ಮಾನ ಇದ್ದರೆ ಮಾನನಷ್ಟ ಮೊಕದ್ದಮೆ ಹಾಕ್ಲಿ

ಮಂಗಳವಾರ(ಫೆ.5) ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಹಿರೇಮಠ್, ಜೆಡಿಎಸ್ ಮುಖಂಡರು ತಮ್ಮನ್ನು ಬಳಸಿಕೊಂಡು ಷಡ್ಯಂತ್ರ ರೂಪಿಸಿದ್ದಾರೆ ಎಂದು ಆರೋಪಿಸಿದ್ದಾರೆ. ಅಲ್ಲದೆ, ಈ ಬಗ್ಗೆ ಹಿರೇಮಠ್ ವಿರುದ್ಧ ಮಾನನಷ್ಟ ಮೊಕದ್ದಮೆ ದಾಖಲಿಸುವುದಾಗಿ ಹೇಳಿದ್ದಾರೆ. ಡಿ.ಕೆ.ಶಿವಕುಮಾರ್ ಅವರಿಗೆ 'ಮಾನ' ಇದ್ದರೆ ಮಾನನಷ್ಟ ಮೊಕದ್ದಮೆ ಹೂಡಲಿ ಎಂದರು.
ಈ ಬಗ್ಗೆ ದಾಖಲೆ ಸಂಗ್ರಹಿಸಲು 11 ತಿಂಗಳು ಹಗಲಿರುಳು ಶ್ರಮಿಸಿದ್ದೇನೆ. ಮುಂದಿನ ದಿನಗಳಲ್ಲಿ ಕನಕಪುರದಲ್ಲಿ ನಡೆಸುತ್ತಿರುವ ಗ್ರಾನೈಟ್ ಮಾಫಿಯಾ ಬಗ್ಗೆ ದಾಖಲೆಗಳನ್ನು ಬಹಿರಂಗಪಡಿಸುವುದಾಗಿ ಹಿರೇಮಠ ತಿಳಿಸಿದರು.
ಗ್ರಾನೈಟ್ ಮಾಫಿಯಾ: ರಾಮನಗರ ಜಿಲ್ಲೆಯ ಕನಕಪುರದಲ್ಲಿ ಡಿ.ಕೆ.ಶಿವಕುಮಾರ್ ನಡೆಸುತ್ತಿರುವ ಗ್ರಾನೈಟ್ ಮಾಫಿಯಾ ಬಗ್ಗೆ ದಾಖಲೆ ಸಂಗ್ರಹಿಸಲಾಗುತ್ತಿದೆ.ಈ ಬಗ್ಗೆ ಸಾರ್ವಜನಿಕರು ಹಾಗೂ ಸಂಘ ಸಂಸ್ಥೆಗಳು ದಾಖಲೆಗಳನ್ನು ಒದಗಿಸುವ ಮೂಲಕ ನಮ್ಮೆಡನೆ ಕೈಜೋಡಿಸಬೇಕು. ಮೆಲ್ನೋಟಕ್ಕೆ ಡಿ.ಕೆ.ಶಿವಕುಮಾರ್ ನಡೆಸುತ್ತಿರುವ ಗ್ರಾನೈಟ್ ಮಾಫಿಯಾ ಹಾಗೂ ಬಳ್ಳಾರಿಯ ಜನಾರ್ದನ ರೆಡ್ಡಿ ನಡೆಸಿರುವ ಅಕ್ರಮ ಗಣಿಗಾರಿಕೆಗೆ ಯಾವುದೇ ರೀತಿಯ ವ್ಯತ್ಯಾಸ ಇಲ್ಲ ಎಂದರು.
ಡಿ.ಕೆ.ಶಿವಕುಮಾರ್ ಹಾಗೂ ಅವರ ಸಹೋದರರ ಒಡೆತನದ 9 ಗಣಿ ಕಂಪೆನಿಗಳ 'ಎ' ಶ್ರೇಣಿಯ ಕಂಪೆನಿಗಳು ಅಕ್ರಮ ಗಣಿಗಾರಿಕೆಯಿಂದ 10 ಲಕ್ಷ ಮೆಟ್ರಿಕ್ ಟನ್ ಅದಿರು ಗಣಿಗಾರಿಕೆ ನಡೆಸಿದೆ. ಇದನ್ನು ತಡೆಯುವಲ್ಲಿ ಸರಕಾರ ಸಂಪೂರ್ಣವಾಗಿ ವಿಫಲವಾಗಿದೆ. ಅಲ್ಲದೆ, ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ನಿರ್ದೇಶಕರು ಅಕ್ರಮ ಗಣಿಗಾರಿಕೆ ನಡೆಸುತ್ತಿರುವ ಪ್ರವೀಣ್ ಚಂದ್ರ ಮೈನ್‌ಗೆ ಗಣಿಗಾರಿಕೆ ಪುನರ್ ಆರಂಭಿಸಲು ಅವಕಾಶ ಕಲ್ಪಿಸಿರುವುದು ಎಷ್ಟು ಸೂಕ್ತ ಎಂದು ಹಿರೇಮಠ್ ಪ್ರಶ್ನಿಸಿದರು.
ವರಲಕ್ಷ್ಮಿ ಮೈನಿಂಗ್ ಕಂಪೆನಿ ಅವ್ಯವಹಾರಗಳ ಆಗರವಾಗಿದೆ. ದೀಪಕ್‌ಚಂದ್ ಕಿಶನ್‌ಲಾಲ್ ಮೈನ್ 14.51 ಲಕ್ಷ ಮೆಟ್ರಿಕ್ ಟನ್, ಲತಾ ಮೈನಿಂಗ್ ಕಂಪೆನಿ 10 ಲಕ್ಷ ಮೆಟ್ರಿಕ್ ಟನ್ ಅಕ್ರಮ ಅದಿರು ಸಾಗಿಸಿದೆ. ಈ ಎಲ್ಲ ದಾಖಲೆಗಳನ್ನು ಸುಪ್ರೀಂ ಕೋರ್ಟ್‌ಗೆ ಸಲ್ಲಿಸಲಿದ್ದು, ಸರಕಾರಕ್ಕೆ ನಷ್ಟವಾಗಿರುವ ಹಣವನ್ನು ತಪ್ಪಿತಸ್ಥರಿಂದ ವಸೂಲಿ ಮಾಡುವಂತೆ ಆಗ್ರಹಿಸಲಾಗುವುದು ಎಂದು ಹಿರೇಮಠ್ ತಿಳಿಸಿದರು.
ಅಕ್ರಮ ಗಣಿಗಾರಿಕೆಯನ್ನು ಕೂಡಲೇ ಸ್ಥಗಿತಗೊಳಿಸಬೇಕು ಎಂಬ ಸುಪ್ರೀಂ ಕೋರ್ಟ್‌ನ ಆದೇಶವನ್ನು ಗಾಳಿಗೆ ತೂರಿರುವ ಮಾತಾ ಮಿನರಲ್ಸ್ ಹಾಗೂ ಪ್ರವೀಣ್‌ಚಂದ್ರ ಮೈನಿಂಗ್ ಕಂಪೆನಿ ಗಳಲ್ಲಿ 13.72 ಲಕ್ಷ ಮೆಟ್ರಿಕ್ ಟನ್ ಅವ್ಯಾಹತವಾಗಿ ಅಕ್ರಮ ಅದಿರು ರಫ್ತಾಗುತ್ತಿದೆ. ಮೈಸೂರು ಮಿನರಲ್ಸ್ ಲಿಮಿಟೆಡ್‌ನ ಕಾರ್ಯನಿರ್ವಾಹಕ ನಿರ್ದೇಶಕರೂ ಕೂಡ ಗಂಭೀರ ಲೋಪ ಎಸಗಿದ್ದು, ಸರಕಾರದ ಬೊಕ್ಕಸಕ್ಕೆ ನಷ್ಟ ಉಂಟುಮಾಡಿದ್ದಾರೆ ಎಂದು ಹಿರೇಮಠ್ ತಿಳಿಸಿದರು.
ಡಿಕೆ ಶಿವಕುಮಾರ್ ಹಾಗೂ ಕುಟುಂಬದವರ ಅಕ್ರಮ ಗಣಿಗಾರಿಕೆ ವಿರುದ್ಧ ಸಿಇಸಿ ತನಿಖೆಗೆ ಸುಪ್ರೀಂಕೋರ್ಟ್ ಆದೇಶಿಸಿರುವುದನ್ನು ಸ್ವಾಗತಿಸಿದ ಹಿರೇಮಠ್, ಸಿಬಿಐ ತನಿಖೆಗೆ ಮತ್ತೊಮ್ಮೆ ಮನವಿ ಸಲ್ಲಿಸಲಾಗುವುದು ಎಂದರು.












Click it and Unblock the Notifications