ಕುಮಾರಸ್ವಾಮಿಗೆ ಧನಂಜಯ್ ಕುಮಾರ್ ಎಚ್ಚರಿಕೆ

ನಗರದ ಕೆಜೆಪಿ ಕಚೇರಿಯಲ್ಲಿ ಗುರುವಾರ(ಜ.31) ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಎಚ್.ಡಿ.ಕುಮಾರಸ್ವಾಮಿ ಮೊದಲಿನಿಂದಲೂ ಅನ್ಯ ಪಕ್ಷಗಳ ವಿಚಾರದಲ್ಲಿ ಮೂಗು ತೂರಿಸುವ ಕೆಲಸ ಮಾಡುತ್ತಿದ್ದಾರೆ. ಕರ್ನಾಟಕ ಜನತಾ ಪಕ್ಷದ ವಿಷಯದಲ್ಲಿಯೂ ಇದೇ ಕೆಲಸ ಮಾಡುತ್ತಿದ್ದಾರೆ.
ಸದಸ್ಯರ ನಡುವೆ ಗೊಂದಲ ಸೃಷ್ಟಿಸುವ ಕೆಲಸ ಮಾಡುತ್ತಿದ್ದಾರೆ. ಇದನ್ನು ಮುಂದುವರಿಸಿದರೆ ತಕ್ಕ ತಿರುಗೇಟು ನೀಡಬೇಕಾಗುತ್ತದೆ. ಅವರ ಅಕ್ರಮ ಅವ್ಯವಹಾರಗಳನ್ನು ಬಯಲಿಗೆ ತರಬೇಕಾಗುತ್ತದೆ ಎಂದು ಧನಂಜಯ್ ಕುಮಾರ್ ಹೇಳಿದರು.
ಪ್ರಸನ್ನರಿಗೆ ಎಚ್ಡಿಕೆ ಬೆಂಬಲ: ಕೆಜೆಪಿ ಸಂಸ್ಥಾಪಕ ಪ್ರಸನ್ನಕುಮಾರ್‌ಗೆ ನಾನು ಮತ್ತು ಯಡಿಯೂರಪ್ಪ ಪುತ್ರ ಬಿ.ವೈ.ವಿಜಯೇಂದ್ರ ಜೀವ ಬೆದರಿಕೆ ಹಾಕಿದ್ದೇವೆ ಎಂಬ ಆರೋಪದಲ್ಲಿ ಯಾವುದೇ ಹುರುಳಿಲ್ಲ. ಪ್ರಸ್ತುತ ಪ್ರಸನ್ನಕುಮಾರ್ ಕುಮಾರಸ್ವಾಮಿಯ ಕಪಿಮುಷ್ಟಿಯಲ್ಲಿ ಸಿಲುಕಿದ್ದಾರೆ. ಅವರ ಆಣತಿಯಂತೆ ನಡೆದುಕೊಳ್ಳುತ್ತಿದ್ದಾರೆ. ಸುಳ್ಳು ಆರೋಪ ಮಾಡುತ್ತಿದ್ದಾರೆ ಎಂದು ಆಪಾದಿಸಿದರು.
ಯಡಿಯೂರಪ್ಪರ ವಿರುದ್ಧ ಪ್ರಸನ್ನಕುಮಾರ್ ಚುನಾವಣಾ ಆಯೋಗಕ್ಕೆ ಬರೆದ ಪತ್ರಗಳ ಪ್ರತಿಗಳು ಪತ್ರಕರ್ತರಿಗೆ ಕುಮಾರಸ್ವಾಮಿಯಿಂದ ಬೆಂಗಳೂರಿನ ಅತಿಥಿ ಗೃಹದಿಂದಲೇ ಬಿಡುಗಡೆಯಾಗಿದೆ. ಇದನ್ನು ಸ್ವತಃ ಪತ್ರಕರ್ತರೇ ನಮಗೆ ತಿಳಿಸಿದ್ದಾರೆ
ರಾಜ್ಯಪಾಲರಿಗೆ ಮನವಿ: 12 ಶಾಸಕರ ರಾಜೀನಾಮೆ ಹಿನ್ನೆಲೆಯಲ್ಲಿ ರಾಜ್ಯ ಬಿಜೆಪಿ ಸರ್ಕಾರ ಅಲ್ಪ ಮತಕ್ಕೆ ಕುಸಿದಿದೆ. ಸಾಂವಿಧಾನಿಕ ಬಿಕ್ಕಟ್ಟು ಸೃಷ್ಟಿಯಾಗಿದೆ. ಈ ಕೂಡಲೇ ರಾಜ್ಯಪಾಲ ಹಂಸರಾಜ್ ಭಾರದ್ವಾಜ್ ಮಧ್ಯಪ್ರವೇಶಿಸಬೇಕು ಎಂದು ಧನಂಜಯ್ ಕುಮಾರ್ ಒತ್ತಾಯಿಸಿದ್ದಾರೆ.
ಈಗಾಗಲೇ ಬಿಜೆಪಿಯ 12 ಶಾಸಕರು ರಾಜೀನಾಮೆ ನೀಡಿದ್ದಾರೆ. ಪ್ರಸ್ತುತ ಕಾಂಗ್ರೆಸ್‌ನ 71, ಜೆಡಿಎಸ್‌ನ 26, ಪಕ್ಷೇತರ ಏಳು ಸದಸ್ಯರಿದ್ದಾರೆ. ಬಿಎಸ್‌ಆರ್ ಪಕ್ಷದೊಂದಿಗೆ ಬಿಜೆಪಿಯ ಮೂವರು ಸದಸ್ಯರು ಗುರುತಿಸಿಕೊಂಡಿದ್ದಾರೆ. ಇದರಿಂದ ಸರಕಾರದ ಸಂಖ್ಯಾಬಲ 103ಕ್ಕೆ ಕುಸಿದಿದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಶಾಸಕರು ರಾಜೀನಾಮೆ ನೀಡುವ ಸಾಧ್ಯತೆಯಿದೆ ಎಂದು ತಿಳಿಸಿದರು.
ವಿಶ್ವಾಸ ಮತ ಸಾಬೀತು, ರಾಜ್ಯ ಸರಕಾರ ವಜಾಗೊಳಿಸುವಿಕೆ, ರಾಷ್ಟ್ರಪತಿ ಆಳ್ವಿಕೆ ಹೇರುವುದು ಸೇರಿದಂತೆ ಇದೇ ರೀತಿಯ ಕ್ರಮಕೈಗೊಳ್ಳಿ ಎಂದು ರಾಜ್ಯಪಾಲರಿಗೆ ಸಲಹೆ-ಸೂಚನೆ ನೀಡಲು ಹೋಗುವುದಿಲ್ಲ. ಬಹುಮತ ಕಳೆದುಕೊಂಡಿರುವ ಸರಕಾರದ ವಿರುದ್ಧ ಯಾವ ರೀತಿಯ ಕ್ರಮ ಬೇಕಾದರೂ ಕೈಗೊಳ್ಳಬಹುದು ಎಂದು ಪತ್ರಕರ್ತರ ಪ್ರಶ್ನೆಗಳಿಗೆ ಪ್ರತಿಕ್ರಿಯೆ ನೀಡಿದರು.
ಶಾಸಕರಿಂದ ಬಲವಂತವಾಗಿ ರಾಜೀನಾಮೆ ಕೊಡಿಸಲಾಗಿದೆ ಎಂಬ ಬಿಜೆಪಿಯ ಆರೋಪವನ್ನು ಅಲ್ಲಗಳೆದರು. ಇದು ಸತ್ಯಕ್ಕೆ ದೂರವಾದ ಆರೋಪವಾಗಿದೆ. ರಾಜೀನಾಮೆ ನೀಡಿದ ಯಾವೊಬ್ಬ ಶಾಸಕರು ಯಡಿಯೂರಪ್ಪ ತಮ್ಮಿಂದ ಬಲವಂತವಾಗಿ ರಾಜೀನಾಮೆ ಕೊಡಿಸಿದ್ದಾರೆ ಎಂದು ಹೇಳಿಲ್ಲ. ಈ ಕುರಿತಂತೆ ಪ್ರತಿಕ್ರಿಯೆ ನೀಡುವ ಅಗತ್ಯವೂ ಇಲ್ಲ ಎಂದು ತಿಳಿಸಿದರು.
ಒಂದೆಡೆ ಬಹುಮತ ಕಳೆದುಕೊಂಡು ಅತಂತ್ರ ಸ್ಥಿತಿಗೆ ತಲುಪಿರುವ ಬಿಜೆಪಿ ಸರಕಾರ ಮತ್ತೊಂದೆಡೆ ಬಜೆಟ್ ಮಂಡನೆ ಮಾಡಲು ಸಿದ್ಧತೆ ನಡೆಸುತ್ತಿರುವುದು ನಾಚಿಕೆಗೇಡಿನ ಸಂಗತಿಯಾಗಿದೆ ಎಂದು ಟೀಕಿಸಿದರು.
ಪ್ರಸ್ತುತ ಸಂದರ್ಭದಲ್ಲಿ ಸರಕಾರ ಬಜೆಟ್ ಮಂಡನೆ ಮಾಡಲು ಅವಕಾಶವೇ ಇಲ್ಲ. ಒಂದು ವೇಳೆ ಮಂಡನೆ ಮಾಡಿದರೂ ಬಜೆಟ್‌ಗೆ ಒಪ್ಪಿಗೆ ನೀಡಲು ಸರಕಾರವೇ ಇರುವುದಿಲ್ಲ. ಇದಕ್ಕೆ ಬದಲಾಗಿ ಲೇಖಾನುದಾನ ಮಾತ್ರ ಮಂಡಿಸಿ ಒಪ್ಪಿಗೆ ಪಡೆಯಬಹುದಾಗಿದೆ. ಅಧಿಕಾರದ ದಾಹ ಬಿಟ್ಟು ಸಂವಿಧಾನ ಎತ್ತಿ ಹಿಡಿಯುವ ಕೆಲಸವನ್ನು ಸರಕಾರ ಮಾಡಬೇಕು ಎಂದು ಮುಖ್ಯಮಂತ್ರಿ ಜಗದೀಶ್ ಶೆಟ್ಟರ್‌ಗೆ ಕಿವಿಮಾತು ಹೇಳಿದ್ದಾರೆ.


Click it and Unblock the Notifications
