Jhanvi: ಎಚ್‌ಡಿ ಕುಮಾರಸ್ವಾಮಿ ಸಮ್ಮುಖದಲ್ಲಿ JDS ಸೇರಿದ ಬಿಗ್‌ಬಾಸ್ ಖ್ಯಾತಿಯ ಜಾನ್ವಿ
ಬೆಂಗಳೂರು: ಟಿವಿ ನಿರೂಪಕಿಯಾಗಿ, ರಿಯಾಲಿಟಿ ಶೋಗಳ ಮೂಲಕ ಜನಪ್ರಿಯತೆ ಪಡೆದಿರುವ ಬಿಗ್ ಬ್ಯಾಸ್ ಖ್ಯಾತಿಯ ಜಾನ್ವಿ (Jhanvi) ಅವರು ಇದೀಗ ರಾಜಕೀಯ ಪ್ರವೇಶಿಸಿದ್ದಾರೆ. ಇಂದು ಭಾನುವಾರ ಕೇಂದ್ರ ಸಚಿವ ಎಚ್‌ಡಿ ಕುಮಾರಸ್ವಾಮಿ ನೇತೃತ್ವದಲ್ಲಿ ಅವರು ಜಡಿಎಸ್ ಪಕ್ಷಕ್ಕೆ ಅಧಿಕೃತ ಸೇರ್ಪಡೆಯಾಗಿದ್ದಾರೆ. ಈ ಮೂಲಕ ರಾಜಕೀಯದಲ್ಲಿ ತಮ್ಮ ಅದೃಷ್ಟ ಪರೀಕ್ಷೆಗೆ ಮುಂದಾಗಿದ್ದಾರೆ ಎನ್ನಲಾಗಿದೆ.
ಬೆಂಗಳೂರಿನ ಜೆಪಿ ಭವನದಲ್ಲಿ ನಡೆದ ಇಂದಿನ ಕಾರ್ಯಕ್ರಮದಲ್ಲಿ ಜೆಡಿಎಸ್ (JDS) ಭಾವುಟ ನೀಡಿ ಜಾನ್ವಿ ಅವರನ್ನು ಪಕ್ಷಕ್ಕೆ ಕೇಂದ್ರ ಬೃಹತ್ ಕೈಗಾರಿಕೆ ಮತ್ತು ಉಕ್ಕು ಖಾತೆ ಸಚಿವ ಎಚ್.ಡಿ. ಕುಮಾರಸ್ವಾಮಿ ಅವರು ಬರಮಾಡಿಕೊಂಡರು. ರಾಜಕೀಯಕ್ಕೆ ಎಂಟ್ರಿ ಕೊಟ್ಟಿರುವ ಜಾನ್ವಿ ಅವರು ಇಲ್ಲಿಂದ ಹೊಸ ಇನ್ನಿಂಗ್ಸ್ ಆರಂಭಿಸಿದ್ದಾರೆ.

ಒಂದು ಕಡೆ ಪಕ್ಷವನ್ನು ರಾಜ್ಯಾದ್ಯಂತ ಬಲಪಡಿಸಲು ಜೆಡಿಎಸ್ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ನೇತೃತ್ವದಲ್ಲಿ ಸಂಘಟನೆ ಮಾಡಲಾಗುತ್ತಿದೆ. ಇದರ ನಡುವೆ ಮಹಿಳಾ ಘಟಕದ ಶಕ್ತಿ ಹೆಚ್ಚಿಸಲು ಕುಮಾರಸ್ವಾಮಿ ಅವರು ಒಂದಷ್ಟು ಯೋಜನೆಗಳನ್ನು ರೂಪಿಸಿದ್ದಾರೆ. ಈ ಹೊತ್ತಿನಲ್ಲಿ ಟಿವಿ ಶೋ, ರಿಯಾಲಿಟಿಗಳ ಮೂಲಕ ಜನಪ್ರಿಯತೆಗೆ ಪಾತ್ರರಾಗಿದ್ದ ಜಾನ್ವಿ ಅವರು ಜೆಡಿಎಸ್ ಪಕ್ಷ ಸೇರಿದ್ದಾರೆ.
ಚಿತ್ರರಂಗ, ರಾಜಕೀಯದಲ್ಲಿ ಸೆಲೆಬ್ರೆಟಿಗಳು ಸಕ್ರಿಯ
ರಾಜಕೀಯ ಮತ್ತು ಚಿತ್ರರಂಗ ಒಂದೇ ನಾಣ್ಯದ ಎರಡು ಮುಖದಂತಿದ್ದು, ಎರಡು ಕ್ಷೇತ್ರದಲ್ಲಿ ಛಾಪು ಮೂಡಿಸಿದವರು ಇದ್ದಾರೆ. ಒಂದು ಕ್ಷೇತ್ರದಲ್ಲಿ ಸೋತರು ಇನ್ನೊಂದು ಕ್ಷೇತ್ರದಲ್ಲಿ ಅದೃಷ್ಟ ಪರೀಕ್ಷೆಯಲ್ಲಿ ಗೆದ್ದವರಿದ್ದಾರೆ. ಇದು ಕರ್ನಾಟಕಕ್ಕಿಂತ ಹೆಚ್ಚಾಗಿ ತಮಿಳುನಾಡಿಗೆ ಸೂಕ್ತವೆನಿಸುತ್ತದೆ. ಕರ್ನಾಟಕದಲ್ಲೂ ಹಿರಿಯ ನಟರು, ನಟಿಯರು ಇಂದಿಗೂ ಚಿತ್ರಗಳ ನಟನೆ ಜೊತೆ ಜೊತೆಗೆ ರಾಜಕೀಯದಲ್ಲೂ ಸಕ್ರಿಯರಾಗಿದ್ದಾರೆ.
ಉದಾಹರಣೆಗೆ ನೋಡುವುದಾದರೆ ಬಿಸಿ ಪಾಟೀಲ್, ಜಗ್ಗೇಶ್, ತಾರಾ ಅನುರಾಧ, ರಮ್ಯಾ, ಉಮಾಶ್ರೀ, ಸುಮಲತಾ ಅಂಬರೀಶ್ ಹೀಗೆ ಅನೇಕರು ಎರಡು ರಂಗದಲ್ಲೂ ಖ್ಯಾತಿ ಪಡೆದಿದ್ದಾರೆ. ಇವರ ಪೈಕಿ ಉಪೇಂದ್ರ ಅವರು ವಿಶೇಷವಾಗಿ ನಿಲ್ಲುತ್ತಾರೆ. ಕಾರಣ ಅವರು ಸಿನಿಮಾ ಜೊತೆ ಜೊತೆಗೆ 'ಪ್ರಜಾಕೀಯ' ಪಕ್ಷ ಕಟ್ಟಿ ಚುನಾವಣೆ ಎದುರಿಸಿದ್ದರು. ಇದೀಗ ನಿರೂಪಣೆ, ನಟನೆ, ರಿಯಾಲಿಟಿ ಶೋಗಳಲ್ಲಿ ಮಿಂಚಿದ್ದ ನಟಿ ಜಾನ್ವಿ ಅವರು ಜೆಡಿಎಸ್ ಮೂಲಕ ರಾಜಕೀಯ ಪ್ರವೇಶಿಸಿದ್ದಾರೆ. ಇದು ಮುಂದೆ ಅವರ ಪಾತ್ರ, ಜವಾಬ್ದಾರಿ ನಿರ್ವಹಣೆ, ಚುನಾವಣೆ ಸಂಬಂಧ ವಿಷಯಗಳ ಮೇಲೆ ಹೆಚ್ಚಿನ ಕೂತೂಹಲ ಹೆಚ್ಚುವಂತೆ ಮಾಡಿದೆ.













Click it and Unblock the Notifications