Rice: ಬಾಸ್ಮತಿಗಿಂತ ಭಿನ್ನವಾದ ಭಾರತದ 8 ಅಕ್ಕಿ ತಳಿಗಳು ಯಾವುವು? ಬಳಕೆ-ಇತಿಹಾಸ ಇಲ್ಲಿದೆ
Indian Rice Varieties: ಸಾಮಾನ್ಯವಾಗಿ ಜನರಿಗೆ 'ಅಕ್ಕಿ' ಎಂದರೆ ಕೇವಲ 'ಬಾಸ್ಮತಿ, ಸೋನಾ ಮಸೂರಿ, ಕಂದು ಅಕ್ಕಿ ಎಂಬ ಒಂದರಡು ವಿಧದ ಅಕ್ಕಿಗಳಷ್ಟೇ ಪರಿಚಿತ. ಉದ್ದ, ಪರಿಮಳಯುಕ್ತ ಹಾಗೂ ತುಪ್ಪುಳಿನಂತಿರುವ ಬಾಸ್ಮತಿ, ಭಾರತದ ಜನಪ್ರಿಯ ರಫ್ತು ಉತ್ಪನ್ನವಾಗಿ ಜಗತ್ತಿನಾದ್ಯಂತ ಖ್ಯಾತಿ ಪಡೆದಿದೆ. ನಮ್ಮಲ್ಲಿ ಬಹುತೇಕರು ಹಬ್ಬಗಳು ಮತ್ತು ವಿಶೇಷ ಊಟಗಳಲ್ಲಿ ಇದನ್ನೇ ಬಳಸುತ್ತಿದ್ದೇವೆ. ಹೋಟೆಲ್‌ಗಳಿಗೆ ಹೋದರೂ ಬಾಸ್ಮತಿ ರೈಸ್ ಚಪ್ಪರಿಸಿ ತಿನ್ನುವವರಿದ್ದಾರೆ.
ಭಾರತದ ಅನೇಕ ರಾಜ್ಯಗಳಲ್ಲಿ ನಾನಾ ನಮೂನೆಯ ಅಕ್ಕಿ ಪ್ರಬೇಧಗಳಿವೆ. ಆದರೆ ಪಾಲಿಶ್ ಮಾಡಿದ ಬಿಳಿ ಅಕ್ಕಿ ಹೆಚ್ಚು ಪ್ರಚಲಿತದಲ್ಲಿದೆ. ವಿಶಿಷ್ಟವಾದ ರುಚಿ, ಪರಿಮಳ ಮತ್ತು ಭಿನ್ನ ಬಣ್ಣಗಳನ್ನು ಹೊಂದಿರುವ ನಮಗೆ ಗೊತ್ತಿಲ್ಲ ಕೆಲವು ಅಕ್ಕಿ ಪ್ರಭೇಧಗಳಿವೆ. ಕೆಲವು ಸಹಜವಾಗಿ ಸಿಹಿ ಸುವಾಸನೆ ಹೊಂದಿದ್ದರೆ, ಇನ್ನು ಕೆಲವು ಗಾಢ ಕಪ್ಪು ಅಥವಾ ಕೆಂಪು ಬಣ್ಣದಲ್ಲಿ ಕಾಣಿಸುತ್ತವೆ. ವಾಣಿಜ್ಯ ಅಕ್ಕಿಯಂತಲ್ಲದೆ, ಇವು ಪರಿಸರಕ್ಕೆ ಹೊಂದಿಕೊಂಡು ಬೆಳೆಯುವ ಸಹಜ ಗುಣ ಹೊಂದಿವೆ.

ಭಾರತವು ಅಕ್ಕಿಯ ವೈವಿಧ್ಯತೆಗೆ ಹೆಸರಾಗಿದೆ.ಪ್ರತಿಯೊಬ್ಬ ಆಹಾರಪ್ರಿಯರೂ ತಿಳಿದುಕೊಳ್ಳಬೇಕಾದ 8 ಪ್ರಮುಖ ಸ್ಥಳೀಯ ಭಾರತೀಯ ಅಕ್ಕಿ ವಿಧಗಳ ಮಾಹಿತಿ ಇಲ್ಲಿವೆ. (ಸುದ್ದಿ: ಎನ್‌ಡಿಟಿವಿ ವರದಿ ಆಧರಿಸಿದೆ).
1. ಅಸ್ಸಾಂನ ಜೋಹಾ ಅಕ್ಕಿ
ಅಸ್ಸಾಂ ರಾಜ್ಯದ ಹೆಮ್ಮೆಯ ಅಕ್ಕಿ ಎಂದರೆ ಜೋಹಾ. ಪರಿಮಳಯುಕ್ತ ಅಕ್ಕಿಯನ್ನು ನೂರಾರು ವರ್ಷಗಳಿಂದ ಅಸ್ಸಾಂನಲ್ಲಿ ಬೆಳೆಯಲಾಗುತ್ತಿದೆ. ಇದರ ಧಾನ್ಯಗಳು ಚಿಕ್ಕದಾಗಿ ಮತ್ತು ದುಂಡಾಗಿರುತ್ತವೆ, ಸಾಮಾನ್ಯವಾಗಿ ಪ್ರೀಮಿಯಂ ಅಕ್ಕಿ ಎಂದು ಕರೆಯಲಾಗುವ ಬಾಸ್ಮತಿಯಷ್ಟು ಉದ್ದವಾಗಿರುವುದಿಲ್ಲ. ಆದರೆ, ಜೋಹಾ ತನ್ನ ವಿಶಿಷ್ಟ ಸುವಾಸನೆಯಿಂದ ಈ ಕೊರತೆಯನ್ನು ನೀಗಿಸುತ್ತದೆ. ಅಡುಗೆ ಮಾಡಲು ಪ್ರಾರಂಭಿಸಿದ ತಕ್ಷಣ, ಸಹಜವಾದ ಸಿಹಿಯಾದ ಹೂವಿನ ಪರಿಮಳವು ಮನೆಯೆಲ್ಲಾ ತುಂಬಿಕೊಳ್ಳುತ್ತದೆ.
ಬೇಯಿಸಿದಾಗ, ಜೋಹಾ ಮೃದುವಾಗುತ್ತದೆ ಆದರೆ ಜಿಗುಟಾಗಿರುವುದಿಲ್ಲ. ಈ ಭೌಗೋಳಿಕ ಸೂಚಿತ (GI) ಮಾನ್ಯತೆ ಪಡೆದ ಅಕ್ಕಿಯನ್ನು ಅಸ್ಸಾಮಿ ಕುಟುಂಬಗಳಲ್ಲಿ ಹೆಚ್ಚಾಗಿ ಪುಲಾವ್, ವಿಶೇಷ ಹಬ್ಬದ ಊಟಗಳು ಹಾಗೂ ಖೀರ್‌ನಂತಹ ಸಿಹಿ ತಿನಿಸುಗಳಿಗೆ ಬಳಸಲಾಗುತ್ತದೆ. ಅಸ್ಸಾಂನಲ್ಲಿ ಇದು ಹೆಚ್ಚು ಜನಪ್ರಿಯವಾಗಿದ್ದರೂ, ಈಶಾನ್ಯ ಭಾರತದ ಹೊರಗಿನ ಜನರು ಇದನ್ನು ಈಗಷ್ಟೇ ಗುರುತಿಸಲು ಪ್ರಾರಂಭಿಸಿದ್ದಾರೆ.
2. ಪಶ್ಚಿಮ ಬಂಗಾಳದ ಗೋಬಿಂದೋಭಾಗ್
ಪಶ್ಚಿಮ ಬಂಗಾಳದಲ್ಲಿ ಗೋಬಿಂದೋಭಾಗ್ ಅಕ್ಕಿ ಶತಮಾನಗಳಿಂದ ಬಳಕೆಯಲ್ಲಿದೆ. ಅದು ಅಲ್ಲಿನ ಜನ ಸಂಪ್ರದಾಯಕ್ಕೆ ಅಂಟಿಕೊಂಡಿದೆ. ಈ ಅಕ್ಕಿಯನ್ನು ಬಹಳ ಹಿಂದಿನಿಂದಲೂ ಬೆಳೆಸಲಾಗುತ್ತಿದೆ. ದೇವಾಲಯದ ಆಚರಣೆಗಳು ಹಾಗೂ ಧಾರ್ಮಿಕ ಅರ್ಪಣೆಗಳೊಂದಿಗೆ ನಿಕಟ ಸಂಬಂಧ ಹೊಂದಿದೆ. ಇದರ ಧಾನ್ಯಗಳು ಚಿಕ್ಕದಾಗಿ, ಬಿಳಿಯಾಗಿ ಮತ್ತು ದುಂಡಾಗಿರುತ್ತವೆ. ಅವುಗಳ ಬೆಚ್ಚಗಿನ, ಬೆಣ್ಣೆಯಂತಹ ಸುವಾಸನೆಯು ಬಾಸ್ಮತಿಯ ಹೂವಿನ ಪರಿಮಳಕ್ಕಿಂತ ಗಮನಾರ್ಹವಾಗಿ ಭಿನ್ನವಾಗಿರುತ್ತದೆ. ಬೇಯಿಸಿದಾಗ ಇದರ ವಿನ್ಯಾಸ ಮೃದು ಮತ್ತು ತೇವಾಂಶದಿಂದ ಕೂಡಿರುತ್ತದೆ.
ಬಂಗಾಳಿಗಳು ಖಿಚೂರಿ, ಪಾಯೇಶ್, ಪುಲಾವ್ ಮತ್ತು ವಿವಿಧ ಹಬ್ಬದ ಖಾದ್ಯಗಳನ್ನು ತಯಾರಿಸಲು ಇದನ್ನು ಇಷ್ಟಪಡುತ್ತಾರೆ. ದುರ್ಗಾ ಪೂಜೆಯ ಸಮಯದಲ್ಲಿ, ಹಲವು ಸಾಂಪ್ರದಾಯಿಕ ಊಟಗಳು ಈ ಅಕ್ಕಿ ಇಲ್ಲದೆ ಅಪೂರ್ಣವೆಂದು ಭಾವಿಸಲಾಗುತ್ತದೆ.
3. ಮಣಿಪುರದ ಚಕ್-ಹಾವೊ ಕಪ್ಪು ಅಕ್ಕಿ
ಚಕ್-ಹಾವೊ ಕಪ್ಪು ಅಕ್ಕಿ ಮಣಿಪುರದ ವಿವಿಧ ಪ್ರಬೇಧದ ಅಕ್ಕಿಗಳಲ್ಲಿ ಇದು ಒಂದು. ಅಡುಗೆ ಮಾಡುವ ಮೊದಲು, ಇದರ ಧಾನ್ಯಗಳು ಗಾಢ ಕಪ್ಪು ಬಣ್ಣದಲ್ಲಿರುತ್ತವೆ. ಒಮ್ಮೆ ಬೇಯಿಸಿದ ನಂತರ ಅವು ದಟ್ಟವಾದ ನೇರಳೆ ಬಣ್ಣಕ್ಕೆ ತಿರುಗುತ್ತವೆ. ಶತಮಾನಗಳಿಂದಲೂ ಈ ಅಕ್ಕಿಯನ್ನು ರಾಜಮನೆತನದವರು ಮತ್ತು ವಿಶೇಷ ಸಂದರ್ಭಗಳಲ್ಲಿ ಮಾತ್ರ ಬಳಸಲಾಗುತ್ತಿತ್ತು, ಅಷ್ಟು ಮೌಲ್ಯಯುತವೆಂದು ಪರಿಗಣಿಸಲಾಗಿತ್ತು. ಇದು ಸ್ವಲ್ಪ ಸಿಹಿ ಮತ್ತು ಅಡಿಕೆಯ ರುಚಿ ಹೊಂದಿದ್ದು, ಸೌಮ್ಯವಾದ ಆದರೆ ಆಹ್ಲಾದಕರ ಪರಿಮಳ ಬೀರುತ್ತದೆ. ಸಾಮಾನ್ಯ ಅಕ್ಕಿಗಿಂತ ಬೇಯಿಸಲು ಹೆಚ್ಚು ಸಮಯ ತೆಗೆದುಕೊಂಡರು ಈ ಅಕ್ಕಿ ತಿನ್ನುವಾಗ ಹಿತಕರ ಅನ್ನಿಸುತ್ತದೆ.
ಇಲ್ಲಿ ಕಪ್ಪು ಧಾನ್ಯಗಳು ನೈಸರ್ಗಿಕವಾಗಿದ್ದು, ಅವುಗಳಿಂದ ನೇರಳೆ ಬಣ್ಣದ ಸಿಹಿತಿಂಡಿ ಉತ್ಪಾದಿಸಲಾಗುತ್ತದೆ. ಪುಡಿಂಗ್‌ಗಳು ಮತ್ತು ಹಬ್ಬದ ಊಟಗಳಲ್ಲಿಯೂ ಬಳಸಲಾಗುತ್ತದೆ. ಮಣಿಪುರದಲ್ಲಿ ಬಹಳ ಜನಪ್ರಿಯವಾಗಿ ಅಕ್ಕಿ ಇದಾಗಿದೆ. 2020ರಲ್ಲಿ ಚಕ್-ಹಾವೊಗೆ GI ಟ್ಯಾಗ್ ನೀಡಲಾಗಿದೆ.
4. ತಮಿಳುನಾಡಿನ ಮಾಪ್ಪಿಲ್ಲೈ ಸಾಂಬಾ
ಈ ಕೆಂಪು ಅಕ್ಕಿಯು ಭಾರತದ ಅತ್ಯಂತ ಆಕರ್ಷಕ ಅಕ್ಕಿಗಳಲ್ಲಿ ಒಂದು. 'ಮಾಪ್ಪಿಲ್ಲೈ ಸಾಂಬಾ' ಎಂದರೆ "ವರನ ಅಕ್ಕಿ" ಎಂಬರ್ಥ. ಬಹಳ ಹಿಂದಿನ ತಮಿಳು ಸಂಸ್ಕೃತಿಯಲ್ಲಿ, ವರರು ಮದುವೆಗೂ ಮುನ್ನ ತಮ್ಮ ಶಕ್ತಿಯನ್ನು ದೈಹಿಕ ಸವಾಲುಗಳ ಮೂಲಕ ಸಾಬೀತುಪಡಿಸಬೇಕಾಗಿತ್ತು. ಈ ಅಕ್ಕಿ ಅವರಿಗೆ ತ್ರಾಣ ಮತ್ತು ಶಕ್ತಿಯನ್ನು ನೀಡುತ್ತದೆ ಎಂದು ನಂಬಲಾಗಿದೆ. ಇದರ ಧಾನ್ಯಗಳು ಕೆಂಪು-ಕಂದು ಬಣ್ಣದ್ದಾಗಿದ್ದು, ಹೊಳಪುಳ್ಳ ಬಿಳಿ ಅಕ್ಕಿಗಿಂತ ಹೆಚ್ಚು ಗಟ್ಟಿಯಾಗಿರುತ್ತವೆ. ಈ ಅಕ್ಕಿ ಸಹ ಬೇಯಿಸಲು ಹೆಚ್ಚು ಸಮಯ ತೆಗೆದುಕೊಳ್ಳುತ್ತದೆ. ಇದನ್ನು ಸಾಮಾನ್ಯವಾಗಿ ದೋಸೆ ಹಿಟ್ಟು, ಗಂಜಿ, ಇಡ್ಲಿಗಳು ಮತ್ತು ಸಾಂಪ್ರದಾಯಿಕ ತಮಿಳು ಊಟಗಳಲ್ಲಿ ಬಳಸಲಾಗುತ್ತದೆ.
5. ಉತ್ತರ ಪ್ರದೇಶದ ಕಲಾನಮಕ್
ಕಲಾನಮಕ್ ಭಾರತದ ಅತ್ಯಂತ ಹಳೆಯ ಅಕ್ಕಿ ಪ್ರಭೇದಗಳಲ್ಲಿ ಒಂದಾಗಿದ್ದು, ಭಗವಾನ್ ಬುದ್ಧನೊಂದಿಗೆ ಈ ಅಕ್ಕಿಯ ಸಂಬಂಧ ಬೆಸೆದಿದೆ ಎಂಬ ದಂತಕಥೆ ಇದೆ. ಅದರ ಪ್ರಕಾರ ಬುದ್ಧನು ಸುಮಾರು 2,500 ವರ್ಷಗಳ ಹಿಂದೆ ಸ್ಥಳೀಯ ರೈತರಿಗೆ ಇದರ ಬೀಜಗಳನ್ನು ಉಡುಗೊರೆಯಾಗಿ ನೀಡಿದ್ದ ಇದರ ಹೆಸರಿನ ಅರ್ಥ "ಕಪ್ಪು ಉಪ್ಪು", ಇದು ಅಕ್ಕಿಯ ಹೊರ ಸಿಪ್ಪೆಯ ಗಾಢ ಬಣ್ಣವನ್ನು ಸೂಚಿಸುತ್ತದೆ. ಬೇಯಿಸಿದ ಬಳಿಕ ನೈಸರ್ಗಿಕ ಪರಿಮಳವನ್ನು ಹೊರಸೂಸುತ್ತದೆ. ರುಚಿ ಸೂಕ್ಷ್ಮ ಮತ್ತು ಸ್ವಲ್ಪ ಸಿಹಿಯಾಗಿರುತ್ತದೆ. ಪುಲಾವ್ ಮತ್ತು ಸರಳ ಅಕ್ಕಿ ಭಕ್ಷ್ಯಗಳಿಗೆ ಸೂಕ್ತವಾಗಿದೆ. 2012ರಲ್ಲಿ, ಸರ್ಕಾರವು ಈ ಪರಿಮಳಯುಕ್ತ ಅಕ್ಕಿ ವಿಧಕ್ಕೆ GI ಟ್ಯಾಗ್ ನೀಡಿ ಅದರ ರಕ್ಷಣೆಗೆ ಮುಂದಾಗಿದೆ.
6. ಕೇರಳದ ಜಾವರ (Njavara)
ಕೇರಳದಲ್ಲಿ ಈ ಅಕ್ಕಿಗೆ ಪ್ರಾಚೀನ ಇತಿಹಾಸ ಇದೆ. 2,000 ವರ್ಷಗಳಿಂದಲೂ ಈ ಅಕ್ಕಿಯನ್ನು ಬಳಸಲಾಗುತ್ತದೆ. ಇದರ ಧಾನ್ಯಗಳು ಕೆಂಪು ಬಣ್ಣದ್ದಾಗಿದ್ದು, ಮಣ್ಣಿನ ಮತ್ತು ಗಿಡಮೂಲಿಕೆಯಂತಹ ಪರಿಮಳ ಹೊಂದಿರುತ್ತವೆ. ಸಾಮಾನ್ಯ ಅಕ್ಕಿಗೆ ಹೋಲಿಸಿದರೆ ಇದರ ರುಚಿ ಬಲವಾಗಿರುತ್ತದೆ. ಸ್ವಲ್ಪ ಕಹಿಯಾಗಿರುತ್ತದೆ, ಅದಕ್ಕಾಗಿಯೇ ಕೆಲವರು ಇದನ್ನು 'ಅಭ್ಯಾಸವಾಗುವ ರುಚಿ' (acquired taste) ಎಂದು ಪರಿಗಣಿಸುತ್ತಾರೆ. ಜಾವರ ಅಕ್ಕಿಯನ್ನು ಹೆಚ್ಚಾಗಿ ಅನಾರೋಗ್ಯ ಪೀಡಿತರಿಗೆ ಅರೋಗ್ಯ ಸುಧಾರಿಸಲು ಬಳಸಲಾಗುತ್ತದೆ. ಇತರ ಸಾಮಾನ್ಯ ಅಕ್ಕಿ ಪ್ರಭೇದಗಳಂತೆ ಇದು ನಿತ್ಯ ಬಳಕೆ ಆಗುವುದಿಲ್ಲ. ಆಯುರ್ವೇದ ಗಂಜಿ ಮತ್ತು ಗುಣಪಡಿಸುವ ಆಹಾರಗಳಿಗೆ ಇದನ್ನು ಹೆಚ್ಚು ಬಳಸಲಾಗುತ್ತದೆ.
7. ಮಹಾರಾಷ್ಟ್ರದ ಅಂಬೆಮೋಹರ್
"ಅಂಬೆಮೋಹರ್" ಇದು ಮಹಾರಾಷ್ಟ್ರ ಪ್ರಮುಖ ಅಕ್ಕಿಯಾಗಿದೆ. "ಮಾವಿನ ಹೂವಿನ ಪರಿಮಳ" ಎಂಬರ್ಥ ನೀಡುತ್ತದೆ. ಸಣ್ಣ ಧಾನ್ಯ ಇದಾಗಿದ್ದು, ಹೂವಿನಂತಹ ಸುವಾಸನೆಯನ್ನು ಹೊರ ಸೂಸುತ್ತದೆ. ಇದನ್ನು ಸಾಮಾನ್ಯವಾಗಿ ಮಸಾಲೆ ಭಾತ್, ಭಟಾಚಿ ಪೇಜ್ ಮತ್ತು ಮಹಾರಾಷ್ಟ್ರದ ಇತರೆ ಹಬ್ಬದ ಊಟಗಳಲ್ಲಿ ಬಳಸಲಾಗುತ್ತದೆ. ಈ ಅಕ್ಕಿಗೂ ಕೇಂದ್ರ ಸಕಾ್ರ GI-ಟ್ಯಾಗ್ ನೀಡಿದೆ. ಆದರೆ ಇದರ ಬಗ್ಗೆ ಹೆಚ್ಚಿನ ಜನರಿಗೆ ಮಾಹಿತಿ ಇಲ್ಲ ಎಂಬುದು ವಿಪರ್ಯಾಸ.
8. ತಮಿಳುನಾಡಿನ ಕವುನಿ
ತಮಿಳುನಾಡಿನಲ್ಲಿ 'ಕವುನಿ' ಅಕ್ಕಿಯನ್ನು ಒಂದು ಕಾಲದಲ್ಲಿ ರಾಜಮನೆತನಕ್ಕೆ ಮಾತ್ರ ಮೀಸಲಾಗಿದ್ದ ಪ್ರಮುಖ ಧಾನ್ಯವಾಗಿತ್ತು. ಇದನ್ನು ತುಂಬಾ ಅಮೂಲ್ಯವೆಂದು ಪರಿಗಣಿಸಲಾಗಿದ್ದರಿಂದ ಸಾಮಾನ್ಯ ಜನರಿಗೆ ಇದನ್ನು ತಿನ್ನಲು ಅನುಮತಿ ಇರಲಿಲ್ಲ. ಈ ಕಪ್ಪು ಅಕ್ಕಿಯು ಹೆಚ್ಚು ರುಚಿಕರವಾಗಿದ್ದು, ಅಗಿಯಲು ಹಿತಕರವಾಗಿರುತ್ತದೆ. ನಿಧಾನವಾಗಿ ಬೇಯಿಸಲಾಗುವ ಈ ಅಕ್ಕಿಗೆ ಬೆಲ್ಲ ಹಾಗೂ ಕೊಬ್ಬರಿ ಬೆರೆಸಿ ಸಿಹಿ ತಿನಿಸುಗಳಾಗಿ ಮಾಡಲಾಗುತ್ತದೆ. ಇದರಲ್ಲಿ 'ಕವುನಿ ಅರಿಸಿ ಸ್ವೀಟ್' ಎಂಬ ಹಬ್ಬದ ಸಿಹಿತಿಂಡಿ ಅತ್ಯಂತ ಪ್ರಸಿದ್ಧವಾಗಿದೆ. ನಾವು ಬಳಸುವ ಹಗುರವಾದ, ತುಪ್ಪುಳಿನಂತಿರುವ ಅಕ್ಕಿಗಿಂತ ಭಿನ್ನವಾಗಿ, ಕವುನಿ ದಟ್ಟ ಮತ್ತು ಆಕರ್ಷಕವಾಗಿ ಕಾಣುತ್ತದೆ.















Click it and Unblock the Notifications