ಬೆಂಗಳೂರು: ಕೆಜಿ ಶಿಕ್ಷಣಕ್ಕೆ ಪಾಲಕರ ಮಣಗಟ್ಟಲೆ ರಶ್

ಇದಕ್ಕೆ ಹಳ್ಳಿ-ದಿಳ್ಳಿ ಅಂತೇನೂ ಇಲ್ಲ. ರಾಜಧಾನಿ ಬೆಂಗಳೂರು ಸೇರಿದಂತೆ ಎಲ್ಲ ಕಡೆಗಳಲ್ಲೂ ಇದೇ ಪರಿಸ್ಥಿತಿ. ಉದಾಹರಣೆಗೆ, St Joseph's Boys High School ವಿಷಯವನ್ನೇ ತೆಗೆದುಕೊಳ್ಳಿ. ಈ ಪ್ರತಿಷ್ಠಿತ ಶಾಲೆಯಲ್ಲಿ ನನ್ನ ಮಗುವಿಗೊಂದು ಸೀಟು ಸಿಗಲಪ್ಪಾ ಎಂದು ಎಷ್ಟೋ ತಾಯಂದಿರು ದೇವರಲ್ಲಿ ಪ್ರಾರ್ಥಿಸುವುದುಂಟು. ಇನ್ನು ಅಪ್ಪ ಅನಿಸಿಕೊಂಡವರಂತೂ ಚಳಿ-ಗಾಳಿ ಅನ್ನದೇ ಅಕ್ಷರಶಃ ಸ್ಕೂಲು ಮುಂದಿನ ಬೀದಿಯಲ್ಲೇ ಬಿಡಾರ ಹೂಡಿಬಿಡುತ್ತಾರೆ.
ಪ್ರತಿ ವರ್ಷದಂತೆ ನಿನ್ನೆ ಶುಕ್ರವಾರವೂ ಹಾಗೆಯೇ ಆಗಿದೆ. ಮಧ್ಯಾಹ್ನದಿಂದಲೇ ಅಪ್ಪಂದಿರು ಸೆಂಟ್ ಜೋಸೆಫ್ಸ್ ಸ್ಕೂಲ್ ಮುಂದೆ ಠಳಾಯಿಸಿದ್ದಾರೆ. ಮಧ್ಯಾಹ್ನದ ಬಿಸಿಲು, ರಾತ್ರಿಯ ಚಳಿಯನ್ನು ಲೆಕ್ಕಿಸದೆ, ಮಕ್ಕಳ ಶಿಕ್ಷಣದ ಲೆಕ್ಕಾಚಾರ ಹಾಕುತ್ತಾ ಅಪ್ಪಂದಿರು ನಿದ್ದೆಗೆಟ್ಟು ತಮ್ಮ ಮಕ್ಕಳ ಭವ್ಯ ಭವಿಷ್ಯದ ಕನಸು ಕಾಣುತ್ತಿದ್ದಾರೆ.
ಸದ್ಯಕ್ಕೆ ಈ ಪೋಷಕರ ಜೀವನದ ಏಕೈಕ ಆಸೆಯೆಂದರೆ ತನ್ನ ಮಗುವಿಗೆ LKG / UKGಗೆ ಒಂದು ಅಪ್ಲಿಕೇಶನ್ ಸಿಗಲಿ ಎಂಬುದಾಗಿದೆ. ಇದಕ್ಕೆಲ್ಲ ಮೌನಸಾಕ್ಷಿಯಾಗಿರುವ ಶಾಲಾ ಆಡಳಿತ ಮಂಡಳಿಯು ಇಂದು ಬೆಳಗ್ಗೆಯಿಂದ ಸಕಾಲದಲ್ಲಿ ಅಪ್ಲಿಕೇಶನ್ ವಿತರಿಸಿದೆ. ಇದು ಒಂದು ಸೆಂಟ್ ಜೋಸೆಫ್ಸ್ ಸ್ಕೂಲ್ ಕಥೆಯಲ್ಲ ಎಲ್ಲ ಸ್ಕೂಲುಗಳ ಕಥೆಯಾಯಾಗಿದೆ. ಸರಕಾರವೂ ಅಷ್ಟೇ ಎಂದಿನಂತೆ ಕಣ್ಮುಚ್ಚಿ ಕುಳಿತಿದೆ.
ಇಷ್ಟಕ್ಕೂ ಸೆಂಟ್ ಜೋಸೆಫ್ಸ್ ಸ್ಕೂಲ್ ತೆಗೆದುಕೊಳ್ಳುವುದು 250 ಮಕ್ಕಳನ್ನು ಮಾತ್ರ. ಆದರೆ ಸುಮಾರು 2,000 ಅಪ್ಲಿಕೇಶನುಗಳು ಬಿಕರಿಯಾಗಿವೆ.












Click it and Unblock the Notifications