವಲ್ಲಿ ನೆರವಾಗುವ ಹಿರಿಯ ನಾಯಕರಿಗೆ ಕೃತಜ್ಞತೆ ಸಲ್ಲಿಸಿದ್ದಾರೆ.
'ಇದು ಅಂದುಕೊಂಡಷ್ಟು ಸುಲಭದ ಕೆಲಸವಲ್ಲ. ನಿಮ್ಮ ಬೆಂಬಲ ಮತ್ತು ತಳಮಟ್ಟದ ಹಾಗೂ ಸಾಮಾನ್ಯ ಕಾರ್ಯಕರ್ತರು ತೋರಿಸಿದ ಪ್ರೀತಿ ಮತ್ತು ಇಟ್ಟಿರುವ ನಂಬಿಕೆಯಿಂದ ನನ್ನ ಕೆಲಸ ಸುಲಭವಾಗಿದೆ ಹಾಗೂ ಇದರ ಎಲ್ಲ ಶ್ರೇಯಸ್ಸು ಅವರಿಗೇ ಸಲ್ಲುತ್ತದೆ' ಎಂದೂ ಮೇಡಂ ಸೋನಿಯಾ ಧನ್ಯವಾದ ಅರ್ಪಿಸಿದ್ದಾರೆ.
ಇದು ಸೋನಿಯಾ ಮೋಡಿ: 2004ರಲ್ಲಿ ಪಕ್ಷ ಅಧಿಕಾರಕ್ಕೆ ಬಂದಾಗ ಪ್ರಧಾನಮಂತ್ರಿಯಾಗುವ ಎಲ್ಲ ಅವಕಾಶಗಳು ಇದ್ದರೂ ಆರ್ಥಿಕ ತಜ್ಞ ಮನಮೋಹನ್ ಸಿಂಗ್ ಅವರನ್ನು ಪ್ರಧಾನಿ ಕುರ್ಚಿಯಲ್ಲಿ ಪ್ರತಿಷ್ಠಾಪಿಸಿದ ತೀರ್ಮಾನವನ್ನು ಕಾಂಗ್ರೆಸಿಗರು ಮಹಾನ್ ತ್ಯಾಗ ಎಂದು ಈಗಲೂ ಬಣ್ಣಿಸುತ್ತಾರೆ.
ಲೋಕಸಭಾ ಚುನಾವಣೆಗಳಲ್ಲಿ ಕಾಂಗ್ರೆಸ್ ಸಂಪೂರ್ಣವಾಗಿ ನೆಲಕಚ್ಚಿ ಹತಾಶ ಸ್ಥಿತಿಯಲ್ಲಿದ್ದ ಸಂದರ್ಭದಲ್ಲಿ 1998ರ ಮಾರ್ಚ್ ತಿಂಗಳಲ್ಲಿ ಸೋನಿಯಾ ಪಕ್ಷದ ಚುಕ್ಕಾಣಿಯನ್ನು ಕೈಗೆತ್ತಿಕೊಂಡರು. ಚುನಾವಣೆ ಸೋಲಿಗೆ ಆಗ ಅಧ್ಯಕ್ಷರಾಗಿದ್ದ ಸೀತಾರಾಮ ಕೇಸರಿಯವರ ತಲೆದಂಡ ಕೊಡಲಾಯಿತು.
ಅದು ಕಾಂಗ್ರೆಸಿನ ಕಷ್ಟದ ದಿನಗಳು. ಕೆಲವೇ ರಾಜ್ಯಗಳಲ್ಲಿ ಪಕ್ಷ ಅಧಿಕಾರದಲ್ಲಿತ್ತು. ಕಾಂಗ್ರೆಸ್ ಕತೆ ಮುಗಿಯಿತು ಎಂದು ಎಲ್ಲರೂ ಭಾವಿಸುತ್ತಿರುವಾಗಲೇ ತಮ್ಮ ವಿದೇಶಿ ಮೂಲ ವಿವಾದ ಮತ್ತು ಇನ್ನಿತರೆ ಟೀಕೆಗಳಿಗೂ ಕ್ಯಾರೇ ಎನ್ನದೆ ಸೋನಿಯಾ, ಅಧ್ಯಕ್ಷ ಸ್ಥಾನದಲ್ಲಿ ಕುಳಿತರು. ಅನಂತರ ಚೇತರಿಸಿಕೊಂಡ ಕಾಂಗ್ರೆಸ್ ಸತತ ಎರಡು ಸಲ ಅಧಿಕಾರಕ್ಕೆ ಬಂದಿದೆ. ಇದು ಸೋನಿಯಾ ಮೋಡಿ.
ನೀವೇ ಆಗಿರಿ ಕರ್ನಾಟಕದ ಗುರು | ಮತ ಹಾಕ್ತೀನಂತ ಪ್ರಮಾಣ ಮಾಡಿ












Click it and Unblock the Notifications