ರಾಜೀನಾಮೆ: ಮಾಜಿಯಾಗಿ ಶಾಸಕರು ಕಳ್ಕೊಂಡಿದ್ದೇನು?
ಬೆಂಗಳೂರು, ಫೆ.5: ಮೊನ್ನೆ ಅಷ್ಟೆಲ್ಲಾ ರಂಪಾಟ ಮಾಡಿ ತಮ್ಮ ಶಾಸಕ ಸ್ಥಾನಗಳಿಗೆ ರಾಜೀನಾಮೆ ನೀಡಿದರಲ್ಲ, ಅವರೂ ಸೇರಿದಂತೆ ಮಾಜಿಗಳಾಗುವ ಶಾಸಕರು ಕಳೆದುಕೊಂಡಿದ್ದೇನು ಎಂಬ ಪ್ರಶ್ನೆ ಹಾಕಿದರೆ ...
ಏನೂ ಇಲ್ಲ, ಎಲ್ಲ ಪಡೆದುಕೊಳ್ಳುವುದೇ ಆಗಿದೆ. ಇಲ್ಲಿ ಕಳೆದುಕೊಳ್ಳುವುದು ಆಯಾ ಕ್ಷೇತ್ರದ ಮಹಾನ್ ಜನತೆಯಷ್ಟೇ. ಅಬ್ಬಬ್ಬಾ ಅಂದರೆ ಆ ಮಾಜಿ ಶಾಸಕ ಮಹೋದಯರು ವಿಧಾನಸೌಧದಲ್ಲಿ ಸುಖಾಸೀನರಾಗುವ ಭಾಗ್ಯ ಕಳೆದುಕೊಂಡಿರಬಹುದು ಅಷ್ಟೇ.

ಈ ಮಾಜಿ ಅನಿಸಿಕೊಳ್ಳುವ ಘನ ಶಾಸಕರು (ಶಾಸಕಿಯರೂ) ಇದ್ದಾರಲ್ಲ ಅವರು ಪಡೆಯುವ ಸವಲತ್ತುಗಳನ್ನು ನೋಡಿದರೆ ಮತದಾರ ಕೈಕಟ್ಟಿ ಬಾಯ್ಮುಚ್ಚಿಕೊಂಡಿರುವುದು ಉತ್ತಮವೆನಿಸುತ್ತದೆ.
ಇದೇ ಬಿಜೆಪಿ ಸರಕಾರದ ಆಡಳಿತವಿದ್ದಾಗಲೇ ಪಕ್ಷಭೇದ ಮರೆತು ಇತ್ತೀಚೆಗೆ Karnataka Legislature Salaries, Pensions and Allowances Act, 1956 ಎಂಬುದನ್ನು ಪಾಸು ಮಾಡಿಸಿಕೊಂಡರಲ್ಲ, ಅದರಿಂದ ಈ ಮಾಜಿಗಳೆನಿಸಿಕೊಳ್ಳುವ ಶಾಸಕರ ಬದುಕು ಹಸನಾಗಿದೆ.
ಇದರಿಂದ ಕರ್ನಾಟಕದ ಮಾಜಿ ಶಾಸಕರು ಇಡೀ ದೇಶದಲ್ಲೇ ಹೆಚ್ಚು ಸಂಭಾವನೆ ಪಡೆಯುವವರು. ಸೋ, ಈ ಸಂಭಾವಿತ ಶಾಸಕರು ಪ್ರತೀ ತಿಂಗಳು 1.4 ಲಕ್ಷ ರೂ. ಜತೆಗೆ ಮೇಲೋಗರ ಎಂಬಂತೆ ಲೆಕ್ಕವಿಲ್ಲದಷ್ಟು ವೈದ್ಯಕೀಯ ಚಿಕಿತ್ಸಾ ವೆಚ್ಚ ಪಡೆಯಲು ಅರ್ಹರು. ಇನ್ನೂ ಏನಪ್ಪಾ ಅಂದರೆ ಪ್ರವಾಸ ಭತ್ಯೆ ಲೆಕ್ಕದಲ್ಲಿ 1 ಲಕ್ಷ ರೂ. ಪಡೆಯಬಹುದು.
ಇನ್ನು ಅಕಸ್ಮಾತ್ ಈ ಮಾಜಿ ಶಾಸಕರು ಇಹಲೋಕದ ವ್ಯಾಪಾರ ಮುಗಿಸಿದರೆ ಅವರ ಮನೆಯವರು ಶೇ. 50ರಚ್ಟು ಪಿಂಚಣಿ ಪಡೆಯುತ್ತಾರೆ. ಜತೆಗೆ, ಅನ್ ಲಿಮಿಟೆಡ್ ವೈದ್ಯಕೀಯ ವೆಚ್ಚ.
ಸುಮ್ಮನೆ ಹಾಗೇ ಲೆಕ್ಕ ಹಾಕಿದಾಗ (ಇಂದು ಸ್ಪೀಕರ್ ಬೋಪಯ್ಯ ಅಂಕಿತ ಹಾಕಿದ 13 ಶಾಸಕರನ್ನೂ ಗಣನೆಗೆ ತೆಗೆದುಕೊಂಡರೆ) ಪ್ರಸ್ತುತ ಕರ್ನಾಟಕದಲ್ಲಿ 517 ಮಾಜಿ ಶಾಸಕರು ರಾರಾಜಿಸುತ್ತಿದ್ದಾರೆ. ಇನ್ನು ಒಂದೆರಡು ತಿಂಗಳಲ್ಲಿ ಇವರ ಸಂಖ್ಯೆ ಇನ್ನೂರಷ್ಟು ವೃದ್ಧಿಸುತ್ತದೆ ಎಂಬುದನ್ನು ಮರೆಯಬೇಡಿ. ಈ ಅಷ್ಟೂ ಮಂದಿ ಮಾಜಿ ಶಾಸಕ ಸೌಲಭ್ಯವನ್ನು ಅನುಭವಿಸಬಹುದು. ಇದರಿಂದ ಖಜಾನೆ ಕೋಟ್ಯಂತರದಲ್ಲಿ ಖಾಲಿಯಾಗುತ್ತದೆ ಅಷ್ಟೇ.












Click it and Unblock the Notifications