ಯುವತಿ ಬಾಯಿಗೆ ರಾಡ್ ನುಗ್ಗಿಸಿ ಅತ್ಯಾಚಾರಕ್ಕೆ ಯತ್ನ

ಇತ್ತೀಚೆಗೆ ಅರೆ ವೈದ್ಯಕೀಯ ವಿದ್ಯಾರ್ಥಿನಿ ಮೇಲೆ ಅತ್ಯಾಚಾರ ನಡೆಸಿ, ಆಕೆಯನ್ನು ಇದೇ ರೀತಿ ಕಬ್ಬಿಣದ ರಾಡಿನಿಂದ ಮಾರಕವಾಗಿ ಗಾಯಗೊಳಿಸಿದ ಘಟನೆಯಿಂದ ಎಚ್ಚೆತ್ತ ದೆಹಲಿ ಮುಖ್ಯಮಂತ್ರಿ ಶೀಲಾ ದೀಕ್ಷಿತ್ ಅವರು ಆ ಬರ್ಬರ ಘಟನೆ ತಮ್ಮ ಕಣ್ಣುತೆರೆಸಿದೆ. ಅತ್ಯಾಚಾರಕ್ಕೆ ಕಡಿವಾಣ ಹಾಕಲಾಗುವುದು ಎಂದಿದ್ದರು. ಆದರೂ ರಾಜಧಾನಿಯಲ್ಲಿ ಅತ್ಯಾಚಾರ ಪ್ರಕರಣಗಳು ಅವ್ಯಾಹತವಾಗಿ ನಡೆದಿದೆ.
ಅವನು ಕೇಬಲ್ ಆಪರೇಟರ್ : 26 ವರ್ಷ ವಯಸ್ಸಿನ ಕೇಬಲ್ ಆಪರೇಟರ್ ಅನಿಲ್ ಕುಮಾರ್. ದೆಹಲಿಯ ದಕ್ಷಿಣ ಭಾಗದಲ್ಲಿರುವ ಲಜ್‌ಪತ್ ನಗರದಲ್ಲಿ ಸೋಮವಾರ ರಾತ್ರಿ ಸದರಿ ಯುವತಿ ಮನೆಯಲ್ಲಿ ಒಬ್ಬಂಟಿಯಾಗಿದ್ದಾಗ, ಆಕೆಯ ಮೇಲೆ ಅತ್ಯಾಚಾರಕ್ಕೆ ಯತ್ನಿಸಿದನೆಂದು ಪೊಲೀಸರು ಮಂಗಳವಾರ ತಿಳಿಸಿದ್ದಾರೆ.
ಮಾಸಿಕ ಕೇಬಲ್ ಟಿವಿ ಚಂದಾ ಹಣವನ್ನು ಪಡೆಯಲು ಮಂಗಳವಾರ ರಾತ್ರಿ ಅನಿಲ್ ಕುಮಾರ್ ಮಹಿಳೆಯ ಮನೆಗೆ ತೆರಳಿದ್ದ. ಅಕೆ ಒಂಟಿಯಾಗಿರುವುದನ್ನು ಗಮನಿಸಿದ ಆತ ಆಕೆಯ ಮೇಲೆ ಅತ್ಯಾಚಾರಕ್ಕೆ ಯತ್ನಿಸಿದ್ದಾನೆ.
ಆಕೆ ಸಹಾಯಕ್ಕಾಗಿ ಕಿರುಚಿದಾಗ, ಆತ ಕಬ್ಬಿಣದ ರಾಡನ್ನು ಆಕೆಯ ಬಾಯಿಗೆ ನುಗ್ಗಿಸಿದ್ದಾನೆ. ಮಹಿಳೆಯ ಆಕ್ರಂದನವನ್ನು ಕೇಳಿ ನೆರೆಹೊರೆಯವರು ಧಾವಿಸಿದಾಗ ಕುಮಾರ್ ಸ್ಥಳದಿಂದ ಪರಾರಿಯಾಗಿದ್ದಾನೆ. ಆನಂತರ ಆತನನ್ನು ಬಂಧಿಸಲಾಯಿತು. ಯುವತಿಯನ್ನು ಏಮ್ಸ್ (AIIMS) ಆಸ್ಪತ್ರೆಗೆ ದಾಖಲಿಸಲಾಗಿದ್ದು, ಆಕೆಯ ಪರಿಸ್ಥಿತಿ ಗಂಭೀರವಾಗಿರುವುದಾಗಿ ತಿಳಿದುಬಂದಿದೆ.












Click it and Unblock the Notifications