ಮತ್ತೆ ವಿಮಾನ ಹಾರಿಸಲು ಹೊರಟ ಟಾಟಾ ಸಂಸ್ಥೆ

ಏರ್ ಏಷ್ಯಾ ವಿಮಾನಯಾನ ಸಂಸ್ಥೆ ಹಾಗೂ ಟಾಟಾ ಸನ್ಸ್ ಮತ್ತು ಟೆಲೆಸ್ಟ್ರಾ ಟ್ರೇಡ್ ಪ್ಲೇಸ್ ಜತೆ ಜಂಟಿಯಾಗಿ ವಿಮಾನಯಾನ ಆರಂಭಿಸಲು ಪ್ರಸ್ತಾಪವನ್ನು ಮುಂದಿಟ್ಟಿದೆ, ಅದಕ್ಕೆ ಬೇಕಾದ ಅಜಿ೯ಗಳನ್ನು ಈಗಾಗಲೇ ಸಲ್ಲಿಸಿರುವ ಸುದ್ದಿ ಬುಧವಾರ ಹೊರ ಬಿದ್ದಿದೆ.
ವಿಮಾನಯಾನ ವಲಯದಲ್ಲಿ ಎಫ್ ಡಿಐ ನಿಯಮಗಳನ್ನು ಸಡಿಲಗೊಳಿಸಿದ ನಂತರ ಏರ್ ಏಷ್ಯಾ ಈ ಹೊಸ ಸಂಬಂಧಕ್ಕೆ ಹಸ್ತ ಚಾಚಿದೆ. ಕಳೆದ ಸಪ್ಟೆಂಬರ್ ನಲ್ಲಿ ಯುಪಿಎ ಸಕಾ೯ರ ವಿಮಾನಯಾನ ವಲಯದಲ್ಲಿ ಶೇ.49 ವಿದೇಶಿ ನೇರ ಬಂಡವಾಳ ಹೂಡಿಕೆಗೆ ಅನುಮತಿ ನೀಡಿತ್ತು.
ಸಿಎನ್ ಬಿಸಿ-ಟಿವಿ 18 ವರದಿ ಪ್ರಕಾರ ಟಾಟಾ ಸನ್ಸ್ ಸಮೂಹ ಚೆನ್ನೈನಲ್ಲಿ ಸಂಸ್ಥೆಯ ಕೇಂದ್ರ ಸ್ಥಾನವನ್ನಾಗಿಸಿಕೊಂಡು ದೇಶಿ ವಿಮಾನಯಾನದಲ್ಲಿ ಹೊಸ ಕ್ರಾಂತಿ ಸ್ಥಾಪಿಸಲು ಮುಂದಾಗಿದೆ. ಏರ್ ಏಷ್ಯಾ ಸಂಸ್ಥೆ ಶೇ 49 ರಷ್ಟು ಪಾಲು ಹೊಂದಲಿದ್ದು, ಉಳಿದದ್ದು ಇನ್ನೆರಡು ಕಂಪನಿಗಳು ಹೊಂದಲಿದೆ.
ಕಳೆದ ವರ್ಷ ಸ್ಪೈಸ್ ಜೆಟ್ ವಿಮಾನಯಾನ ಜೊತೆ ಒಪ್ಪಂದ ಮಾಡಿಕೊಳ್ಳಲು ಯತ್ನಿಸಿದ್ದ ಏರ್ ಏಷ್ಯಾ ಬರಿಗೈನಲ್ಲಿ ಹಿಂತಿರುಗಿತ್ತು. ಈಗ ಟಾಟಾ ಸಮೂಹದ ಕೈ ಹಿಡಿದಿದೆ. ಮಲೇಶಿಯಾ ಮೂಲದ ಏರ್ ಏಷ್ಯಾ ಬರ್ಹಾದ್ ಸಂಸ್ಥೆ ಭಾರತದಲ್ಲಿ ದೇಶಿ ವಿಮಾನಯಾನ ನಡೆಸಲು FIPB ಅನುಮತಿ ಕೋರಿ ಈಗಾಗಲೇ ಅರ್ಜಿ ಸಲ್ಲಿಸಿದೆ.
ಕಡಿಮೆ ವೆಚ್ಚದಲ್ಲಿ ವಿಮಾನಯಾನ ಸೇವೆ ಒದಗಿಸುವ ಏಷ್ಯಾದ ಅತಿ ದೊಡ್ಡ ವಿಮಾನಯಾನ ಸಂಸ್ಥೆಯಾಗಿದೆ. ಸುಮಾರು 118 ಏರ್ ಕ್ರಾಫ್ಟ್ ಗಳನ್ನು ಹೊಂದಿದ್ದು, ದಕ್ಷಿಣ ಭಾರತದಿಂದ ಏಷ್ಯಾದ ಪ್ರಮುಖ ನಗರಗಳಿಗೆ ನೇರ ಸಂಪರ್ಕ ಒದಗಿಸುವ ಮಹತ್ವದ ಯೋಜನೆ ಹೊಂದಿದೆ. ಸದ್ಯಕ್ಕೆ ಥೈಲ್ಯಾಂಡ್ ಹಾಗೂ ಮಲೇಶಿಯಾದಲ್ಲಿ ಮುಖ್ಯ ಕೇಂದ್ರಗಳನ್ನು ಹೊಂದಿದೆ. ಈಗಾಗಲೇ ಚೆನ್ನೈ, ಬೆಂಗಳೂರು, ತಿರುಚಿನಾಪಳ್ಳಿ, ಕೊಚ್ಚಿ ಹಾಗೂ ಕೋಲ್ಕತ್ತಾ ನಗರಗಳಲ್ಲಿ ಹಾರಾಟ ನಡೆಸುತ್ತಿದೆ.
ಸದ್ಯದ ಪರಿಸ್ಥಿತಿಯಲ್ಲಿ ಭಾರತದಲ್ಲಿ ಬಂಡವಾಳ ಹೂಡಿಕೆ ಮಾಡಲು ಸೂಕ್ತ ಅವಕಾಶ ಒದಗಿ ಬಂದಿದೆ. ದೇಶಿ ವಿಮಾನಯಾನವನ್ನು ಇನ್ನಷ್ಟು ಬಲಪಡಿಸಿ, ಅಂತಾರಾಷ್ಟ್ರೀಯ ಪ್ರಮುಖ ನಗರಗಳಿಗೆ ಸಂಪರ್ಕ ಒದಗಿಸುವುದು ನಮ್ಮ ಗುರಿ. ಕಡಿಮೆ ವೆಚ್ಚದಲ್ಲಿ ಸುಖ ಪ್ರಯಾಣ ಒದಗಿಸುವುದು ನಮ್ಮ ಮೂಲ ಮಂತ್ರ ಎಂದು ಏರ್ ಏಷ್ಯಾ ಸ್ಥಾಪಕ ಹಾಗೂ ಸಮೂಹದ ಸಿಇಒ ಟೋನಿ ಫರ್ನಾಂಡೀಸ್ ಹೇಳಿದ್ದಾರೆ.












Click it and Unblock the Notifications