ಸಾವು, ತೆರಿಗೆಯನ್ನು ತಪ್ಪಿಸಿಕೊಳ್ಳಲಾಗದು: ಬಿಗ್ ಬಿ
ನವದೆಹಲಿ,ಜ.9: ಕೌನ್ ಬನೇಗಾ ಕರೋಡ್ ಪತಿ ಎಂಬ ಯಶಸ್ವಿ ಕಾರ್ಯಕ್ರಮದ ಮೂಲಕ ಸ್ವತಃ ಕೋಟ್ಯಂತರ ರೂ ಬಾಚಿರುವ ಅಮಿತಾಭ್ ಬಚ್ಚನ್ ಯಾನೆ ಬಿಗ್ ಬಿ ಗೆ ಆದಾಯ ತೆರಿಗೆ ಪಾವತಿಸುವುದು ಅಂದರೆ ಅದು ಸುಖಾಸುಮ್ಮನೆ ಸಾವನ್ನು ಮೈಮೇಲೆ ಎಳೆದುಕೊಂಡ ಹಾಗಂತೆ!
ಹೌದು ಕೆಬಿಸಿಯಲ್ಲಿ ಆದಾಯ ತೆರಿಗೆ ಪಾವತಿಸುವುದು ಆದ್ಯ ಕರ್ತವ್ಯ ಎಂಬುದೂ ಸೇರಿದಂತೆ ಅನೇಕ 'ಉಚಿತ' ಸಲಹೆಗಳನ್ನು ನೀಡುವ ಬಿಗ್ ಬಿ ಗೆ, ಆದಾಯ ತೆರಿಗೆ ಪಾವತಿ ಎನ್ನುವುದು ದೊಡ್ಡ ರಗಳೆಯಾಗಿ ಪರಿಣಮಿಸಿರುವುದು ನಿಜಕ್ಕೂ ಸೋಜಿಗವೇ ಸರಿ. ಅಂದಹಾಗೆ ಅಮಿತಾಭ್ ಹೀಗೆ ತೆರಿಗೆಗೆ ಕಳ್ಳಾಟ ಬಿದ್ದಿರುವುದು ಇದೇ ಮೊದಲಲ್ಲ.

ಏನಾಯ್ತು ಅಂದರೆ 'ಸ್ವಾಮಿ ಅಮಿತಾಭ್, 2001-12 ನೇ ಸಾಲಿನಲ್ಲಿ ತಾವು 1.66 ಕೋಟಿ ರೂ. ಆದಾಯ ತೆರಿಗೆ ಪಾವತಿಸಬೇಕಿತ್ತು. ಆದರೆ ಅದರ ಬಗ್ಗೆ ಇದುವರೆಗೂ ತಾವು ಹರಿ-ಶಿವ ಅಂದಿಲ್ಲ. ಸ್ವಲ್ಪ ಕಚೇರಿ ಕಡೆ ಬಂದು ಹೋಗಿ' ಎಂದು ಗಾಢ ನಿದ್ದೆಯಿಂದೆದ್ದ ಆದಾಯ ತೆರಿಗೆ ಇಲಾಖೆಯು ಬಿಗ್ ಬಿ ಗೆ ನೋಟಿಸ್ ಜಾರಿಗೊಳಿಸಿತ್ತು. ಆದರೆ ಲಂಬೂ ಬಿಗ್ ಬಿ ಅದಕ್ಕೂ ಬಗ್ಗಲಿಲ್ಲ.
ಹೀಗೆ ನ್ಯಾಯೋಚಿತ ತೆರಿಗೆ ಕಟ್ಟಲು ಕಳ್ಳಾಟವಾಡುತ್ತಿದ್ದ ಬಿಗ್ ಬಿಯನ್ನು ಗದರಿಕೊಂಡ ಸುಪ್ರೀಂ ಕೋರ್ಟ್, ಇಲಾಖೆಗೆ ಧೈರ್ಯ ತುಂಬುತ್ತಾ, ನಾನು ಹೇಳ್ದೆ ಅಂತ್ಹೇಳಿ ತೆರಿಗೆ ವಸೂಲಿ ಮಾಡಿಕೊಂಡು ಬನ್ನಿ ಎಂದು ಇಲಾಖೆಗೆ ಕಡಖ್ ಆದೇಶ ನೀಡಿತ್ತು.
ಸುಮಾರು ಹತ್ತು ವರ್ಷದಿಂದ ಹಾಗೂ ಹೀಗೂ ಕಾಲ ತಳ್ಳಿಕೊಂಡು ಬಂದಿದ್ದ ಬಿಗ್ ಬಿ ಗೆ ಸುಂಕದವನ ಮುಂದೆ ಸುಖ-ದುಃಖ ತೋಡಿಕೊಂಡು ಪ್ರಯೋಜನವಿಲ್ಲವೆನ್ನಿಸಿ ಸೀದಾ ಆದಾಯ ತೆರಿಗೆ ಇಲಾಖೆ ಕಚೇರಿ ಕಡೆ ತೆರಳಿದ್ದಾರೆ.
ಬುಧವಾರ ಈ ಬಗ್ಗೆ ಮಾತನಾಡಿರುವ ಅಮಿತಾಭ್ ಬಚ್ಚನ್, 'ಅಷ್ಟೂ ತೆರಿಗೆಯನ್ನು ಪಾವತಿಸಲು ನಾನು ಸಿದ್ಧವಾಗಿದ್ದೇನೆ. ಸಾವು ಎಂಬುದನ್ನು ಮನುಷ್ಯ ಹೇಗೆ ತಪ್ಪಿಸಿಕೊಳ್ಳಲು ಆಗುವುದಿಲ್ಲವೋ ಹಾಗೆಯೇ ಈ ತೆರಿಗೆ ಎಂಬುದೂ' ಎಂದು ಪ್ಯಾಲಿ ನಗೆ ನಕ್ಕಿದ್ದಾರೆ.
'ಜೀವನದಲ್ಲಿ 2 ಸಂಗತಿಗಳಿವೆ. ಒಂದು ಸಾವು, ಮತ್ತೊಂದು ತೆರಿಗೆ ಪಾವತಿ. ಎರಡನ್ನೂ ತಪ್ಪಿಸಿಕೊಳ್ಳಲು ಆಗದು. ಅದನ್ನು ಚುಕ್ತಾ ಮಾಡಲೇಬೇಕು' ಎಂದು ವೇದಾಂತಿಯಂತೆ ಅಮಿತಾಭ್ ಮಾತನಾಡಿದ್ದಾರೆ.
ಈ ಮಧ್ಯೆ, ಅಮಿತಾಭ್ ಏನು ಮಾಡಿದ್ದರೆಂದರೆ 'ನಾನು ಗಳಿಸಿರುವುದು ಕೇವಲ 3.23 ಕೋಟಿ ರೂಪಾಯಿಯಷ್ಟೇ. ಅಷ್ಟಕ್ಕೇ ನಾನು ತೆರಿಗೆ ಪಾವತಿಸುವೆ' ಎಂದು ಹಠ ಹಿಡಿದಿದ್ದರು. ಆದರೆ ಸುಂಕದವ ಮಾತ್ರ, 'ಅದೆಲ್ಲಾ ಕಳ್ಳ ಲೆಕ್ಕ. 2001-02ನೇ ಸಾಲಿನಲ್ಲಿ ಕೆಬಿಸಿಯಿಂದ ತಾವು ಗಳಿಸಿದ್ದು ಬರೋಬ್ಬರಿ 26 ಕೋಟಿ ರೂಪಾಯಿ. ಮುಲಾಜಿಲ್ಲದೆ ಅದಕ್ಕೆ ಟ್ಯಾಕ್ಸ್ ಕಟ್ಟಪ್ಪೋ' ಎಂದಿತ್ತು.
ನೀತಿ ಪಾಠವೇನು?: 'ದೊಡ್ಡವರ ಸಣ್ಣತನ' ಅಥವಾ 'ದೊಡ್ಡೋರ ವಿಷ್ಯ ನಮಗ್ಯಾಕೆ? ಅಪ್ಪಟ ಭಾರತೀಯನಾಗಿ ನಾನಂತೂ ನಿಯತ್ತಾಗಿ ಟ್ಯಾಕ್ಸ್ ಕಟ್ಟಿ ಬರುವೆ' ಎಂದು ಇಲಾಖೆ ಕಚೇರಿಯತ್ತ ಹೆಜ್ಜೆ ಹಾಕುವುದು. ಬಿಟ್ಟಿ ಸಲಹೆ: ದೇಶಬಾಂಧವರೇ ನೀವು ಕಟ್ಟಬೇಕಾದ ತೆರಿಗೆ ನೂರೋ/ಸಾವಿರವೋ ಅಥವಾ ಒಂದೆರಡು ಲಕ್ಷವೋ ಅಂತೂ ಅದನ್ನು ತಪ್ಪದೆ ಸಮಯಕ್ಕೆ ಸರಿಯಾಗಿ ಪಾವತಿಸಿ ಬನ್ನಿ.












Click it and Unblock the Notifications