ಧರ್ಮಸ್ಥಳ ಮಂಜುನಾಥ ಸ್ವಾಮಿಯನ್ನು ದಾರಿಗೆಳೆದ ಬಿಎಸ್ವೈ

ಧರ್ಮಸ್ಥಳದ ಮಂಜುನಾಥ ಸ್ವಾಮಿಯನ್ನು ಯಡಿಯೂರಪ್ಪ ದಾರಿಗೆಳೆದರು, ಅವರ ಇಂದಿನ ಸ್ಥಿತಿಗೆ ಧರ್ಮಸ್ಥಳ ಮಂಜುನಾಥನ ಶಾಪವೇ ಕಾರಣ ಎಂದು ಕುಮಾರಸ್ವಾಮಿ ಟೀಕಿಸಿದ್ದಾರೆ.
ಈ ನಾಡಿನ ಧರ್ಮ ದೇಗುಲ ಧರ್ಮಸ್ಥಳದ ಮಂಜುನಾಥ ಸ್ವಾಮಿ ದೇವಾಲಯ. ಯಡಿಯೂರಪ್ಪ ಮುಖ್ಯಮಂತ್ರಿಯಾಗಿದ್ದ ಸಮಯದಲ್ಲಿ ಆಣೆ ಪ್ರಮಾಣದ ವಿಚಾರದಲ್ಲಿ ಧರ್ಮಸ್ಥಳದ ಪವಿತ್ರ ದೇವಾಲಯವನ್ನು ತನ್ನ ಮಾತಿನ ಭರಾಟೆಯಲ್ಲಿ ದಾರಿಗೆಳೆದರು. ಇದಕ್ಕೆ ನನಗೆ ಬಹಳ ವಿಷಾದವಿದೆ ಎಂದು ಕುಮಾರಸ್ವಾಮಿ ಬೇಸರ ವ್ಯಕ್ತ ಪಡಿಸಿದ್ದಾರೆ.
ಬೆಳ್ತಂಗಡಿ ತಾಲೂಕಿನ ಕೊಕ್ಕಡದಲ್ಲಿ ಮಾತನಾಡುತ್ತಿದ್ದ ಕುಮಾರಸ್ವಾಮಿ, ನಾಡಿನ ಜನರ ತೆರಿಗೆಯ ದುಡ್ಡಿನಲ್ಲಿ ಧರ್ಮಸ್ಥಳದಲ್ಲಿ ಆಣೆ ಪ್ರಮಾಣಕ್ಕೆ ಬರುವಂತೆ ದಿನಪತ್ರಿಕೆಗಳಲ್ಲಿ ಜಾಹೀರಾತು ನೀಡಿ ನನಗೆ ಸವಾಲೆಸೆದರು.
ಧರ್ಮಸ್ಥಳ ಮಂಜುನಾಥ ಮತ್ತು ಅಣ್ಣಪ್ಪನ ಮೇಲೆ ನನಗೆ ಅಪಾರ ನಂಬಿಕೆಯಿದೆ. ಯಡಿಯೂರಪ್ಪ ನೀಡಿದ ಸವಾಲನ್ನು ನಾನು ಸ್ವೀಕರಿಸದೇ ಇದ್ದ ಪಕ್ಷದಲ್ಲಿ ರಾಜ್ಯದ ಜನತೆ ನನ್ನನ್ನು ತಪ್ಪಿತಸ್ಥರಾಗಿ ನೋಡುತ್ತಿದ್ದರು ಎಂದು ಕುಮಾರಸ್ವಾಮಿ ಹೇಳಿದ್ದಾರೆ.
ಧರ್ಮಸ್ಥಳದಲ್ಲಿ ಅಂದು ಏನು ನಡೆಯಿತು, ಮಂಜುನಾಥನಿಗೆ ತಪ್ಪು ಕಾಣಿಕೆ ಹಾಕಿ ಯಡಿಯೂರಪ್ಪ ನಗೆಪಟಾಲಿಗೆ ಗುರಿಯಾಗಿದ್ದು ನಿಮಗೆಲ್ಲಾ ತಿಳಿದಿರುವ ವಿಚಾರ.
ಕ್ಷೇತ್ರದಲ್ಲಿ ಸಮರ್ಥ ಅಭ್ಯರ್ಥಿಯನ್ನು ಕಣಕ್ಕಿಳಿಸುತ್ತೇನೆ, ಜೆಡಿಎಸ್ ಪಕ್ಷಕ್ಕೆ ಈ ಬಾರಿ ಮತ ನೀಡಿ ರಾಜ್ಯದಲ್ಲಿ ಉತ್ತಮ ಆಡಳಿತ ನೀಡುತ್ತೇನೆ ಎಂದು ಕುಮಾರಸ್ವಾಮಿ ಈ ಸಂದರ್ಭದಲ್ಲಿ ಮತದಾರರಿಗೆ ಭರವಸೆ ನೀಡಿದ್ದಾರೆ.












Click it and Unblock the Notifications