ಲಂಡನ್ನಿಗೆ ಕರೆಸಿಕೊಂಡು ಹಾಳ್ಮಾಡಿಬಿಟ್ಟರು

ಲಂಡನ್ ನಿವಾಸಿ ಅಲೀಮುದ್ದೀನ್ ಎಂಬುವರು 39 ವರ್ಷ ವಯಸ್ಸಿನ ರೇಷ್ಮಾ(ಹೆಸರು ಬದಲಾಯಿಸಲಾಗಿದೆ) ಎಂಬ ಮಹಿಳೆಯನ್ನು ಮನೆಗೆಲಸಕ್ಕೆ ನೇಮಿಸಿಕೊಂಡಿದ್ದನು. ಹೈದರಾಬಾದ್ ಮೂಲದ 4 ಮಕ್ಕಳ ತಾಯಿಯಾದ ರೇಷ್ಮಾ ಲಂಡನ್ ಗೆ ಬಂದ ಗಳಿಗೆ ಸರಿಯಿಲ್ಲ ಎಂದು ತೋರುತ್ತದೆ.
ಅಲೀಮುದ್ದೀನ್ ಮನೆಯಲ್ಲಿ ಕೆಲ ಕಾಲ ಹಿಂಸೆ ಅನುಭವಿಸಿದ ಮೇಲೆ ಎನ್ ಕಾರ್ತಾ ಬಲಪೋವಿ ಎಂಬ ಮಾಲೀಕ ಆಕೆಯನ್ನು ಕೇವಲ 24 ಯುರೋ ಕೊಟ್ಟು ಖರೀದಿಸಿದ್ದಾನೆ. ಅಲ್ಲೂ ಆಕೆಗೆ ಲೈಂಗಿಕ ಹಿಂಸೆ ಆರಂಭವಾಗಿದೆ.
ನಂತರ ಶಶಿ ಓಬೆರಾಯ್ ಎಂಬಾಕೆ ಮನೆಗೆ ಹೋದ ರೇಷ್ಮಾಳ ಮೇಲೆ ಕೊಲೆ ಯತ್ನ ಕೂಡಾ ನಡೆದಿದೆ. ಕೊನೆಗೆ ಮಹಿಳಾ ಸಂಘಟನೆಗಳ ಸಹಾಯದಿಂದ ಪೊಲೀಸ್ ಠಾಣೆ ಮೆಟ್ಟಿಲೇರಿದ ರೇಷ್ಮಾ, ಭಾರತಕ್ಕೆ ಕಳುಹಿಸಿಕೊಡಿ ಎಂದು ದುಂಬಾಲು ಬಿದ್ದಿದ್ದಾಳೆ.
ಪ್ರಕರಣ ಕೋರ್ಟ್ ಮೇಟ್ಟಿಲೇರಿ ವಿಚಾರಣೆಗೆ ಬಂದಿದೆ. ರೇಷ್ಮಾಳ ಕತೆ ಕೇಳಿದ ಜ್ಯೂರಿ "sexual toy or general dogsbody", ಯಂತೆ ಆಕೆಯನ್ನು ಮೂರು ಮನೆಗಳಲ್ಲಿ ಬಳಸಿಕೊಂಡ ಬಗ್ಗೆ ಖೇದ ವ್ಯಕ್ತಪಡಿಸಿದ್ದಾರೆ.
2003 ರಿಂದ 2006ರ ವರೆಗೆ 2300 ಯುರೋ ಪಡೆಯುತ್ತಿದ್ದ ರೇಷ್ಮಾ ದಿನಕ್ಕೆ 16 ಗಂಟೆಗಳ ಕಾಲ ದುಡಿಯುತ್ತಿದ್ದಳು. ಮನೆಗೆಲಸಕ್ಕೆ ಸೇರಿದ ತಕ್ಷಣ ಆಕೆ ಪಾಸ್ ಪೋರ್ಟ್ ಕಿತ್ತುಕೊಳ್ಳುತ್ತಿದ್ದರು ಎಂದು ತಿಳಿದು ಬಂದಿದೆ.
ನನಗೆ ಓದು ಬರಹ ಬರುವುದಿಲ್ಲ ಎಂಬ ಒಂದೇ ಕಾರಣ ನನ್ನನ್ನು ದೈಹಿಕವಾಗಿ ಮಾನಸಿಕವಾಗಿ ಹಿಂಸಿಸಿದ್ದಾರೆ. ನನ್ನ ಮಕ್ಕಳ ಭವಿಷ್ಯಕ್ಕಾಗಿ ನಾನು ಎಲ್ಲವನ್ನು ಸಹಿಸಿಕೊಂಡಿದ್ದೇನೆ ಎಂದು ರೇಷ್ಮಾ ಪೊಲೀಸರಿಗೆ ಹೇಳಿದ್ದಾಳೆ.
ಮೊದಲಿಗೆ ಸೂಪರ್ ಮಾರ್ಕೆಟ್ ಮ್ಯಾನೇಜರ್ ಅಲೀಮುದ್ದೀನ್ ಮಹಮ್ಮದ್ ಹಾಗೂ ಶಮೀನಾ ಯೂಸುಫ್ ಎಂಬುವರ ಮನೆಯಲ್ಲಿ ರೇಷ್ಮಾ ದುಡಿದಿದ್ದಾಳೆ. ನಂತರ ಸೂಪರ್ ಮಾರ್ಕೆಟ್ ನಲ್ಲಿ ಕೆಲಸ ಮಾಡುತ್ತಿದ್ದ ಶಹನಾಜ್ ಬೇಗಂ ಹಾಗೂ ಎನ್ ಕರ್ತಾ ಬಲಪೋವಿ ಎಂಬುವರ ಮನೆ ಸೇರಿದ್ದಾಳೆ. ನಂತರ ನಾರ್ಥ್ ವುಡ್ ನಲ್ಲಿರುವ ಶಶಿ ಓಬೇರಾಯ್ ಹಾಗೂ ಆಕೆ ಪತಿ ಮನೆ ಸೇರಿದ್ದಾಳೆ.
ಮೂವರು ಮಾಲೀಕರ ಮೇಲೆ ಲೈಂಗಿಕ ಕಿರುಕುಳ, ದೈಹಿಕ ಹಲ್ಲೆ, ಸಂಬಳ ಕಡಿತ ಮಾಡಿದ ಆರೋಪಗಳನ್ನು ಹೊರೆಸಲಾಗಿದೆ. ಜೊತೆಗೆ ಮಹಿಳೆಯನ್ನು ಸರಕಿನಂತೆ ಮಾರಾಟ ಮಾಡಿದ ಗುರುತರ ಆರೋಪಕೂಡಾ ಹೊರೆಸಲಾಗಿದೆ. ಪ್ರಕರಣ ಸದ್ಯಕ್ಕೆ Croydon Crown ಕೋರ್ಟಿನಲ್ಲಿ ಜಾರಿಯಲ್ಲಿದ್ದು, ರೇಷ್ಮಾಳಿಗೆ ನ್ಯಾಯ ಕೊಡಿಸುವುದಾಗಿ ಆಕೆ ಪರ ವಕೀಲರು ಹೇಳಿದ್ದಾರೆ.












Click it and Unblock the Notifications