ಥಾಣೆಯಲ್ಲಿ ಲಾಡೆನ್ ನಗರ, ಛೋಟಾ ಪಾಕ್ ಇದೆಯಂತೆ

ಹಾಗಂತ ಇದು ನಿಜ ಅಲ್ಲ. ಇನ್ನು ಇಲ್ಲಿರುವವರಿಗೂ ಭಯೋತ್ಪಾದಕ ಒಸಾಮಾ ಬಿನ್ ಲಾಡೆನ್ ಗೂ ಅಥವಾ ಕರ್ಮಠ ಮನಸ್ಸಿನ ಪಾಕಿಸ್ತಾನಕ್ಕೂ ಯಾವುದೇ ಲಿಂಕೂ ಇಲ್ಲ. ಆದರೂ ವಿದ್ಯುತ್ ಮಂಡಳಿಗೆ ಏನನ್ನಿಸುತ್ತೋ ಏನೋ ಇಲ್ಲಿನ ಕೊಳೆಗೇರಿಗಳನ್ನು ಹೀಗೆ ಗುರುತಿಸುತ್ತಾ ಬಂದಿದೆ!
ಅಧಿಕೃತವಾಗಿ, ಥಾಣೆ ಪುರದ ಜವಾಬ್ದಾರಿ ಹೊತ್ತ ಮುನ್ಸಿಪಾಲಿಟಿಯವರು ಈ ಪ್ರದೇಶಗಳನ್ನು ನಲ್ಲಾಸೊಪರ ಮತ್ತು ಲಕ್ಷ್ಮಿನಗರ ಎಂದು ಗುರುತಿಸಿ ಯಾವುದೋ ಕಾಲವಾಗಿದೆ. ಆದರೂ ವಿದ್ಯುತ್ ಮಂಡಳಿ ತನ್ನ ಕುಚೇಷ್ಟೆ ಮೆರೆದಿದೆ. ಅಷ್ಟೇ ಅಲ್ಲ ಇಲ್ಲಿನ ಜನ ಮಂಡಳಿಯ ಬಾಗಿಲಿಗೆ ಹೋದರೆ 'ಓ! ಲಾಡೆನ್ ಬಂದಾ' ಎಂದು ಉದ್ಘರಿಸುತ್ತಾರೆ.
ಆರಂಭದಲ್ಲಿ ಇಲ್ಲಿನ ಜನರೂ ಇದನ್ನು ಗಂಭಿರವಾಗಿ ತೆಗೆದುಕೊಳ್ಳಲಿಲ್ಲ. ಆದರೆ ಇತ್ತೀಚೆಗೆ ಇದು ಅತಿಯಾಗಿದೆ. ಇಲ್ಲಿನ ಜನರೆಲ್ಲರನ್ನು ಲಾಡೆನ್ ಹೆಸರಿನಲ್ಲಿ ಅವಮಾನಿಸುವುದು ಜಾಸ್ತಿಯಾಗಿದೆ. ಸ್ಥಳೀಯ ಪೊಲೀಸರಿಗೆ ದೂರೂ ನೀಡಲಾಗಿದೆ. ಜತೆಗೆ ಸ್ಥಳೀಯ ಕಾರ್ಪೊರೇಟರ್ ಛಾಯಾ ಪಾಟೀಲ್ ಮೂಲಕ ವಿದ್ಯುತ್ ಮಂಡಳಿಯನ್ನು ತರಾಟೆಗೆ ತೆಗೆದುಕೊಳ್ಳಲಾಗಿದೆ.
ಹೊಣೆಗೇಡಿ ಅಧಿಕಾರಿಗಳು ಮುಂದೆ ಇಂತಹ ತಪ್ಪು ಮಾಡುವುದಿಲ್ಲ. ವಿದ್ಯುತ್ ಬಿಲ್ಲುಗಳಲ್ಲಿ ಆ ಹೆಸರುಗಳನ್ನು ನಮೂದಿಸುವುದಿಲ್ಲ. ಕ್ಷಮಿಸಿ ಎಂದಿದ್ದಾರಂತೆ. ಆದರೆ 'ಈ ಹಿಂದೆಯೂ ಈ ಬೇಜವಾಬ್ದಾರಿ ಜನ ಹೀಗೇ ಹೇಳಿದ್ದರು' ಎಂದು ಸ್ಥಳೀಯರು ಅಲವತ್ತುಕೊಂಡಿದ್ದಾರೆ.












Click it and Unblock the Notifications