ಬಂದ್: ರೋಡಿಗಿಳಿದ ಬಸ್ ಆದರೆ ಜನರೇ ಇಲ್ಲ

ಅಲ್ಲಲ್ಲಿ ಕಾರ್ಮಿಕ ಸಂಘಟನೆಗಳ ಸದಸ್ಯರು ಪ್ರತಿಭಟನೆಯಲ್ಲಿ ತೊಡಗಿದ್ದಾರೆ. ಆದರೆ ಎಲ್ಲೂ ಗಲಾಟೆಗಳಾಗದೆ ಶಾಂತಿಯುತ ಬಂದ್ ನಡೆದಿದೆ. ಪೊಲೀಸ್ ಬಂದೋಬಸ್ತ್ ಬಿಗಿಯಾಗಿದೆ.
ಆದರೆ, ರಾಜಧಾನಿ ಬೆಂಗಳೂರೂ ಸೇರಿದಂತೆ ಅನೇಕ ಪ್ರಮುಖ ನಗರಗಳು ಆಗಲೇ ಸ್ತಬ್ಧಗೊಂಡಿವೆ. ಬೆಳಗಾವಿ ಸೇರಿದಂತೆ ಕೆಲ ನಗರಗಳಲ್ಲಿ ಜನಜೀವನ ಎಂದಿನಂತೆ ನಡೆದಿದೆ.
ರಾಜಧಾನಿಯಲ್ಲಿ ಬಿಎಂಟಿಸಿ ಸೇವೆ ಅಬಾಧಿತವಾಗಿ ಮುಂದುವರಿದಿದೆ. ಆದರೆ ಅದರಲ್ಲಿ ಬೆರಳೆಣಿಕೆಯಷ್ಟು ಜನರೂ ಇಲ್ಲ. ತಾಜಾ ಸುದ್ದಿಗಾಗಿ 'ಒನ್ಇಂಡಿಯಾಕನ್ನಡ' ನೋಡುತ್ತಿರಿ.
ಬೆಂಗಳೂರಿನಲ್ಲಂತೂ ಜಿಲ್ಲಾಡಳಿತ ಸೇರಿದಂತೆ ಜನ ಸಹ ಮೊದಲೇ ಬಂದ್ modeಗೆ ಟ್ಯೂನ್ ಆಗಿದ್ದು, ಫುಲ್ ಬಂದ್ ಮೂಡಿನಲ್ಲಿದ್ದಾರೆ. ಮತ್ಯಾವಾಗಲೋ ಮ್ಯಾನೇಜಿಮೆಂಟಿನವರು ಕಾಂಪೆನ್ಸೇಟರಿ ಕೆಲಸ ತೆಗಿಸುವುದು ಇದ್ದಿದ್ದೇ. ಹಾಗಾಗಿ ಇಂದು ಭರಪೂರವಾಗಿ ಬಂದ್ ಆಚರಿಸೋಣ ಎಂದು ಜನ ಮನೆಗಳಿಂದ ಹೊರಬಂದೇ ಇಲ್ಲ.
ಆಟೋಗಳು ಸಹ ರೋಡಿಗಿಳಿದಿಲ್ಲ. ಟೆಕ್ಕಿ ಕ್ಯಾಬ್ ಗಳು ಸಹ ಓಡಾಡುತ್ತಿಲ್ಲ. ತಾವೇ ಅಭಿವೃದ್ಧಿಪಡಿಸಿರುವ ಮಾಹಿತಿ ತಂತ್ರಜ್ಞಾನದ ಯುಗದಲ್ಲಿ ಟೆಕ್ಕಿಗಳಿಗೆ ಮುಷ್ಕರದ ಬಿಸಿ ತಟ್ಟುವುದಿಲ್ಲ. ಅವರೆಲ್ಲ ಅನಿವಾರ್ಯಯವಾಗಿ ತೊಡೆಯ ಮೇಲೊಂದು ಲ್ಯಾಪ್ ಟಾಪ್ ಇಟ್ಟುಕೊಂಡು ವರ್ಕ್ ಫ್ರಂ ಹೋಂ ಮಾಡುತ್ತಿದ್ದಾರೆ.
ಆದರೆ ಖಾಸಗಿ ಕಂಪನಿಗಳಿಗೆ ಕೆಲಸಕ್ಕೆ ಹಾಜರಾಗಿರುವವರು 'ನಮ್ಮ ಕರ್ಮ' ಅಂದುಕೊಂಡು ದುಡಿತಕ್ಕೆ ಹಚ್ಚಿಕೊಂಡಿದ್ದಾರೆ. ಜತೆಗೆ ಮುಷ್ಕರ ಮಾಡುತ್ತಿರುವವರ ವಿರುದ್ಧ ಕಿಡಿಕಾರಿದ್ದಾರೆ. 'ಕೆಲಸ ಇಲ್ಲದಿರೋರು ಮುಷ್ಕರದಲ್ಲಿ ತೊಡಗಿದ್ದಾರೆ. ನೋಡಿ ನಾವೆಲ್ಲ ಕೆಲಸಕ್ಕೆ ಬಂದಿಲ್ಲವಾ?' ಎಂದು ತಮಗೂ ರಜೆಯಿಲ್ಲದ ದುಃಖದಲ್ಲೇ ಪ್ರಶ್ನಿಸುತ್ತಿದ್ದಾರೆ.
ಆದರೆ ಇದ್ಯಾವುದಕ್ಕೂ ಕಿವಿಗೊಡದೆ ಬಂದ್ ಯಶಸ್ವಿಗೊಳಿಸುವುದಾಗಿ ಪಣತೊಟ್ಟಿರುವ ಜನ ಮುಷ್ಕರಕ್ಕೆ ಕೈಜೋಡಿಸದವರ ವಿರುದ್ಧ ಕಣ್ಗಾವಲು ನೆಟ್ಟಿದ್ದಾರೆ.
ರಾಜ್ಯದ ಬಹುತೇಕ ಭಾಗಗಳಲ್ಲಿ ಬಂದ್ ಈಗಾಗಲೇ ಕಾಲಿಟ್ಟಿದೆಯಾದರೂ ಅನೇಕ ಕಡೆ ಬಂದ್ ಬೇಡವೆಂದು ಜನ ಎಂದಿನಂತೆ ಕೆಲಸದಲ್ಲಿ ಮಗ್ನರಾಗಿದ್ದಾರೆ. ಆದರೆ ಇದಕ್ಕೆ ಹೆಚ್ಚು ಸ್ಪಂದನೆ ಸಿಗುತ್ತಿಲ್ಲ. ಹಾಗಾಗಿ ದಿನವೇರುತ್ತಿದ್ದಂತೆ ಪೂರ್ಣ ಪ್ರಮಾಣದಲ್ಲಿ ಬಂದ್ ಆಗುವ ಲಕ್ಷಣಗಳಿವೆ.












Click it and Unblock the Notifications