Highway: ಶಿರಸಿ-ಹಾವೇರಿ ಹೆದ್ದಾರಿಯಲ್ಲಿ ಎನ್‌ಎಚ್‌ಎಐ ತೇಪೆ ಕಾರ್ಯ ಆರಂಭ, ಜನ ಹಿಡಿಶಾಪ
ಹಾವೇರಿ/ಶಿರಸಿ: ಮಧ್ಯ ಕರ್ನಾಟಕದ ಪ್ರಮುಖ ಜಿಲ್ಲೆ ಹಾವೇರಿಯಿಂದ ಶಿರಸಿ ರಸ್ತೆ ಸಂಪೂರ್ಣವಾಗಿ ಕೆಟ್ಟು ಹೋಗಿದೆ. ಸಮರ್ಪಕ ರಸ್ತೆ ನಿರ್ಮಿಸಲು ಆಗದ ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರವು (NHAI) ಮಳೆಗಾಲ ಆರಂಭವಾಗುತ್ತಿರುವ ಹಿನ್ನೆಲೆಯಲ್ಲಿ ಎಚ್ಚೆತ್ತುಕೊಂಡು ಈಗ ತೇಪೆ ಹಾಕಲು ಮುಂದಾಗಿದೆ. ಕಿತ್ತು ಹೋದ ಡಾಂಬರ್ ರಸ್ತೆಯ ಗುಂಡಿಗಳನ್ನು ಮುಚ್ಚುವ ಕೆಲಸದಲ್ಲಿ ತೊಡಗಿದೆ. ಇದಕ್ಕೆ ಸಾರ್ವಜನಿಕರಿಂದ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ.
ಕಳೆದ ಬಾರಿ ಮಳೆಗಾಲದಲ್ಲಿ ಸಾಕಷ್ಟು ತಾಪತ್ರಯ ಅನುಭವಿಸಿರುವ ಈ ಭಾಗದ ಜನರು ಈ ವರ್ಷವು ಮತ್ತಷ್ಟು ಹೆಚ್ಚಿನ ಸಮಸ್ಯೆ ಎದುರಿಸಲು ಸಜ್ಜಾಗಬೇಕಿದೆ. ಕಾರಣ, ಕೆಲವು ವರ್ಷಗಳಿಂದಲೂ ಬಿಸಲಕೊಪ್ಪ, ಚಿಪಗಿ ವೃತ್ತ, ದಮನಬೈಲ್ ಕ್ರಾಸ್ ಮಾರ್ಗವಾಗಿ ಹತ್ತಾರು ಕಿಲೋ ಮೀಟರ್ ರಸ್ತೆ ನಿರ್ಮಿಸಲಾಗುತ್ತಿದೆ. ಅಲ್ಲಲ್ಲಿ ಅಗೆದು ಬಿಟ್ಟ ರಸ್ತೆಗಳು ಹಾಗೆಯೇ ಇದೆ. ಕ್ರಾಂಕೀಟ್ ರಸ್ತೆ ನಿರ್ಮಾಣ ಅರ್ಧಕ್ಕೆ ನಿಂತಿದ್ದು, ಈ ಭಾಗದ ಸಂಚಾರಕ್ಕೆ ಸಾಕಷ್ಟು ಅಡಚಣೆ ಉಂಟಾಗುತ್ತಿದೆ.

ಕೆಸರುಗದ್ದೆಯಂತಹ ರಸ್ತೆಯಲ್ಲಿ ಸಂಚಾರ ಸವಾಲು
ಮಳೆ ಬಂದರೆ ಸಾಕು ರಸ್ತೆ ನಿರ್ಮಾಣಕ್ಕು ಮುನ್ನ ಹಾಕಿದ್ದ ಕೆಂಪು ಮಣ್ಣು ಮಳೆ ನೀರಿಗೆ ಜಾರಿ ವಾಹನಗಳು ಸರಾಗವಾಗಿ ಸಾಗದಂತಹ ಸ್ಥಿತಿ ನಿರ್ಮಾಣವಾಗುತ್ತದೆ. ಈ ಸಂಬಂಧ ಪ್ರತಿಭಟನೆಗಳು ನಡೆದಿದ್ದವು. ರಸ್ತೆ ಅವ್ಯವಸ್ಥೆ, ಕೆಸರುಗದ್ದೆಯಂತಹ ರಸ್ತೆಯಲ್ಲಿ ವಾಹನಗಳ ಓಡಾಟ ಸವಾಲಾಗಿದ್ದು, ಈ ಕುರಿತ ಹಳೇಯ ವಿಡಿಯೋಗಳ ಜಾಲತಾಣದಲ್ಲಿ ಮತ್ತೆ ಹರಿದಾಡುತ್ತಿವೆ. ಶಿರಸಿ- ಹಾವೇರಿ ಮಾರ್ಗದ ಜನರು ಹಿಡಿಶಾಪ ಹಾಕುತ್ತಲೇ ವರ್ಷಗಳಿಂದ ಇದೇ ರಸ್ತೆಯಲ್ಲಿ ಓಡಾಡುತ್ತಿದ್ದಾರೆ. ಹೆಸರಿಗೆ ಮಾತ್ರ ರಾಷ್ಟ್ರೀಯ ಹೆದ್ದಾರಿಯಾಗಿದ್ದು, ಹಳ್ಳಿ ರಸ್ತೆಗಿಂತ ಕಡೆಯಾಗಿದೆ.
80 ಕಿಮೀ ಸಂಚಾರಕ್ಕೆ ಬೇಕು ಗಂಟೆಗಳ ಸಮಯ!
ಶಿರಸಿಯಿಂದ ಹಾವೇರಿವರೆಗೆ ಸುಮಾರು 80 ಕಿಲೋ ಮೀಟರ್ ಇದೆ. ಇಷ್ಟು ದೂರ ಕ್ರಮಿಸಲು ಖಾಸಗಿ ವಾಹನಗಳಿಗೆ 1.30-2 ಗಂಟೆ, ಬಸ್‌ಗಳಿಗೆ ಸುಮಾರು 3-4 ಗಂಟೆ ಹಿಡಿಯುತ್ತದೆ. ಮಳೆಗಾದಲ್ಲಿ ರಸ್ತೆ ಇದಿಯೋ ಇಲ್ಲವೋ ಎಂಬ ಸ್ಥಿತಿ ನಿರ್ಮಾಣವಾಗಿ ಬಿಡುತ್ತದೆ. ಈ ಹೆದ್ದಾರಿ ನಿರ್ಮಾಣ ನೆನೆಗುದಿಗೆ ಬಿದ್ದಿದೆ. ಗುತ್ತಿಗೆದಾರರು ವಿವಿಧ ಕಾಮಗಾರಿಗಳಿಂದ ಕೆಲಸ ಆರಂಭಿಸುತ್ತಿಲ್ಲ. ಹೀಗಾಗಿ ರಸ್ತೆಯ ಕನಸು ಕನಸಾಗಿಯೇ ಉಳಿದಿದೆ.
ಶಿರಸಿ ರಸ್ತೆಯ ಹೊರಗೆ ರಸ್ತೆ ಅಗೆದು ಹಾಗೆಯೇ ಬಿಡಲಾಗಿದೆ. ರಸ್ತೆಗುಂಡಿ ಬಿದ್ದು, ದೈನಂದಿನ ಸಂಚಾರ ಕಷ್ಟಕರವಾಗಿದೆ. ಆ ಜನರ ವಿರೋಧ, ಒಂದಷ್ಟು ಮನವಿಗಳ ಮೇರೆಗೆ ಅಲ್ಲಲ್ಲಿ ಡಾಂಬರ್ ರಸ್ತೆಗಳ ಗುಂಡಿ ಮುಚ್ಚುವ ಕಾರ್ಯ ಆರಂಭಿಸಲಾಗಿದೆ. ಡ್ಯಾಮೇಜ್ ಕಂಟ್ರೋಲ್ ಮಾಡಲು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ತೇಪೆ ಹಾಕುತ್ತಿದೆ ಎಂದು ವಾಹನ ಸವಾರರು ದೂರಿದ್ದಾರೆ. ಇದು ಶಾಸ್ವತ ಪರಿಹಾರ ಅಲ್ಲದ್ದರಿಂದ ಇದೇ ಮಳೆಗಾಲದ ದಿನಗಳಲ್ಲಿ ರಸ್ತೆ ಮತ್ತಷ್ಟು ಹದಗೆಡುವ ಆತಂಕ ಶುರುವಾಗಿದೆ.
ಚಿಪಗಿ ವೃತ್ತದಿಂದ ದಮನಬೈಲ್ ಕ್ರಾಸ್‌ವರೆಗೆ ಹೆದ್ದಾರಿ ಸಂಪೂರ್ಣ ಕಿತ್ತುಹೋಗಿದೆ. ಈ ಹಿಂದೆ ಇದೇ ರಸ್ತೆಯಲ್ಲಿ ಅಪಾಘಗಳು ಸಂಭವಿಸಿದ್ದವು. ಸದ್ಯ ತಾತ್ಕಾಲಿಕ ರಸ್ತೆ ದುರಸ್ತಿ ನಡೆದಿದ್ದು, ಮಳೆಗಾಲವನ್ನು ಹೇಗೋ ಕಳೆಯಬಹುದು. ಆದರೆ ಶಿರಸಿ-ಹಾವೇರಿ ಮಾರ್ಗದ ಜನರು ನಿಗದಿಯಂತೆ ಹೆದ್ದಾರಿ ನಿರ್ಮಿಸಿ ಕೊಡುವಂತೆ ಆಗ್ರಸುತ್ತಿದ್ದಾರೆ.













Click it and Unblock the Notifications